ಬದುಕು ಎನ್ನುವುದು ಹಲವು ಏರಿಳಿತಗಳ ಪಯಣ. ಒಮ್ಮೆ ಜೀವನದಲ್ಲಿ ಅಧಪತನ ಕಂಡವರು ನಂತರ ಮೇಲೆದ್ದು ಬಂದ ಹಲವು ಉದಾಹರಣೆಗಳಿವೆ. ಅದೇ ರೀತಿ ಯಶಸ್ಸಿನ ತುತ್ತತುದಿ ತಲುಪಿದ್ದವರು ನಂತರ ಕೆಳಗೆ ಬಿದ್ದ ಘಟನೆಗಳು ನಡೆದಿದೆ. ವೇಗದ ಬೌಲರ್ ಮೋಹಿತ್ ಶರ್ಮಾ ಮತ್ತು ಅವರ ಕ್ರಿಕೆಟ್ ವೃತ್ತಿಜೀವನವು ಇದೇ ರೀತಿಯ ಒಂದು ಉದಾಹರಣೆ.
2014ರ ಟಿ20 ವಿಶ್ವಕಪ್ ಹಾಗೂ 2015ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ಕ್ರಿಕೆಟ್ ತಂಡದ ಪರ ಆಡಿದ್ದ ಮೋಹಿತ್ ಶರ್ಮಾ ಇದೀಗ ಈಗ ಗುಜರಾತ್ ಟೈಟಾನ್ಸ್ ತಂಡಕ್ಕೆ ನೆಟ್ ಬೌಲರ್ ಆಗಿದ್ದಾರೆ.
ಹರಿಯಾಣ ಮೂಲದ ವೇಗಿ ಮೋಹಿತ್ ಶರ್ಮಾ ಒಂದು ಕಾಲದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪೇಸ್ ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿದ್ದರು. ಅವರು ಎಂಎಸ್ ಧೋನಿ ಪಾಳಯದ ಪ್ರಮುಖ ಬೌಲರ್ ಆಗಿದ್ದರು. ತನ್ನ ಸ್ಲೋವರ್ ಬೌಲಿಂಗ್ ನಿಂದ ಮಿಂಚಿದ್ದ ಮೋಹಿತ್ ಶರ್ಮಾ 86 ಪಂದ್ಯಗಳಲ್ಲಿ 92 ವಿಕೆಟ್ ಪಡೆದಿದ್ದಾರೆ. 2014ರ ಐಪಿಎಲ್ ನಲ್ಲಿ ಸಿಎಸ್ ಕೆ ಮಿಂಚಿನ ಪ್ರದರ್ಶನ ತೋರಿದ್ದ ಮೋಹಿತ್ ಕೂಟದಲ್ಲಿ 23 ವಿಕೆಟ್ ಪಡೆದಿದ್ದರು. ಆ ಸೀಸನ್ ನಲ್ಲಿ ಪರ್ಪಲ್ ಕ್ಯಾಪ್ ಪಡೆದಿದ್ದರು ಮೋಹಿತ್. ಈ ಪ್ರದರ್ಶನದಿಂದಲೇ ಮೋಹಿತ್ ಶರ್ಮಾ 2014ರ ಟಿ20 ವಿಶ್ವಕಪ್ ಹಾಗೂ 2015ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಆಡಿದ್ದರು.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಲೀಗ್ ನಿಂದ ತಾತ್ಕಾಲಿಕ ಅಮಾನತಾದ ನಂತರ ಮೋಹಿತ್ ಶರ್ಮಾ ಅವರ ವೃತ್ತಿಜೀವನ ಬೇರೆ ತಿರುವು ಪಡೆಯಿತು.
ಮೋಹಿತ್ ನಂತರ ಪಂಜಾಬ್ ಕಿಂಗ್ಸ್ ಗಾಗಿ ಆಡಿದರು ಆದರೆ ಹಿಂದಿನ ರೀತಿಯ ಪ್ರದರ್ಶನಗಳನ್ನು ನೀಡಲು ಸಾಧ್ಯವಾಗಲಿಲ್ಲ. ಪಂಜಾಬ್ ಜೊತೆಗಿನ ಒಂದು ಅವಧಿಯ ನಂತರ, ಮೋಹಿತ್ ಮತ್ತೆ ಸಿಎಸ್ ಕೆ ಗೆ ಮರಳಿದರು. ಆದರೆ ತಮ್ಮನ್ನು ತಾವು ಸಾಬೀತುಪಡಿಸಲು ಸಾಕಷ್ಟು ಅವಕಾಶಗಳನ್ನು ಪಡೆಯಲಿಲ್ಲ. ಚೆನ್ನೈ ಪರ ಕೇವಲ ಒಂದು ಪಂದ್ಯವನ್ನು ಆಡಿದ ಮೋಹಿತ್, ಆ ಪಂದ್ಯದಲ್ಲಿ 27 ರನ್ ನೀಡಿ ಕೇವಲ ಒಂದು ವಿಕೆಟ್ ಕಿತ್ತರು. 2020 ರಲ್ಲಿ ಅವರು ದೆಹಲಿ ಕ್ಯಾಪಿಟಲ್ಸ್ ಪಾಲಾದ ಮೋಹಿತ್ ಶರ್ಮಾಗೆ ಅಲ್ಲೂ ಅವಕಾಶ ಸಿಗಲಿಲ್ಲ. ಅಲ್ಲೂ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಬೇಕಾಯಿತು. ಅಲ್ಲಿ ಅವರ ಸಾಧನೆ 45 ರನ್ ನೀಡಿ ಒಂದು ವಿಕೆಟ್.
ಇದನ್ನೂ ಓದಿ:ಫುಟ್ ಬಾಲ್ ಪಂದ್ಯದ ವೇಳೆ ಕುಸಿದ ಗ್ಯಾಲರಿ: ನೂರಕ್ಕೂ ಅಧಿಕ ಮಂದಿಗೆ ಗಾಯ
2022 ಐಪಿಎಲ್ ಮೆಗಾ ಹರಾಜಿನಲ್ಲಿ ಮೋಹಿತ್ ಶರ್ಮಾಗೆ ಬೇಡಿಕೆಯೇ ಇರಲಿಲ್ಲ. ಹರಾಜಿನಲ್ಲಿ ಮೋಹಿತ್ ಮಾರಾಟವಾಗದೆ ಹೋದರು. ಆದರೆ ಹೊಸ ಪ್ರಾಂಚೈಸಿ ಗುಜರಾತ್ ಟೈಟಾನ್ಸ್ ಗೆ ಮೋಹಿತ್ ಶರ್ಮಾ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
ವೇಗದ ಬೌಲರ್ ತಮ್ಮ ಅಧಿಕೃತ ಇನ್ಟಾಗ್ರಾಮ್ ಖಾತೆಯಲ್ಲಿ ಬರೀಂದರ್ ಸ್ರಾನ್ ಮತ್ತು ಗುರುಕೀರತ್ ಸಿಂಗ್ ಮಾನ್ ಜೊತೆಗೆ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಹೋಳಿ ಆಚರಣೆಯ ಫೋಟೋದಲ್ಲಿ ಮೋಹಿತ್ ಕಾಣಿಸಿಕೊಂಡಿದ್ದಾರೆ. ಗುರುಕೀರತ್ ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾಗಿದ್ದಾರೆ. ಮೋಹಿತ್ ಮತ್ತು ಬರಿದಂರ್ ಸ್ರಾನ್ ಗುಜರಾತ್ ಟೈಟಾನ್ಸ್‌ಗೆ ನೆಟ್ ಬೌಲರ್ ಗಳಾಗಿದ್ದಾರೆ.