ಕಲಬುರಗಿ: ಬರಗಾಲ ಬಿದ್ದು ಇಡೀ ರಾಜ್ಯದ ರೈತರು ಗೋಳಾಡಿದರೂ ಬಾರದ ಮತ್ತು ಮಾನವೀಯತೆಯಿಂದಾದರೂ ನಮ್ಮ ಪಾಲಿನ ಪರಿಹಾರ ಹಣ ನೀಡಲು ಹಿಂದೂ- ಮುಂದೂ ನೋಡಿದ್ದ ಪ್ರಧಾನಿ ಮೋದಿ ಅವರು ಈಗ್ಯಾಕೆ ಬರುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರಶ್ನಿಸಿದರು.
ನಗರದ ವಿಮಾನ ನಿಲ್ದಾಣ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಿರುವುದರಿಂದ ಓಡೋಡಿ ಬರುತ್ತಿದ್ದಾರೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದ್ರೆ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂಬ ಯತೀಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ಯತಿಂದ್ರ ಹೇಳಿಕೆ ವೈಯಕ್ತಿಕ. ನಮ್ಮಲ್ಲಿ ಯಾರೂ ಎಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಹೈಕಮಾಂಡ್ ಮನಸ್ಸು ಮಾಡಿದರೆ ಈ ಐದು ವರ್ಷ ಅಲ್ಲ ಮುಂದಿನ ಐದು ಕೂಡಾ ಆಗಿರಬಹುದು ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಬಯಸಿದರೆ ಮುಂದಿನ ಎರಡೂ ವರ್ಷ ಅಲ್ಲ ಐದು ವರ್ಷವೂ ಅಗಿರಬಹುದು ಎಂದರು.
ಅನಂತಕುಮಾರ ಹೆಗಡೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅನಂತ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಕಷ್ಟ. ಆದ್ದರಿಂದ ಹೀಗೆ ಗಂಟಲು ಶೂಲೆ ಮಾಡಿಕೊಂಡು ಕೂಗಾಡಿದರೆ, ಅವರಿವರ ವಿರುದ್ಧ ಆರೋಪಗಳನ್ನು ಮಾಡಿ ತಮ್ಮ ಮುಖಬೆಲೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಸಿದ್ಧರಾಮಯ್ಯ ಅವರ ಕುರಿತು ಏಕ ವಚನದಲ್ಲಿ ಮಾತನಾಡಿರುವುದು ಆ ವ್ಯಕ್ತಿಯ ಸಂಸ್ಕೃತಿ ತೋರುತ್ತದೆ ಎಂದರು.
ಸದ್ಯಕ್ಕೆ ಅಯೋಧ್ಯೆಗೆ ಹೋಗಲ್ಲ:
ಸದ್ಯಕ್ಕೆ ಅಯೋಧ್ಯೆಗೆ ಹೋಗೋ ವಿಚಾರ ಇಲ್ಲ. ಆ ಕುರಿತು ನಮ್ಮ ಪಕ್ಷದ ನಿಲುವು ಪಾಲಿಸುತ್ತೇವೆ ಎಂದ ಅವರು, ನಾನೇ ಲಕ್ಷ್ಮಣ ಹೀಗಾಗಿ ಸದ್ಯಕ್ಕೆ ಅಲ್ಲಿಗೆ ಹೋಗೋ ವಿಚಾರ ಮಾಡಿಲ್ಲ. ಅಣ್ಣ ತಮ್ಮ ಒಂದಾಗೋದು ಬಂದಾಗ ನೋಡೋಣ ಎಂದು ನಕ್ಕರು.