ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅವಕಾಶ ಕೋರಿ ಟಿ.ಜೆ. ಅಬ್ರಹಾಂ ಸಲ್ಲಿಸಿರುವ ಅರ್ಜಿ ರಾಜ್ಯಪಾಲರ ಟೇಬಲ್ ಮೇಲೆ ಇರುವಾಗಲೇ, ಇತ್ತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಭೂಸಂಕಷ್ಟ ಸಂಕಷ್ಟ ಆರಂಭವಾಗಿದೆ.
ಅವರು ಮುಖ್ಯಮಂತ್ರಿಯಾಗಿದ್ದಾಗ ಚಾಣಕ್ಯ ವಿ.ವಿ.ಗೆ ದೇವನಹಳ್ಳಿಯಲ್ಲಿ ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ ಸೇರಿದ್ದ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದು, ಈ ಬಗ್ಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡ ಬೇಕು ಎಂದು ಬುಧವಾರ ರಾಜ್ಯಪಾಲರನ್ನು ಭೇಟಿಯಾಗಿ ಟಿ. ನರಸಿಂಹಮೂರ್ತಿ ಎಂಬವರು ಮನವಿ ಮಾಡಿದ್ದಾರೆ.
ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನಗಳಿಗಾಗಿನ ಕೇಂದ್ರಕ್ಕೆ (ಸಿಇಎಸ್‌ಎಸ್) ಸೇರಿರುವ ಚಾಣಕ್ಯ ವಿ.ವಿ.ಗೆ ಕೆಐಎಡಿಬಿಗೆ ಸೇರಿದ್ದ ಕನಿಷ್ಠ 187 ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದ್ದ 116.17 ಎಕರೆ ಭೂಮಿಯನ್ನು ಬರೀ 50 ಕೋಟಿ ರೂ.ಗೆ ಮಂಜೂರು ಮಾಡಿರುವುದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಪರಾಧವಾಗಿದೆ. ಈ ಬಗ್ಗೆ ಲೋಕಾಯುಕ್ತದಲ್ಲಿ 2022ರ ಸೆಪ್ಟಂಬರ್‌ನಲ್ಲಿ ದಾಖಲಾಗಿರುವ ದೂರಿನ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಬೇಕು ಎಂದು ನರಸಿಂಹಮೂರ್ತಿ ಕೋರಿದ್ದಾರೆ.
ಏನಿದು ಚಾಣಕ್ಯ ವಿ.ವಿ. ಪ್ರಕರಣ?
-ಬಿಎಸ್‌ವೈ ಸಿಎಂ ಆಗಿದ್ದಾಗ ಚಾಣಕ್ಯ ವಿ.ವಿ.ಗೆ ದೇವನ ಹಳ್ಳಿಯಲ್ಲಿ ಕೆಐಎಡಿಬಿ ಜಾಗ ಕಡಿಮೆ ಮೊತ್ತಕ್ಕೆ ಮಂಜೂರು
-ಚಾಣಕ್ಯ ವಿ.ವಿ.ಗೆ 116.17 ಎಕರೆ ಭೂಮಿ ಹಂಚಿಕೆ
-ಜಮೀನಿನ ಮಾರುಕಟ್ಟೆ ಮೌಲ್ಯ 187 ಕೋಟಿ ರೂ.
-ರಾಜ್ಯ ಸರಕಾರ ಪಡೆದಿದ್ದು ಬರೀ 50 ಕೋಟಿ ರೂ.
-ಲೋಕಾಯುಕ್ತದಲ್ಲಿ 2022ರಲ್ಲಿ ಇದರ ವಿರುದ್ಧ ದೂರು