Advertisement

‘ತೇಲಲೀಯದು ಗುಂಡು’: ಅನರ್ಹ ಶಾಸಕರ ಪರಿಸ್ಥಿತಿಗೆ ಹೆಚ್.ಡಿ.ಕೆ. ವಚನ ರೂಪದ ಟಾಂಗ್

09:53 AM Sep 27, 2019 | Team Udayavani |

ಬೆಂಗಳೂರು: ಮಾಜೀ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಶಾಸಕತ್ವ ಅನರ್ಹತೆಗೆ ಒಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 17 ಜನರ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದೂ ಸಹ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಲಿಲ್ಲ. ಇವರಿಗೆಲ್ಲಾ ಸ್ವಲ್ಪ ನಿರಾಳವೆಂಬಂತೆ ಇವರ ರಾಜೀನಾಮೆಯಿಂದ ತೆರವಾಗಿದ್ದ 15 ಸ್ಥಾನಗಳಿಗೆ ನಡೆಯಬೇಕಿದ್ದ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಮತ್ತು ಅನರ್ಹತೆಯನ್ನು ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಕೋರ್ಟ್ ಅಕ್ಟೋಬರ್ 22ಕ್ಕೆ ಮುಂದೂಡಿದೆ.

Advertisement

ಈ ಬೆಳವಣಿಗೆಯ ಬಳಿಕ ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಸವಣ್ಣನವರ ವಚನ ಒಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡು ಅನರ್ಹ ಶಾಸಕರ ಪರಿಸ್ಥಿತಿ ಹೀಗೇ ಇದೆ ಎಂದು ಕುಟುಕಿದ್ದಾರೆ.

‘ಕಾಲಲಿ ಕಟ್ಟಿದ ಗುಂಡು

ಕೊರಳಲಿ ಕಟ್ಟಿದ ಬೆಂಡು

ತೇಲಲೀಯದು ಗುಂಡು

Advertisement

ಮುಳುಗಲೀಯದು ಬೆಂಡು

ಇಂತಪ್ಪ ಸಂಸಾರ ಶರಧಿಯ ದಾಂಟಿಸಿ ಕಾಲಾಂತಕನೇ ಕಾಯೋ ಕೂಡಲ ಸಂಗಮ’

ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು.


ಇಲ್ಲಿ ಬಸವಣ್ಣನವರು ಸಂಸಾರ ಬಂಧನದಲ್ಲಿ ಮುಳುಗಿದವರ ಪಾಡನ್ನು ಗುಂಡು ಮತ್ತು ಬೆಂಡಿನ ಉದಾಹರಣೆಯ ಮೂಲಕ ವರ್ಣಿಸಿದ್ದಾರೆ. ಒಬ್ಬ ವ್ಯಕ್ತಿಯ ಕಾಲಿಗೆ ಕಬ್ಬಿಣದ ಗುಂಡೊಂದನ್ನು ಕಟ್ಟಿ ಕೊರಳಿಗೆ ಬೆಂಡನ್ನು ಕಟ್ಟಿ ನೀರಲ್ಲಿ ಬಿಟ್ಟರೆ ಆತನ ಪರಿಸ್ಥಿತಿ ಅತ್ತ ಮುಳುಗಲೂ ಆಗದೆ ಇತ್ತ ತೇಲಲೂ ಆಗದೆ ತ್ರಿಶಂಕು ಸ್ಥಿತಿ ಉಂಟಾಗುತ್ತದೆ. ಹಾಗೆಯೇ ಸಂಸಾರ ಸಾಗರದಲ್ಲಿ ಬಿದ್ದವರ ಪರಿಸ್ಥಿತಿಯೂ ಹೀಗೆಯೇ ಎಂದು ಬಸವಣ್ಣನವರು ತಮ್ಮ ಈ ವಚನದ ಮೂಲಕ ಮಾರ್ಮಿಕವಾಗಿ ಹೇಳಿದ್ದಾರೆ.

ಇದನ್ನೇ ಅನರ್ಹ ಶಾಸಕರ ಸ್ಥಿತಿಗೆ ಹೋಲಿಸಿರುವ ಕುಮಾರಸ್ವಾಮಿ ಅವರು ಈ 17 ಜನರ ಪರಿಸ್ಥಿತಿ ಕಾಲಲ್ಲಿ ಗುಂಡು ಮತ್ತು ಕೊರಳಲ್ಲಿ ಬೆಂಡು ಕಟ್ಟಿಕೊಂಡವರ ಸ್ಥಿತಿಯಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.

17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆಯಿಂದಾಗಿ ಕೈ-ತೆನೆ ಮೈತ್ರಿ ಸರಕಾರ ಬಹುಮತವನ್ನು ಕಳೆದುಕೊಂಡು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಿತ್ತು. ಮತ್ತು ಬದಲಾದ ರಾಜಕೀಯ ಸನ್ನಿವೇಶದ ಲಾಭ ಪಡೆದುಕೊಂಡ ಭಾರತೀಯ ಜನತಾ ಪಕ್ಷವು ಬಿ.ಎಸ್, ಯಡಿಯೂರಪ್ಪನವರ ನೇತೃತ್ವದಲ್ಲಿ ಸರಳ ಬಹುಮತದ ಸರಕಾರ ರಚನೆ ಮಾಡುವಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next