ಬೀದರ್ : ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಜೆಡಿಎಸ್ ತೊರೆದು ಮತ್ತೆ ಬಜೆಪಿ ಸೇರಿದ್ದು, ಪರ-ವಿರೋಧದ ನಡುವೆ ಮರಳಿ ಗೂಡಿಗೆ ಬಂದಿರುವುದು ರಾಜಕೀಯವಾಗಿ ಬಹಳ ಮಹತ್ವ ಪಡೆದಿದೆ.
ಬಸವಕಲ್ಯಾಣದಲ್ಲಿ ರವಿವಾರ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖ ಕಮಲ ಪಾಳಯಕ್ಕೆ ಸೇರ್ಪಡೆಯಾದರು. ಅವರಿಗೆ ಪಕ್ಷದ ಧ್ವಜವನ್ನು ನೀಡಿ ಬಿಜೆಪಿಗೆ ಬರಮಾಡಿಕೊಳ್ಳಲಾಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ ಸೇರಿದಂತೆ ಜಿಲ್ಲೆಯ ನಾಯಕರುಗಳು ಇದ್ದರು.
ಬೀದರ್ ಜಿಲ್ಲೆಯಲ್ಲಿ 1999 ರಿಂದ 2018ರವರೆಗೆ ಬಿಜೆಪಿಯಲ್ಲಿ ಸಕ್ರೀಯರಾಗಿದ್ದ ಖಂಡ್ರೆ ಅವರು, ಪಕ್ಷದಿಂದ ಭಾಲ್ಕಿ ಕ್ಷೇತ್ರದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. 2008, 2013ರಲ್ಲಿ ಭಾಲ್ಕಿ ಮತ್ತು 2016ರಲ್ಲಿ ಬೀದರ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
2018ರಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸತ್ತು ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲುಂಡಿದ್ದರು. ಮೂರು ವರ್ಷಗಳ ಬಳಿಕ ಈಗ ಮತ್ತೆ ತಮ್ಮ ಬೆಂಬಲಿಗರೊಂದಿಗೆ ಕೇಸರಿ ಪಡೆ ಸೇರಿದ್ದಾರೆ.
ಮಾಜಿ ಶಾಸಕ ಖಂಡ್ರೆ ಮತ್ತೆ ಬಿಜೆಪಿ ಸೇರಿರುವುದು ಭಾಲ್ಕಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಇಳಿಯಬಹುದಾ ? ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸಿಎಂ ಯಡಿಯೂರಪ್ಪ ಪರಮಾಪ್ತ ಡಿ.ಕೆ ಸಿದ್ರಾಮ ಅವರಿಗೆ ಟಿಕೆಟ್ ಕೈತಪ್ಪಲಿದೆಯಾ ಎಂಬ ಚರ್ಚೆ ಶುರುವಾಗಿದೆ.