Advertisement

ಸಿದ್ದರಾಮಯ್ಯ ಬೆಂಬಲಿಗರಾಗಿದ್ದ, ಮಾಜಿ ಬಿಬಿಎಂಪಿ ಸದಸ್ಯ ಮಂಜುನಾಥ್ ಬಿಜೆಪಿ ಸೇರ್ಪಡೆ

03:13 PM Feb 18, 2022 | Team Udayavani |

ಬೆಂಗಳೂರು: ಮಲ್ಲೇಶ್ವರದ ಸುಬ್ರಹ್ಮಣ್ಯನಗರ ವಾರ್ಡ್ ನ ಪಾಲಿಕೆ ಮಾಜಿ ಸದಸ್ಯ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಕಟ್ಟಾ ಅನುಯಾಯಿಯಾಗಿದ್ದ ಮಂಜುನಾಥ್ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Advertisement

ಬೆಂಗಳೂರು ನಗರ ಘಟಕದ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರಿಗೆ ಪಕ್ಷದ ಬಾವುಟವನ್ನು ಹಸ್ತಾಂತರಿಸಿ, ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ‌ ನಗರ ಜಿಲ್ಲಾಧ್ಯಕ್ಷ ನಾರಾಯಣಗೌಡ, ಉತ್ತರ ಜಿಲ್ಲೆ ಕಾರ್ಯದರ್ಶಿ ಗಂಗಹನುಮಯ್ಯ, ಮಲ್ಲೇಶ್ವರ ಮಂಡಲ ಅಧ್ಯಕ್ಷ ಕಾವೇರಿ ಕೇದಾರನಾಥ ಸೇರಿದಂತೆ ಇತರ ಪ್ರಮುಖರು ಇದ್ದರು.

ದೇಶದ ಅತ್ಯಂತ ದೊಡ್ಡ ಪಕ್ಷವಾಗಿರುವ ಬಿಜೆಪಿ ವಂಶಪಾರಂಪರ್ಯ ರಾಜಕಾರಣದ ವಿರೋಧಿಯಾಗಿದ್ದು, ಜನರೇ ಇದರ ಮಾಲೀಕರಾಗಿದ್ದಾರೆ. ಪ್ರಜಾಸತ್ತೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ನಮ್ಮ ಪಕ್ಷವು ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಮುನ್ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು. ಇದರ ಅಂಗವಾಗಿ ಬಿಜೆಪಿ ಸೈದ್ಧಾಂತಿಕ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡಿದೆಯೇ ವಿನಾ ವೈಯಕ್ತಿಕ ತೇಜೋವಧೆಯಲ್ಲಲ್ಲ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೂಡ ಒಂದು ಸಂಸ್ಕೃತಿ ಇದೆ ಎನ್ನುವುದನ್ನು ಯಾರೂ ಮರೆಯಬಾರದು. ಪಕ್ಷದ ತತ್ತ್ವ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಬರುವವರು ಇದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.

Advertisement

ರಾಷ್ಟ್ರೀಯ ಮಟ್ಟದಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರಂಥವರು ಪಕ್ಷವನ್ನು ವಿಸ್ತೃತವಾಗಿ ಬೆಳೆಸುತ್ತಿದ್ದಾರೆ. ಇವರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮವಿದ್ದು, ಸದೃಢ ಸಮಾಜವನ್ನು ನಿರ್ಮಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರು ನಮ್ಮ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು ಬಿಜೆಪಿಗೆ ಬರುತ್ತಿರುವುದೇ ಇದರ ಸಂಕೇತವಾಗಿದೆ ಎಂದು ಅವರು ನುಡಿದರು.

ಪಕ್ಷವು ಮೊದಲಿನಿಂದಲೂ ಸಾಮಾಜಿಕ ಸಮತೆಯನ್ನು ಪ್ರತಿಪಾದಿಸಿಕೊಂಡು ಬಂದಿದೆ. ಇಲ್ಲಿ ಯಾವುದೇ ಜಾತೀಯ ತಾರತಮ್ಯವಿಲ್ಲ. ಪಕ್ಷವನ್ನು ರಾಜ್ಯ ಮತ್ತು ದೇಶದ ಮೂಲೆಮೂಲೆಗಳಿಗೂ ಕೊಂಡೊಯ್ಯಬೇಕು ಎನ್ನುವುದೇ ಪಕ್ಷದೊಳಗಿನ ತುಡಿತವಾಗಿದೆ. ಇಲ್ಲಿ ಎಲ್ಲರಿಗೂ ತಕ್ಕ ಮನ್ನಣೆ ಕೊಡುವ ವ್ಯವಸ್ಥೆ ಇದೆ ಎಂದು ಸಚಿವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next