ನವದೆಹಲಿ: ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿರುವುದಾಗಿ ಮುಖ್ಯಮಂತ್ರಿ ಸರ್ಬಾನಂದಾ ಸೊನೊವಾಲ್ ಸೋಮವಾರ(ನವೆಂಬರ್ 23, 2020) ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಗೊಗೊಯಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಗೊಗೊಯಿ ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ದಿಬ್ರುಗಢ್ ನಲ್ಲಿನ ಕಾರ್ಯಕ್ರಮವನ್ನು ಅರ್ಧದಲ್ಲಿಯೇ ರದ್ದುಗೊಳಿಸಿ ಗುವಾಹಟಿಗೆ ವಾಪಸ್ ಆಗಿರುವುದಾಗಿ ಸರ್ಬಾನಂದಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ತರುಣ್ ಗೊಗೊಯಿ ನನಗೆ ಯಾವತ್ತೂ ತಂದೆಯ ಸಮಾನ. ಅವರ ಆರೋಗ್ಯ ಚೇತರಿಗಾಗಿ ಪ್ರಾರ್ಥಿಸುವ ಲಕ್ಷಾಂತರ ಜನರ ಜತೆ ನಾನೂ ಕೂಡಾ ಭಾಗಿಯಾಗುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಹಿರಿಯ ರಾಜಕಾರಣಿ ಗೊಗೊಯಿ ಅವರನ್ನು ಗುವಾಹಟಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದು, ಪರಿಣತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿರುವುದಾಗಿ ಜಿಎಂಸಿಎಚ್ ವೈದ್ಯಾಧಿಕಾರಿ ಅಭಿಜಿತ್ ಶರ್ಮಾ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ದುಬೈ ದೊರೆ 6ನೇ ಪತ್ನಿ; ಅಂಗರಕ್ಷಕನ ಜತೆಗಿನ ಸಂಬಂಧ ಮುಚ್ಚಿಡಲು ಕೋಟ್ಯಂತರ ಹಣ ಪಾವತಿ!
ಮಾಜಿ ಮುಖ್ಯಮಂತ್ರಿ ಗೊಗೊಯಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರು ಸಂಪೂರ್ಣವಾಗಿ ಲೈಫ್ ಸಪೋರ್ಟ್ ನಲ್ಲಿದ್ದು, ಈಗ ದೇವರ ಆಶೀರ್ವಾದ ಮತ್ತು ಜನರ ಪ್ರಾರ್ಥನೆಯ ಅಗತ್ಯವಿದೆ ಎಂದು ಆರೋಗ್ಯ ಸಚಿವ ಹಿಮಂತಾ ಬಿಸ್ವಾ ತಿಳಿಸಿದ್ದಾರೆ.