Advertisement

ಬಂಡಾಯದ ನೆಲೆಯ ರೈತನ ಪ್ರಯತ್ನಕ್ಕೆ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಮೆಚ್ಚುಗೆ

12:03 PM Jan 04, 2021 | Team Udayavani |

ಗದಗ: ಬಂಡಾಯದ ನೆಲೆ ನರಗುಂದ ತಾಲೂಕಿನ ಪ್ರಗತಿಪರ ರೈತರೊಬ್ಬರು ತಯಾರಿಸಿದ್ದ ಜಲ ವಿದ್ಯುತ್‌ಗಾರದ ಫೋಟೋವನ್ನು ಖ್ಯಾತ ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಇದರಿಂದಾಗಿ ರೈತ ನಿರ್ಮಿಸಿದ್ದ ಜಲವಿದ್ಯುತ್‌ಗಾರದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ನರಗುಂದ ಸಮೀಪದ ಬಂಡೆಮ್ಮ ನಗರ ನಿವಾಸಿ ಸಿದ್ದಪ್ಪ ಹುಲಜೋಗಿ ಎಂಬುವವರು ತಯಾರಿಸಿದ್ದ ಜಲವಿದ್ಯುತ್‌ಗಾರದ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್, ರೈತ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಕೇವಲ 5 ಸಾವಿರ ರೂ. ವೆಚ್ಚ ಮಾಡಿರುವ ರೈತ, 150 ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ವರ್ಷದ ಕೆಲವೇ ತಿಂಗಳು ಹರಿಯುವ ಕಾಲುವೆ ನೀರಿನಿಂದ ರೈತರು ವಿದ್ಯುತ್ ತಯಾರಿಸುವುದಾದರೆ, ವರ್ಷವಿಡೀ ನೀರು ಹರಿದರೆ ಇಡೀ ಗ್ರಾಮಕ್ಕೆ ವಿದ್ಯುತ್ ಪೂರೈಸಬಹುದು. ಹೆಚ್ಚಿನ ಸಂಪನ್ಮೂಲವಿಲ್ಲದೇ, ಗ್ರಾಮೀಣ ಭಾಗದಲ್ಲಿ ಬಹುದೊಡ್ಡ ಬದಲಾವಣೆ ತರಲು ಸಿದ್ದಪ್ಪ ಅವರ ಪ್ರಯತ್ನ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ಗೆದ್ದ-ಸೋತ ಅಭ್ಯರ್ಥಿಗಳ ನೂರಾರು ಬೆಂಬಲಿಗರ ಮಧ್ಯೆ ಹೊಡೆದಾಟ, ವಿಡಿಯೋ ವೈರಲ್

ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ಅವರು ಇದನ್ನು ಟ್ವೀಟ್ ಮಾಡಿದ ಒಂದೇ ದಿನದಲ್ಲಿ ಸುಮಾರು 15 ಸಾವಿರ ಜನರು ಲೈಕ್ ಮಾಡಿದ್ದಾರೆ. ಜೊತೆಗೆ ಸಚಿವ ಸುರೇಶ್‌ಕುಮಾರ್ ಸೇರಿದಂತೆ ಅನೇಕ ಗಣ್ಯರು ಕೂಡಾ ರಿಟ್ವೀಟ್ ಮಾಡಿದ್ದಾರೆ.

Advertisement

ಕ್ರಿಕೆಟಿಗ ಲಕ್ಷ್ಮಣ್ ಅವರು ಟ್ವೀಟ್ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರೈತ ಸಿದ್ದಪ್ಪ ಹುಲಜೋಗಿ, 2011-12 ರಲ್ಲಿ ಜಲ ವಿದ್ಯುತ್‌ಗಾರವನ್ನು ಸಿದ್ಧಪಡಿಸಿ, ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ಪ್ರಯೋಗಿಸಿದ್ದೆವು. ಪ್ಲಾಸ್ಟಿಕ್ ಪುಟ್ಟಿಗಳನ್ನು ಅವಳಡಿಸಿದ್ದ ಚಕ್ರ ತಿರುಗುವುದರಿಂದ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಈ ವಿದ್ಯುತ್‌ನ್ನು ಬಂಡೆಮ್ಮನಗರದ ನಮ್ಮ ತೋಟದ ಮನೆಗೆ ಬಳಕೆ ಮಾಡುತ್ತಿದ್ದೆವು. ಆದರೆ, ಕಾಲುವೆಯಲ್ಲಿ ನೀರಿನ ಕೊರತೆ ಹಾಗೂ ಹೆಸ್ಕಾಂ ಲೈನ್ ಬಂದಿದ್ದರಿಂದ ವಿದ್ಯುತ್ ಉತ್ಪಾದನೆಯನ್ನು ಕೈಬಿಟ್ಟಿದ್ದೇವೆ ಎಂದರು.

ರೈತರು ಹಾಗೂ ಗ್ರಾಮೀಣ ಜನರ ಅನುಕೂಲಕ್ಕಾಗಿ ಇದರಲ್ಲಿ ಮತ್ತಷ್ಟು ಸುಧಾರಣೆ ತಂದು, ಹೊಸ ಮಾದರಿಯಲ್ಲಿ ವಿದ್ಯುತ್ ಉತ್ಪಾದನಾ ಉಪಕರಣಗಳನ್ನು ಆವಿಷ್ಕರಿಸುವುದಾಗಿ ಸಿದ್ದಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next