ಕೋಲ್ಕತ್ತಾ: ಭಾರತದ ಡೇವಿಸ್ ಕಪ್ ನಾಯಕನಾಗಿ ಯುವ ಲಿಯಾಂಡರ್ ಪೇಸ್‌ಗೆ ಮಾರ್ಗದರ್ಶಕರಾಗಿದ್ದ ನರೇಶ್ ಕುಮಾರ್(93) ಅವರು ಬುಧವಾರ (ಸೆ .14)ನಿಧನರಾಗಿದ್ದಾರೆ.
ಡಿಸೆಂಬರ್ 22, 1928 ರಂದು ಲಾಹೋರ್‌ನಲ್ಲಿ ಜನಿಸಿದ ಕುಮಾರ್, 1949 ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಟೆನಿಸ್‌ನೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು, 1950 ರ ದಶಕದಲ್ಲಿ ರಾಮನಾಥನ್ ಕೃಷ್ಣನ್ ಅವರೊಂದಿಗೆ ಸುಮಾರು ಒಂದು ದಶಕದ ಕಾಲ ಭಾರತೀಯ ಟೆನಿಸ್ ಅನ್ನು ಆಳಿದರು.
1952ರಲ್ಲಿ ಡೇವಿಸ್ ಕಪ್ ತಂಡವನ್ನು ಪ್ರವೇಶಿ ನಾಯಕರಾದರು. ಮೂರು ವರ್ಷಗಳ ನಂತರ ಅವರು 1955ರ ವಿಂಬಲ್ಡನ್ ಪಂದ್ಯಾವಳಿಯ 4ನೇ ಸುತ್ತು ತಲುಪಿದ್ದು ಅವರ ಅದ್ಭುತ ಸಾಧನೆ.ಅಂದಿನ ಚಾಂಪಿಯನ್ ಅಮೆರಿಕದ ನಂಬರ್ 1 ಆಟಗಾರ ಟೋನಿ ಟ್ರಾಬರ್ಟ್ ಗೆ ಶರಣಾಗಿದ್ದರು.
ನರೇಶ್ ಕುಮಾರ್ ಅವರು 101 ವಿಂಬಲ್ಡನ್ ಪಂದ್ಯಗಳನ್ನು ಆಡಿದ ದಾಖಲೆಯಾಗಿದೆ. ಅವರು ತಮ್ಮ ವೃತ್ತಿಜೀವನದಲ್ಲಿ ಐದು ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದರು. ಐರಿಷ್ ಚಾಂಪಿಯನ್‌ಶಿಪ್‌ಗಳು (1952 ಮತ್ತು 1953), ವೆಲ್ಷ್ ಚಾಂಪಿಯನ್‌ಶಿಪ್‌ಗಳು (1952), ಫ್ರಿಂಟನ್ ಆನ್ ಸೀ (1957) ನಲ್ಲಿ ಎಸ್ಸೆಕ್ಸ್ ಚಾಂಪಿಯನ್‌ಶಿಪ್ ಮತ್ತು 1958 ರಲ್ಲಿ ವೆಂಜ್‌ನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.
1969 ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಅಂತಿಮ ಪಂದ್ಯಾವಳಿಯನ್ನು ಆಡಿದರು.
1990ರಲ್ಲಿ, ಕುಮಾರ್ ಅವರು ಜಪಾನ್ ವಿರುದ್ಧದ ಪಂದ್ಯದಲ್ಲಿ ಡೇವಿಸ್ ಕಪ್ ತಂಡದಲ್ಲಿ 16 ವರ್ಷದ ಲಿಯಾಂಡರ್ ಪೇಸ್ ಅವರನ್ನು ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು
ಅರ್ಜುನ ಪ್ರಶಸ್ತಿಗೆ ಭಾಜನರಾದ ನರೇಶ್ ಕುಮಾರ್ ಅವರು 2000 ರಲ್ಲಿ ದ್ರೋಣಾಚಾರ್ಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಟೆನಿಸ್ ತರಬೇತುದಾರರಾದರು.
ಪತ್ನಿ,ಪುತ್ರ,ಇಬ್ಬರು ಪುತ್ರಿಯರು ಹಾಗೂ ಅಪಾರ ಟೆನಿಸ್ ಅಭಿಮಾನಿಗಳನ್ನು ಅಗಲಿದ್ದಾರೆ.