Advertisement

ದುಷ್ಕರ್ಮಿಗಳಿಂದ ಮಾಜಿ ಸಿಎಂ ಧರಂಸಿಂಗ್‌ ಅವರ ದೂರದ ಸಂಬಂಧಿಯ ಅಪಹರಿಸಿ ಕೊಲೆ

09:21 PM Jan 31, 2021 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್‌ ಅವರ ದೂರದ ಸಂಬಂಧಿಯನ್ನು ದುಷ್ಕರ್ಮಿಗಳು ಅಪಹರಿಸಿ ಆಂಧ್ರಪ್ರದೇಶದ ನಲ್ಲೂರಿನಲ್ಲಿ ಕೊಲೆಗೈದಿರುವ ವಿಚಾರ ಬೆಳಕಿಗೆ ಬಂದಿದೆ.

Advertisement

ಸಿದ್ದಾರ್ಥ್ ದೇವೇಂದರ್‌ ಸಿಂಗ್‌ (28) ಕೊಲೆಯಾದವರು. ಈ ಸಂಬಂಧ ಅನುಮಾನದ ಮೇರೆಗೆ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಿದ್ಧಾರ್ಥ್ ದೇವೇಂದರ್‌ ಸಿಂಗ್‌ ಮಾಜಿ ಸಿಎಂ ಧರಂಸಿಂಗ್‌ ಅವರ ದೂರದ ಸಂಬಂಧಿ ಎಂದು ಪೊಲೀಸರು ಹೇಳಿದರು.

ವಿಚಾರಣೆ ಸಂದರ್ಭದಲ್ಲಿ ಆರೋಪಿ ಕೊಟ್ಟ ಸುಳಿವಿನ ಮೇರೆಗೆ ಅಮೃತಹಳ್ಳಿಯ ಪೊಲೀಸರ ಒಂದು ತಂಡ ಆಂಧ್ರಪ್ರದೇಶದ ತಿರುಪತಿ ಸಮೀಪದಲ್ಲಿರುವ ನಲ್ಲೂರು ಅರಣ್ಯ ಪ್ರದೇಶಕ್ಕೆ ತೆರಳಿದೆ.

ಇದನ್ನೂ ಓದಿ:ಫೆಬ್ರವರಿ 1ರಿಂದ ಸಂಪೂರ್ಣವಾಗಿ ತೆರೆಯಲಿವೆ ಚಿತ್ರಮಂದಿರಗಳು

ಸಿ.ಆರ್‌.ದೇವೇಂದರ್‌ ಅವರ ಪುತ್ರ ಸಿದ್ದಾರ್ಥ್ ಸ್ವಂತ ಉದ್ಯಮ ನಡೆಸುತ್ತಿದ್ದು, ಅಮೃತಹಳ್ಳಿಯ ದಾಸರಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೆ ವಾಸವಾಗಿದ್ದರು. ಜ.19ರಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ತನ್ನ ತಂದೆಗೆ ವಾಟ್ಸ್‌ ಆ್ಯಪ್‌ ಮೂಲಕ “ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಾಕ್ಕೆ ಹೋಗುತ್ತಿರುವುದಾಗಿ’ ತಿಳಿಸಿದ್ದರು.

Advertisement

ಆದರೆ, ಅಮೆರಿಕಾಕ್ಕೂ ಹೋಗದೆ, ವಾಪಸ್‌ ಮನೆಗೂ ಬಂದಿಲ್ಲ. ಅದರಿಂದ ಅನುಮಾನಗೊಂಡು ಆತನಿಗೆ ಕರೆ ಮಾಡಿದಾಗ ಫೋನ್‌ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಆತ ನಾಪತ್ತೆಯಾಗಿರುವುದಾಗಿ ದೇವೇಂದರ್‌ ಅಮೃತ್‌ಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೆಲವೊಂದು ಅನುಮಾನಗಳು ಹುಟ್ಟಿಕೊಂಡಿದ್ದವು. ಜತೆಗೆ ಆತನ ಮೊಬೈಲ್‌ಗೆ ಬಂದಿದ್ದ ಕರೆಗಳ ಸಿಡಿಆರ್‌ ಶೋಧಿಸಿದಾಗ ಆತ ಅಪಹರಣವಾಗಿದ್ದಾನೆ ಎಂಬುದು ಗೊತ್ತಾಗಿದೆ. ಕೂಡಲೇ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅನುಮಾನದ ಮೇರೆಗೆ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆದರೆ, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದರು.

ಕಾರಿನಲ್ಲಿ ಕೊಲೆ
ಮನೆ ಬಳಿಯೇ ಸಿದ್ಧಾರ್ಥ್ನನ್ನು ಅಪಹರಿಸಿದ ಆರೋಪಿಗಳು ಕಾರಿನಲ್ಲಿಯೇ ಹತ್ಯೆಗೈದು ಆಂಧ್ರಪ್ರದೇಶದ ತಿರುಪತಿ ಸಮೀಪದ ನಲ್ಲೂರಿನ ಅರಣ್ಯ ಪ್ರದೇಶದ ಬಳಿ ಶವವನ್ನು ಹೂತು ಹಾಕಿದ್ದಾರೆ. ಸದ್ಯ ಮೃತದೇಹ ಪತ್ತೆಯಾಗಿದ್ದು, ತಹಶೀಲ್ದಾರ್‌ ಸಮ್ಮುಖದಲ್ಲಿ ಮುಂದಿನ ಕಾನೂನು ಪ್ರಕ್ರಿಯೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದರು.

ಹಂತಕರಿಂದಲೇ ವಾಟ್ಸ್‌ ಆ್ಯಪ್‌?
ಸಿದ್ಧಾರ್ಥ್ನನ್ನು ಕೊಲೆಗೈದ ದುಷ್ಕರ್ಮಿಗಳೇ ಆತನ ಮೊಬೈಲ್‌ನಿಂದಲೇ ತಂದೆ ದೇವೇಂದರ್‌ಗೆ ವಾಟ್ಸ್‌ ಆ್ಯಪ್‌ ಮೂಲಕ ಅಮೆರಿಕಾಕ್ಕೆ ತೆರಳುತ್ತಿರುವುದಾಗಿ ಸಂದೇಶ ಕಳುಹಿಸಿರುವ ಸಾಧ್ಯವಿದೆ. ಪ್ರಮುಖ ಆರೋಪಿಗಳ ಬಂಧನ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next