Advertisement

ಪಿಎಚ್‌ಡಿ ಅಭ್ಯರ್ಥಿ ಮೇಲೆ ನಿಗಾ ವಹಿಸಲು ಸಮಿತಿ ರಚನೆ

11:37 AM May 03, 2017 | Harsha Rao |

ಬೆಂಗಳೂರು: ಪಿಎಚ್‌ಡಿ ಪ್ರವೇಶ ಪ್ರಕ್ರಿಯೆ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮುಂದಾಗಿದೆ. ಜೊತೆಗೆ ಪ್ರೌಢ ಪ್ರಬಂಧ ಮಂಡನೆಗೆ ಸಂಶೋಧನಾ ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ವಿಳಂಬ ಮಾಡುವುದಕ್ಕೂ ಸಹ ಕಡಿವಾಣ ಹಾಕಲು ವಿಟಿಯು ವೇದಿಕೆ ಸಿದ್ಧಪಡಿಸಿದೆ.

Advertisement

ವಿದ್ಯಾರ್ಥಿಗಳು, ಪಿಎಚ್‌ಡಿ ಪ್ರವೇಶ ಪಡೆದ ನಂತರ ಅನಗತ್ಯವಾಗಿ ಪ್ರಬಂಧ ಮಂಡನೆಗೆ ಐದಾರು ವರ್ಷ ಸಮಯ ಪಡೆಯುತ್ತಿರುವ ಪ್ರಕರಣಗಳನ್ನು ತಾಂತ್ರಿಕ ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಿದೆ. ಪ್ರೌಢ ಪ್ರಬಂಧ ಮಂಡನೆ ವಿಳಂಬಕ್ಕೆ ಬ್ರೇಕ್‌ ಹಾಕಲು ಈ ಶೈಕ್ಷಣಿಕ ವರ್ಷದಿಂದ ತಜ್ಞರ ಸಮಿತಿ ರಚಿಸಲು ತೀರ್ಮಾನಿಸಿದೆ. ಆ ಮೂಲಕ ಪಿಎಚ್‌ಡಿ
ಅಧ್ಯಯನದಲ್ಲಿ ಶಿಸ್ತು ಮತ್ತು ಗುಣಮಟ್ಟವನ್ನು ಉನ್ನತೀಕರಿಸುವತ್ತ ವಿಟಿಯು ಹೆಜ್ಜೆ ಹಾಕಿದೆ.

ಪಿಎಚ್‌ಡಿ ಅಧ್ಯಯನಕ್ಕೆ ಪ್ರವೇಶ ಪಡೆದ ಅಭ್ಯರ್ಥಿಗಳು ವಿಷಯಾಧಾರಿತವಾಗಿ ಮೂರೂವರೆ ವರ್ಷದಲ್ಲಿ ಸಂಶೋಧನೆ ನಡೆಸಿ, ಪ್ರೌಢ ಪ್ರಬಂಧ ಮಂಡಿಸಬೇಕು. ಆದರೆ, ಬಹುತೇಕ ವಿದ್ಯಾರ್ಥಿಗಳು ಪ್ರೌಢ ಪ್ರಬಂಧ ಮಂಡನೆಗೆ ಆರೇಳು ವರ್ಷ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಪಿಎಚ್‌ಡಿ ಗುಣಮಟ್ಟದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನದಲ್ಲಿ ಗಂಭೀರತೆ ತರಲು ಪ್ರತ್ಯೇಕ ತಜ್ಞರ ಸಮಿತಿ ರಚಿಸಿ ಪ್ರತಿ ಅಭ್ಯರ್ಥಿಯ ಕಾರ್ಯವೈಖರಿ ಮೇಲೆ ನಿಗವಹಿಸಲಿದೆ.

ಈ ಸಮಿತಿಯಲ್ಲಿ ಸಂಬಂಧಪಟ್ಟ ಎಂಜಿನಿಯರಿಂಗ್‌ ಕಾಲೇಜಿನ ಪಿಎಚ್‌ಡಿ ಮಾರ್ಗದರ್ಶಕರು, ಇಬ್ಬರು ವಿಟಿಯು ಪ್ರತಿನಿಧಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು ಇರುತ್ತಾರೆ. ಪಿಎಚ್‌ಡಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಎಲ್ಲಾ ವಿವರವನ್ನು ಈ ಸಮಿತಿ ಪರಿಶೀಲಿಸಲಿದೆ. ಹಾಗೆಯೇ ಕಾಲಮಿತಿಯೊಳಗೆ ಪಿಎಚ್‌ಡಿ ಪ್ರೌಢ ಪ್ರಬಂಧ ಮಂಡಿಸುವ ಬಗ್ಗೆ ಆಗಾಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರ ನೀಡಿ, ಸಕಾಲದಲ್ಲಿ ಪ್ರೌಢ ಪ್ರಬಂಧ ಮಂಡನೆಯಾಗಿ ಪಿಎಚ್‌ಡಿ ಪದವಿ ದೊರೆಯುವಂತೆ ನೋಡಿಕೊಳ್ಳಲಿದೆ.

ವಿಟಿಯು ಅಧೀನದಲ್ಲಿ ಪ್ರತಿವರ್ಷ 100 ರಿಂದ 150ಕ್ಕೂ ಅಧಿಕ ಅಭ್ಯರ್ಥಿಗಳು ಪಿಎಚ್‌ಡಿ ಪ್ರವೇಶ ಪಡೆಯುತ್ತಾರೆ. ಮಾರ್ಗದರ್ಶಕರು ಎಷ್ಟಿದ್ದಾರೆ ಎನ್ನುವುದರ ಆಧಾರದಲ್ಲಿ ಪಿಎಚ್‌ಡಿ ಪ್ರವೇಶ ನಿರ್ಧಾರವಾಗಲಿದೆ. ವಿಟಿಯು ಅಧೀನದ ಬೆಂಗಳೂರು ವಿಭಾಗದಲ್ಲಿ 104, ಬೆಳಗಾವಿ ವಿಭಾಗದಲ್ಲಿ 30, ಕಲಬುರಗಿ ವಿಭಾಗದಲ್ಲಿ 17 ಹಾಗೂ ಮೈಸೂರು
ವಿಭಾಗದಲ್ಲಿ 60 ಎಂಜಿನಿಯರಿಂಗ್‌ ಕಾಲೇಜು ಮತ್ತು ನಾಲ್ಕೂ ವಿಭಾಗದಲ್ಲಿ ತಲಾ ಒಂದೊಂದು ಸ್ನಾತಕೋತ್ತರ ಕೇಂದ್ರ ಇದೆ.

Advertisement

ಪ್ರತಿ ಎಂಜಿನಿಯರಿಂಗ್‌ ಕಾಲೇಜು ಹೊಂದಿರುವ ಹಿರಿಯ ಪ್ರಾಧ್ಯಾಪಕರ (ಪಿಎಚ್‌ಡಿ ಮಾರ್ಗದರ್ಶಕರು) ಆಧಾರದಲ್ಲಿ ಪಿಎಚ್‌ಡಿ ಅಭ್ಯರ್ಥಿಗಳ ನೋಂದಣಿ ನಡೆಯುತ್ತದೆ. ಲಭ್ಯವಿರುವ ಪಿಎಚ್‌ಡಿ ಸೀಟಿಗಿಂತ ಅಧಿಕ ಅರ್ಜಿ ಬಂದಲ್ಲಿ ಪ್ರವೇಶ ಪರೀಕ್ಷೆ ಕಡ್ಡಾಯವಾಗಿ ಮಾಡಲಾಗುತ್ತದೆ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅಧಿಕ ಅಂಕ ಪಡೆದವರಿಗೆ
ಪಿಎಚ್‌ಡಿ ಸೀಟು ಲಭ್ಯವಾಗುತ್ತದೆ.

ಕೃತಿಚೌರ್ಯಕ್ಕೆ ಕಡಿವಾಣ
ಪಿಎಚ್‌ಡಿಯಲ್ಲಿ ಕೃತಿ ಚೌರ್ಯ ಸಾಮಾನ್ಯವಾಗಿರುತ್ತದೆ. ಅನೇಕ ಅಭ್ಯರ್ಥಿಗಳು ಕನಿಷ್ಠ ಶೇ.10ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕೃತಿಚೌರ್ಯ ಮಾಡುತ್ತಾರೆ ಎನ್ನುವ ಆಪಾದನೆ ಇದೆ. ವಿಟಿಯು ನಿಯಮದ ಪ್ರಕಾರ ಕೃತಿಚೌರ್ಯ ಮಾಡುವಂತೆಯೇ ಇಲ್ಲ. ಇದನ್ನು ತಡೆಗಟ್ಟಲು ವಿಟಿಯು ಪ್ರತ್ಯೇಕ ಸಾಫ್ಟ್ವೇರ್‌ ಅಭಿವೃದ್ಧಿ ಪಡಿಸಿದೆ. ಅಭ್ಯರ್ಥಿಗಳು ಮಂಡಿಸಿರುವ ಪ್ರೌಢ ಪ್ರಬಂಧವನ್ನು ಈ ಸಾಫ್ಟ್ವೇರ್‌ ನಲ್ಲಿ ಅಪ್‌ಲೋಡ್‌ ಮಾಡಿದ ತಕ್ಷಣವೇ, ಕೃತಿಚೌರ್ಯದ ಅಂಶಗಳು
ಬೆಳಕಿಗೆ ಬರುತ್ತದೆ. ವಿಟಿಯು ನಿಯಮ ಮೀರಿ ಕೃತಿಚೌರ್ಯ ಮಾಡಿದ್ದಲ್ಲಿ, ಅಂಥ ಪ್ರೌಢ ಪ್ರಬಂಧವನ್ನು ತಿರಸ್ಕರಿಸಲಾಗುತ್ತದೆ.

ಪಿಎಚ್‌ಡಿ ಮಾರ್ಗದರ್ಶಕರಿಗೂ ನಿರ್ದೇಶನ
ಕಾಲೇಜಿನ ಹಿರಿಯ ಪ್ರಾಧ್ಯಾಪಕ (ಸಿನಿಯರ್‌ ಪ್ರೊಫೆಸರ್‌) ಏಕಕಾಲದಲ್ಲಿ ಗರಿಷ್ಠ 8 ಪಿಎಚ್‌ಡಿ ಅಧ್ಯಯನ ಮಾಡುವ ಅಭ್ಯರ್ಥಿಗೆ ಮಾರ್ಗದರ್ಶನ ಮಾಡಬಹುದು. 8 ಕ್ಕಿಂತ ಅಧಿಕ ಅಭ್ಯರ್ಥಿಯನ್ನು ಮಾರ್ಗದರ್ಶನಕ್ಕೆ ಸೇರಿಸಿಕೊಳ್ಳುವಂತಿಲ್ಲ. ವಿಳಂಬಕ್ಕೆ ಇದೂ ಒಂದು ಕಾರಣ ಎನ್ನುವುದನ್ನು ಅರಿತ ವಿಟಿಯು, ಈ ಸಂಬಂಧ ಸ್ಪಷ್ಟ ಮಾರ್ಗಸೂಚಿಯನ್ನು ಶೀಘ್ರವೇ ಹೊರಡಿಸಲಿದೆ. ಪ್ರಾಧ್ಯಾಪಕರು ಅನುಭವದ ಆಧಾರದಲ್ಲಿ ಪಿಎಚ್‌ಡಿ ಮಾರ್ಗದರ್ಶನ ಮಾಡಬೇಕು. ಈಗಾಗಲೇ 8 ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವವರು ಈ ವರ್ಷ ಹೊಸ ಅಭ್ಯರ್ಥಿಗೆ
ಮಾರ್ಗದರ್ಶನ ನೀಡುವಂತಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next