ಬೆಂಗಳೂರು: ಯಾವ ಪುರುಷಾರ್ಥಕ್ಕೆ ಈ ಕೋರ್ ಕಮಿಟಿಯನ್ನು ಉಳಿಸಿಕೊಂಡಿದ್ದೀರಿ ? ಈ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಕವಡೆಯಷ್ಟಾದರೂ ಕಿಮ್ಮತ್ತು ಇದೆಯೇ ? ಎಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಕೋಪತಾಪ ಪ್ರದರ್ಶನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಘಟನೆ ನಡೆದಿದ್ದು, ಸಮಿತಿಯ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ಕರ್ನಾಟಕವನ್ನು ಕಡೆಗಣಿಸುತ್ತಿರುವ ರಾಷ್ಟ್ರೀಯ ನಾಯಕರ ವರ್ತನೆ ಹಾಗೂ ರಾಜ್ಯ ನಾಯಕರ ಅಸಹಾಯಕತೆ ಬಗ್ಗೆ ಕಿಡಿಕಾರಿದ್ದಾರೆ. ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ವರಿಷ್ಠರ ವಿರುದ್ಧ ಪ್ರಕಟಗೊಂಡ ಒಟ್ಟಾರೆ ತಲ್ಲಣ ಇದಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಘಟಾನುಘಟಿ ನಾಯಕರು ಈ ಅನಿರೀಕ್ಷಿತ ಸ್ಫೋಟದಿಂದ ಕ್ಷಣ ಕಾಲ ಕಕ್ಕಾಬಿಕ್ಕಿಯಾದರು ಎಂದು ತಿಳಿದು ಬಂದಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರನ್ನು ಈ ಮಾಜಿ ಮುಖ್ಯಮಂತ್ರಿ ಮೊದಲು ತರಾಟೆಗೆ ತೆಗೆದುಕೊಳ್ಳುವುದರೊಂದಿಗೆ ಕುದಿಮೌನ ಸ್ಫೋಟಗೊಂಡಿತು ಎಂದು ತಿಳಿದು ಬಂದಿದೆ. “ಪ್ರಹ್ಲಾದ್ ಜೋಷಿಯವರೇ ಸದ್ಯಕ್ಕೆ ನೀವೇ ದಿಲ್ಲಿಯಲ್ಲಿ ನಮ್ಮೆಲ್ಲರ ಪ್ರತಿನಿಧಿ. ಆದರೆ ನೀವು ಏನು ಮಾಡುತ್ತಿದ್ದೀರಿ? ಫಲಿತಾಂಶ ಪ್ರಕಟಗೊಂಡು ನೂರು ದಿನ ಕಳೆದರೂ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರ ನೇಮಕವಾಗಿಲ್ಲ ಎಂದರೆ ಏನರ್ಥ ? ನೋಡಿ ಜನ ನಿಮ್ಮ ಬಗ್ಗೆಯೂ ಮಾತನಾಡಲು ಪ್ರಾರಂಭಿಸಿದ್ದಾರೆ. ದಿ.ಅನಂತಕುಮಾರ್ ಜತೆಗೆ ನಿಮ್ಮನ್ನು ಹೋಲಿಕೆ ಮಾಡುತ್ತಿದ್ದಾರೆ.
ಅನಂತಕುಮಾರ್ ಬದುಕಿದ್ದರೆ ಈ ರೀತಿಯಾಗುತ್ತಿರಲಿಲ್ಲ ಎಂದು ಬಹಿರಂಗವಾಗಿ ನಿಮ್ಮ ಬಗ್ಗೆ ವ್ಯಂಗ್ಯ ಮಾಡುತ್ತಿದ್ದಾರೆ. ಮೊದಲು ದಿಲ್ಲಿ ನಾಯಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಿ ಎಂದು ಎಚ್ಚರಿಕೆ ನೀಡಿದರು ಎನ್ನಲಾಗಿದೆ.
ಇದಾಗುತ್ತಿದ್ದಂತೆ ಇನ್ನಿಬ್ಬರು ಸದಸ್ಯರು ರಾಷ್ಟ್ರೀಯ ನಾಯಕರಿಗೆ ವಾಸ್ತವ ತಿಳಿಸಿ ಎಂದು ಪ್ರಹ್ಲಾದ್ ಜೋಷಿಯವರ ಮೇಲೆ ಒತ್ತಡ ಹೇರಿದರು ಎನ್ನಲಾಗಿದೆ. ಆಗ ಒಂದಿಬ್ಬರು ಹಿರಿಯರು ದಿಲ್ಲಿಗೆ ಬರಲಿ. ನಾವು ವರಿಷ್ಠರನ್ನು ಭೇಟಿ ಮಾಡೋಣ ಎಂಬ ಭರವಸೆಯನ್ನು ಜೋಷಿ ನೀಡಿದರು ಎನ್ನಲಾಗಿದೆ.
ಇಷ್ಟಾದರೂ ಸುಮ್ಮನಾಗದ ಆ ಮಾಜಿ ಮುಖ್ಯಮಂತ್ರಿ “ನಾವು ಏತಕ್ಕಾಗಿ ಈ ಕೋರ್ ಕಮಿಟಿ ಸಭೆ ನಡೆಸಬೇಕು ? ಇದೊಂದು ಕಣ್ಣೊರೆಸುವ ತಂತ್ರ. ಇದು ಅಡಾಕ್ ಸಮಿತಿಯಂತಾಗಿದೆ ನಾವು ಈ ಸಮಿತಿಯಲ್ಲಿ ತೆಗೆದುಕೊಂಡ ಯಾವುದಾದರೂ ನಿರ್ಧಾರ ಜಾರಿಯಾಗಿದೆಯೇ ? ವಿಧಾನ ಪರಿಷತ್, ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡುವಂತೆ ನಾವು ಮಾಡಿದ ಶಿಫಾರಸನ್ನು ಮೇಲಿನವರು ಎಂದಾದರೂ ಒಪ್ಪಿಕೊಂಡಿದ್ದಾರಾ ? ಹಾಗಿದ್ದ ಮೇಲೆ ಈ ಕೋರ್ ಕಮಿಟಿ ಏಕೆ ಬೇಕು ? ಮೊದಲು ವಿಸರ್ಜನೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.