ನವದೆಹಲಿ:ಸಂತ ಕಬೀರ ನಗರದ ಭಾರತೀಯ ಜನತಾ ಪಕ್ಷದ ಮಾಜಿ ಸಂಸದ ಶರದ್ ತ್ರಿಪಾಠಿ(49ವರ್ಷ) ಗುರುಗ್ರಾಮ್ ಆಸ್ಪತ್ರೆಯಲ್ಲಿ ಬುಧವಾರ (ಜೂನ್ 30) ರಾತ್ರಿ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಉತ್ತರಪ್ರದೇಶದ ಸಂತ ಕಬೀರ್ ನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ತ್ರಿಪಾಠಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಜೀವನ ಶೈಲಿಯಲ್ಲಿ ಬದಲಾವಣೆ ….ನಗು ಎಂಬ ಮನೆಮದ್ದು
ಬಿಜೆಪಿ ಮಾಜಿ ಸಂಸದ ಶರದ್ ತ್ರಿಪಾಠಿ ಅವರ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮಾಜಿ ಸಂಸದ ತ್ರಿಪಾಠಿ ಅವರ ಅಕಾಲಿಕ ನಿಧನದಿಂದ ದುಃಖವಾಗಿರುವುದಾಗಿ ತಿಳಿಸಿದ್ದು, ಅವರು ದೀನ, ದಲಿತರ ಸೇವೆ ಸಲ್ಲಿಸಲು ಇಷ್ಟಪಡುತ್ತಿದ್ದರು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಶರದ್ ತ್ರಿಪಾಠಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಸಂತ ಕಬೀರ್ ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರ ತಂದೆ ರಾಮಪತಿ ರಾಮ್ ತ್ರಿಪಾಠಿ ಡಿಯೋರಿಯಾದ ಹಾಲಿ ಬಿಜೆಪಿ ಸಂಸದರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಶರದ್ ತ್ರಿಪಾಠಿ ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ತ್ರಿಪಾಠಿ ಅವರ ಅಕಾಲಿಕ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ಗಣ್ಯರು ಸಂತಾಪ ಸೂಚಿಸಿದ್ದಾರೆ.