ಎಬಿವಿಪಿ ಮೂಲಕ ದಿಲ್ಲಿ ವಿವಿ ವಿದ್ಯಾರ್ಥಿ ಸಂಘದ ನಾಯಕರಾಗಿದ್ದ ಜೇಟ್ಲಿ “ಜೆಪಿ” ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು. ತುರ್ತು ಪರಿಸ್ಥಿತಿಯನ್ನು ಪ್ರಬಲವಾಗಿ ವಿರೋಧಿಸಿದ ಪರಿಣಾಮ 19 ತಿಂಗಳ ಕಾಲ ತಿಹಾರ್ ಜೈಲಿನಲ್ಲಿ ಜೇಟ್ಲಿ ಜೈಲುವಾಸ ಅನುಭವಿಸಿದ್ದರು. 1977ರ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುವ ಮೂಲಕ ಕಾಂಗ್ರೆಸ್ ಸೋಲಿಗೂ ಕಾರಣೀಭೂತರಾಗಿದ್ದರು. ಆಗ ಜನತಾ ಪಕ್ಷ ಅಧಿಕಾರಕ್ಕೇರಿತ್ತು. ದೆಹಲಿ ಹೈಕೋರ್ಟ್, ಸುಪ್ರೀಂಕೋರ್ಟ್ ವಕೀಲರಾಗಿ ಬೋಪೋರ್ಸ್ ನಂತಹ ಪ್ರಮುಖ ಪ್ರಕರಣಗಳಲ್ಲಿ ವಾದಿಸಿದ್ದರು. 1990ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದ ಜೇಟ್ಲಿ 1999ರಲ್ಲಿ ಪ್ರಧಾನಿ ವಾಜಪೇಯಿ ಸರಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು. ಬಳಿಕ ಹಣಕಾಸು ಸಚಿವರಾಗಿ, ರಕ್ಷಣಾ ಸಚಿವಾಲಯ, ಕಾರ್ಪೋರೇಟ್ ವ್ಯವಹಾರಗಳ ಪ್ರಮುಖ ಸಚಿವಾಲಯದ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಧೀಮಂತ ರಾಜಕಾರಣಿ ಜೇಟ್ಲಿ. ಇಂದು ಏಮ್ಸ್ ಆಸ್ಪತ್ರೆಯಲ್ಲಿ ಅಸ್ತಂಗತರಾಗಿರುವ ಜೇಟ್ಲಿಗೆ ಅಕ್ಷರ ನುಡಿನಮನ.