Advertisement

ವಿದಾಯ, ವಿನಮ್ರ, ಗುಣಗಾನ, ಕೃತಜ್ಞತೆ

12:34 AM Feb 25, 2023 | Team Udayavani |

ಬೆಂಗಳೂರು: ನಿತ್ಯ ಕದನಾಂಗಣವಾಗಿದ್ದ ಕಲಾಪದಲ್ಲಿ  ಒಮ್ಮಿಂದೊಮ್ಮೆಗೆ ಆರ್ದ್ರತೆಯ ಭಾವ ಮೂಡಿಬಂತು; ಪರಸ್ಪರ ವಾಗ್ಯುದ್ಧ ನಡೆಸುತ್ತಿದ್ದ ಶಾಸಕರಲ್ಲಿ ಸ್ನೇಹ, ಪ್ರೀತಿಯ ಭಾವ ಮೊಳೆದಿತ್ತು; ಎಲ್ಲರ ಮನ ದಲ್ಲೂ 5 ವರ್ಷಗಳ ನೆನಪಿನ ಮೆರವಣಿಗೆ.

Advertisement

15ನೇ ವಿಧಾನಸಭೆಯ ಕೊನೆಯ ಅಧಿವೇಶನದ ದಿನವಾದ ಶುಕ್ರವಾರ ಸಚಿವರು, ಶಾಸಕರು ಹಿಂದಿನ ನೆನಪುಗಳನ್ನು ಮೆಲಕು ಹಾಕಿದರು. ಅದರಲ್ಲೂ ಮಾಜಿ ಸಿಎಂ ಬಿಎಸ್‌ವೈ ಅವರು, ಚುನಾವಣ ರಾಜಕೀಯಕ್ಕೆ ವಿರಾಮ ಹಾಕಿದ್ದು  ಇಡೀ ಸದನವನ್ನು  ಮತ್ತೊಂದು ಬಗೆಯಲ್ಲಿ ಭಾವಾದ್ರìಗೊಳಿಸಿತ್ತು.

ಎರಡು ಸರಕಾರ, ಮೂರು ಮುಖ್ಯಮಂತ್ರಿ, ಸುಪ್ರೀಂಕೋರ್ಟ್‌ ಕಾಳಗ, ಪಕ್ಷಾಂತರ, ವೈಮನಸ್ಸು.. ಎಲ್ಲವನ್ನೂ ಮರೆತು ಶಾಸಕರ ಮನಸ್ಸುಗಳು ಒಂದಾದ  ಕ್ಷಣ ಅಲ್ಲಿತ್ತು. ಕೆಲವರಂತೂ ಚುನಾವಣೆ ಮುಗಿದ ಮೇಲೆ ಯಾರು ವಾಪಸ್‌ ಬರುತ್ತಾರೆ, ಯಾರು ಬರುವುದಿಲ್ಲ ಎಂಬುದರ ಚರ್ಚೆಯಲ್ಲಿದ್ದರು. ಒಂದು ರೀತಿಯಲ್ಲಿ  “ವಿದಾಯದ ಛಾಯೆ ಆವರಿಸಿತ್ತು.

ರಾಜ್ಯಪಾಲರ ಭಾಷಣದಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ, ಬಜೆಟ್‌ ಮೇಲಿನ ಚರ್ಚೆಯಲ್ಲಿ ನಿತ್ಯ ಆರೋಪ-ಪ್ರತ್ಯಾರೋಪ, ಟೀಕೆ-ಟಿಪ್ಪಣಿ ಗಳೇ ಕೇಳಿಬರುತ್ತಿದ್ದ ಸದನದಲ್ಲಿ ಶುಕ್ರವಾರ ಪ್ರೀತಿ, ಸ್ನೇಹ, ವಿಶ್ವಾಸ, ಆತ್ಮಸಾಕ್ಷಿ ಮಾತುಗಳು ಕೇಳಿಬಂದವರು.  ಎಲ್ಲರೂ ತಮ್ಮನ್ನು ಆರಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಹಲವು ಸದಸ್ಯರು ಪಕ್ಷಾತೀತವಾಗಿ ರಾಜಕೀಯ ವೈರತ್ವ ಮರೆತು ಒಬ್ಬರನ್ನೊಬ್ಬರು ಹಾಡಿ ಹೊಗಳಿದರು.

Advertisement

ಸಿದ್ದು, ಕುಮಾರಸ್ವಾಮಿ ಬಗ್ಗೆ ಮೆಚ್ಚುಗೆ
ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿ , ಬಾಬಾ ಸಾಹೇಬ್‌ ಅಂಬೇಡ್ಕರ್‌  ನೇತೃತ್ವದಲ್ಲಿ ಸಂವಿಧಾನ ರಚನೆ ಮಾಡಿದ ತಂಡದ ಶ್ರಮ ಸ್ಮರಿಸಿಕೊಂಡರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹಿರಿತನ, ಅನುಭವ, ಮಾರ್ಗದರ್ಶನದಿಂದ ಕಲಿತಿರುವು ದಾಗಿಯೂ ಹೇಳಿದರು. ಕುಮಾರಸ್ವಾಮಿ ಅವರು ಜನರ ಸಮಸ್ಯೆ ಸದನದಲ್ಲಿ ಬಿಡಿಸಿಡುವ ಬಗ್ಗೆಯೂ ಮೆಚ್ಚುಗೆ ಸೂಚಿಸಿದರು.

ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಕುವೆಂಪು, ನಿಜಲಿಂಗಪ್ಪ ಅವರ ಮಾತುಗಳು, ಶರಣರ ವಚನ ಪ್ರಸ್ತಾಪಿಸಿ ಪ್ರಜಾಪ್ರಭುತ್ವದ ದೇಗುಲದಲ್ಲಿ ಕೆಲಸ ಮಾಡಲು ದೊರೆತ ಅವಕಾಶಕ್ಕೆ ಧನ್ಯವಾದ ಅರ್ಪಿಸಿದರು. ಎಲ್ಲರೂ ಮತ್ತೆ ಗೆದ್ದು ಬರಬೇಕು. ರಾಜಕಾರಣ ಇದ್ದದ್ದೇ. ಆದರೆ ಜನಸಾಮಾನ್ಯರ ಮನಸ್ಸಿನಲ್ಲಿ ನಾವು ಸ್ಥಾನ ಪಡೆಯುವುದು ಅತಿ ದೊಡ್ಡ ಗೌರವವಾಗಿದೆ. ಸಭಾಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಸದನದ ಘನತೆ ಹೆಚ್ಚಿಸಿದ್ದಾರೆ ಎಂದರು.

ನಾಯಕರ ಸ್ಮರಣೆ
ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ  ಶಾಸಕರಾಗಿ, ಸಚಿವರಾಗಿ ಸದನದಲ್ಲಿ ಕೆಲಸ ಮಾಡಿದ್ದು, ಈ ಅವಧಿಯಲ್ಲಿ ಸ್ಪೀಕರ್‌ ಸ್ಥಾನದಲ್ಲಿ ಕುಳಿತು ಕಾರ್ಯನಿರ್ವಹಿಸಿದ್ದು, ತಮ್ಮ ರಾಜಕೀಯ ಏಳಿಗೆಗೆ ಕಾರಣರಾದ ನಾಯಕರ ಬಗ್ಗೆ ಸ್ಮರಿಸಿಕೊಂಡರು. ಸದನದಲ್ಲಿ ಹಾಜರಿದ್ದ ಸಚಿವರ ಸಹಿತ ಕೆಲವರು ಮಾತನಾಡದಿದ್ದರೂ ಸ್ಪೀಕರ್‌ ಅನುಮತಿ ಪಡೆದು ವಂದಿಸಿ ಮೊದಲೇ ನಿರ್ಗಮಿಸಿದರು. ಒಟ್ಟಾರೆ ಇಡೀ ಸದನದಲ್ಲಿ”ವಿದಾಯ’ದ ಛಾಯೆ ಆವರಿಸಿ ಕೆಲವರು ನಿರ್ಗಮಿಸುವಾಗಿ ಸದನದ ಬಾಗಿಲುಗಳಿಗೆ ನಮಸ್ಕರಿಸಿ ಹೊರಟರು.

ವಿಶೇಷಗಳು

01. ಈ ವಿಧಾನಸಭೆಯ ಮೊದಲ ಸರಕಾರದ ಆಯುಷ್ಯ 4 ದಿನ

02.ಕಾಂಗ್ರೆಸ್‌-ಜೆಡಿಎಸ್‌ನಿಂದ ಸಮ್ಮಿಶ್ರ ಸರಕಾರ ರಚನೆ – 14 ತಿಂಗಳಿಗೇ ಆಯುಷ್ಯ ಅಂತ್ಯ

03. ಮೂವರು ಮುಖ್ಯಮಂತ್ರಿಗಳ ಅಧಿಕಾರ

04.  17 ಶಾಸಕರ ರಾಜೀನಾಮೆ, ಕೆಲವರ ಸಾವಿನಿಂದಾಗಿ 23 ಉಪ ಚುನಾವಣೆ

05.ಇಬ್ಬರು ಸ್ಪೀಕರ್‌. ಮೊದಲು ರಮೇಶ್‌ಕುಮಾರ್‌, ಬಳಿಕ ವಿಶ್ವೇಶ್ವರ ಹೆಗಡೆ ಕಾಗೇರಿ

Advertisement

Udayavani is now on Telegram. Click here to join our channel and stay updated with the latest news.

Next