Advertisement

ನಾಲ್ಕು ರಾಜ್ಯಗಳಲ್ಲಿ ಸ್ಥಿತಿ ಗಂಭೀರ

01:08 PM Apr 25, 2020 | Sriram |

ಹೊಸದಿಲ್ಲಿ: ಕೋವಿಡ್-19 ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಗುಜರಾತ್‌, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿನ ಪರಿಸ್ಥಿತಿಯ ಅಧ್ಯಯನ ನಡೆಸಲು ಕೇಂದ್ರ ಸರಕಾರ ನಾಲ್ಕು ತಂಡಗಳನ್ನು ರಚಿಸಿದೆ.

Advertisement

ಅಂತರ ಸಚಿವಾಲಯ ಮಟ್ಟದ ಅಧಿಕಾರಿಗಳು ಈ ತಂಡಗಳಲ್ಲಿದ್ದಾರೆ. ಒಂದೊಂದು ರಾಜ್ಯಕ್ಕೆ ಒಂದೊಂದು ತಂಡ ಹೋಗಿ ಹಾಲಿ ಸ್ಥಿತಿಗತಿಗಳ ಅಧ್ಯಯನ ನಡೆಸಲಿದೆ.

ಪ್ರತಿಯೊಂದು ತಂಡಕ್ಕೂ ಸಚಿವಾಲಯಗಳ ಮಟ್ಟದ ಹೆಚ್ಚುವರಿ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುತ್ತಾರೆ. ಸದ್ಯದಲ್ಲೇ ಈ ತಂಡಗಳು, ಗುಜರಾತ್‌ ರಾಜಧಾನಿ ಅಹಮದಾಬಾದ್‌, ತೆಲಂಗಾಣ ರಾಜಧಾನಿ ಹೈದರಾಬಾದ್‌, ತಮಿಳುನಾಡು ರಾಜಧಾನಿ ಚೆನ್ನೈಗೆ ತೆರಳಲಿವೆ ಎಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ತಿಳಿಸಿದ್ದಾರೆ.

ಈ ಹೊಸ ನಾಲ್ಕು ತಂಡಗಳು ಈ ಹಿಂದೆ ರಾಜ್ಯಗಳ ಅಧ್ಯಯನಕ್ಕೆ ನೇಮಿಸಲಾಗಿದ್ದ ಆರು ತಂಡಗಳಿಗೆ ಸಹಾಯಕ ತಂಡಗಳಾಗಿ ಕೆಲಸ ಮಾಡಲಿವೆ ಎಂದಿದ್ದಾರೆ.

1 ಲಕ್ಷ ಸೋಂಕಿತರು!: ಭಾರತದಲ್ಲಿ ಲಾಕ್‌ಡೌನ್‌ ಜಾರಿಗೆ ತರದಿದ್ದರೆ ಕೋವಿಡ್-19 ಸೋಂಕಿತರ ಸಂಖ್ಯೆ ಈ ಸಮಯಕ್ಕೆ 1 ಲಕ್ಷದ ಗಡಿ ದಾಟುತ್ತಿತ್ತು ಎಂದು ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪಾಲ್‌ ತಿಳಿಸಿದ್ದಾರೆ.

Advertisement

ಈ ರೀತಿಯ ನಿಯಂತ್ರಣ ಸಾಧಿಸಲು, ಆದಷ್ಟು ಬೇಗನೇ ಲಾಕ್‌ಡೌನ್‌ ಜಾರಿಗೊಳಿ ಸಿರುವುದು, ಸೋಂಕಿತರನ್ನು ತ್ವರಿತವಾಗಿ ಪತ್ತೆ ಹಚ್ಚಿದ್ದು, ಶಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದು ಕಾರಣ ಎಂದು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, “ಮಾ. 21ರ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 3 ದಿನಗಳ ಆಜು ಬಾಜುವಿನಲ್ಲಿ ದ್ವಿಗುಣವಾಗುತ್ತಿತ್ತು. ಆದರೆ, ಹಂತಹಂತವಾಗಿ ದ್ವಿಗುಣಾವಧಿ ಕಡಿಮೆಯಾಗುತ್ತಾ ಬಂತು. ಏ. 6ರ ಹೊತ್ತಿಗೆ ಇದು ಇನ್ನಷ್ಟು ಕಡಿಮೆಯಾಯಿತು. ಲಾಕ್‌ಡೌನ್‌ ಜಾರಿ ಯಾಗಿ ನಾಲ್ಕನೇ ವಾರ ಸಂದಿದೆ. ಈಗ, ಸೋಂಕಿತರು ದ್ವಿಗುಣ ಸಂಖ್ಯೆಗೆ ಏರಲು 8.3 ದಿನಗಳು ಆಗಿರುವುದು ಅಂಕಿ-ಅಂಶಗಳಿಂದ ಗೊತ್ತಾಗಿದೆ ಎಂದಿದ್ದಾರೆ.

ಕೇರಳದಲ್ಲಿ ಕೋವಿಡ್-19 ಕ್ಕೆ ನಾಲ್ಕು ತಿಂಗಳ ಮಗು ಸಾವು
ಕೋವಿಡ್-19ದಿಂದ ನರಳುತ್ತಿದ್ದ ನಾಲ್ಕು ತಿಂಗಳ ಕೂಸು ಶುಕ್ರವಾರ ಕಲ್ಲಿಕೋಟೆಯಲ್ಲಿ ಅಸುನೀಗಿದೆ. ಈ ಪ್ರಕರಣ ಕೇರಳದಲ್ಲಿ ಮೂರನೇಯದ್ದು ಮತ್ತು ಮಗು ಅಸುನೀಗಿದ ಮೊದಲ ಪ್ರಕರಣ. ಎ.21ರಂದು ಮಗುವನ್ನು ಕಫ‌, ಜ್ವರ, ಉಸಿರಾಟ ಕಾರಣದಿಂದ ಕಲ್ಲಿಕೋಟೆಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ಮಗು ಜ್ವರ, ಉಸಿರಾಟದಿಂದ ಬಳಲುತ್ತಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಯ ಸಲಹೆ ಅಲ್ಲಿ ಲಭ್ಯವಾಗದ್ದರಿಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆರಳಲು ಮಗುವಿನ ಹೆತ್ತವರಿಗೆ ಸೂಚಿಸಲಾಗಿತ್ತು. ಮಗುವಿನ ಕುಟುಂಬದವರು ಮಲ್ಲಾಪುರಂನ ಮಂಜೇರಿಯ ಮೂಲದವರಾಗಿದ್ದಾರೆ. ವೈದ್ಯರು ಕೂಡ ಮಗುವನ್ನು ಉಳಿಸಲು ಯತ್ನಿಸಿದರೂ, ಆದರೆ ಫ‌ಲಕಾರಿಯಾಗಲಿಲ್ಲ ಎಂದು ಕೇರಳ ಆರೋಗ್ಯಸಚಿವೆ ಕೆ. ಕೆ. ಶೈಲಜಾ ಹೇಳಿದ್ದಾರೆ.

ಕೋವಿಡ್‌ ವಿರುದ್ಧ ಭಾರತದ ಯುದ್ಧ
ವಿವಿಧ ರಾಷ್ಟ್ರಗಳಲ್ಲಿ 400ನೇ ಪ್ರಕರಣ ದಾಖಲಾದ ಬೆನ್ನಲ್ಲೇ ಪ್ರಕರಣಗಳು ತ್ವರಿತವಾಗಿ ಹೆಚ್ಚಿದೆ. ಆದರೆ, ಭಾರತದಲ್ಲಿ ಹಾಗಾಗಿಲ್ಲ. 400ನೇ ಪ್ರಕರಣ ದಾಖಲಾದ ದಿನದಿಂದ 31ನೇ ದಿನದ ಹೊತ್ತಿಗೆ ಯು.ಕೆ.ಯಲ್ಲಿ ಶೇ. 29.1ರಷ್ಟು ಜನರು ಕೊರೊನಾ ಸೋಂಕಿಗೆ ಈಡಾಗಿದ್ದರೆ, ಇಟಲಿಯಲ್ಲಿ ಶೇ. 21.9ರಷ್ಟು ಹಾಗೂ ಅಮೆರಿಕದಲ್ಲಿ ಶೇ. 19ರಷ್ಟು ಹೊಸ ಸೋಂಕಿತರು ಪತ್ತೆಯಾಗಿದ್ದವು. ಆದರೆ, ಭಾರತದಲ್ಲಿ 400ನೇ ಪ್ರಕರಣ ದಾಖಲಾದ ದಿನದಿಂದ 31ನೇ ದಿನದವರೆಗೆ ಹೆಚ್ಚಾದ ಸೋಂಕಿತರ ಸಂಖ್ಯೆ ಕೇವಲ ಶೇ. 4.5 ಮಾತ್ರ. ಆ ಅವಧಿಯಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 16 ಪಟ್ಟು ಹೆಚ್ಚಾದರೆ, ಶಂಕಿತರನ್ನು ಪರೀಕ್ಷೆಗೊಳಪಡಿಸುವ ಪ್ರಮಾಣ 24 ಪಟ್ಟು ಹೆಚ್ಚಾಗಿತ್ತು.

5 ಲಕ್ಷ ಪರೀಕ್ಷೆ ಸೋಂಕಿತರು
5 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಿದ್ದು ಕೇವಲ 9 ರಾಷ್ಟ್ರಗಳು. ಯು.ಕೆ., ಇಟಲಿ ಹಾಗೂ ಅಮೆರಿಕ ಸರಕಾರಗಳು 5 ಲಕ್ಷ ಜನರಿಗೆ ಪರೀಕ್ಷೆ ನಡೆಸುವ ಹೊತ್ತಿಗೆ ಆ ರಾಷ್ಟ್ರಗಳಲ್ಲಿನ ಪ್ರಕರಣಗಳು ಕ್ರಮವಾಗಿ ಆರು, ಐದು ಹಾಗೂ ನಾಲ್ಕು ಪಟ್ಟು ಹೆಚ್ಚಾಗಿದ್ದವು. ಆದರೆ, ರಷ್ಯಾ, ದಕ್ಷಿಣ ಕೊರಿಯಾದಲ್ಲಿ 5 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸುವಷ್ಟರಲ್ಲಿ ಸೋಂಕಿತರ ಸಂಖ್ಯೆ ತೀರಾ ಕಡಿಮೆ ಇತ್ತು.

ಲಾಕ್‌ ಡೌನ್‌ ತೆರವು ದೊಡ್ಡ ಸವಾಲು
ಈಗಾಗಲೇ ಕೋವಿಡ್-19 ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೇ 3ರವರೆಗೆ ದೇಶವ್ಯಾಪಿ ಲಾಕ್‌ ಡೌನ್‌ ವಿಸ್ತರಿಸಿಯಾಗಿದೆ. ಇನ್ನು ಸರಕಾರದ ಮುಂದಿರುವುದು ಈ ಲಾಕ್‌ಡೌನ್‌ನಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆಯೇ, ನಿರ್ಬಂಧ ತೆರವುಗೊಳಿಸುವುದು ಅನಿವಾರ್ಯವಾಗಿದೆ.

ಅದರೊಂದಿಗೇ ಸೋಂಕು ವ್ಯಾಪಿಸದಂತೆ ತಡೆಯುವ ಸವಾಲೂ ಸರಕಾರದ ಮುಂದಿದೆ. ಲಾಕ್‌ಡೌನ್‌ನಿಂದ ನಿರ್ಗಮನಗೊಳ್ಳಲು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಕೆಲವು ಪ್ರದೇಶ ಗಳಲ್ಲಿ ಮುಂಬೈ ಮತ್ತು ಕೋಲ್ಕತ್ತಾ ಕೂಡ ಒಂದು. ಮುಂಬಯಿನಲ್ಲಿನ 930 ಹಾಟ್‌ಸ್ಪಾಟ್‌ ಪೈಕಿ ಅರ್ಧದಷ್ಟು ಪ್ರದೇಶಗಳು ಕೊಳೆಗೇರಿಗಳಾಗಿವೆ. ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರಾವಿ ಸೇರಿದಂತೆ ಮುಂಬಯಿನಲ್ಲಿರುವ ಅನೇಕ ಕೊಳೆಗೇರಿ ಪ್ರದೇಶಗಳು ಈಗ ಕೋವಿಡ್-19 ಕೆಂಪು ವಲಯಗಳಾಗಿರುವುದು ಸರಕಾರಕ್ಕೂ ದೊಡ್ಡ ತಲೆನೋವು ಉಂಟುಮಾಡಿದೆ. ದೇಶದ ಒಟ್ಟಾರೆ ಸೋಂಕಿತರ ಪೈಕಿ ಶೇ.18ರಷ್ಟು ಮುಂಬಯಿನದ್ದಾಗಿದ್ದರೆ (4,200), ಮಹಾರಾಷ್ಟ್ರದ ಒಟ್ಟು 6,400 ಪ್ರಕರಣಗಳ ಪೈಕಿ ಶೇ.65 ಪ್ರಕರಣ ಮುಂಬಯಿನದ್ದು. ಇಲ್ಲಿ ಕೋವಿಡ್-19 ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕಲು ಹರಸಾಹಸ ಪಡಬೇಕಾಗುತ್ತದೆ.

ಮತ್ತೂಂದು ಸಮಸ್ಯೆಯಿರುವುದು ಪಶ್ಚಿಮ ಬಂಗಾಲದ ಕೋಲ್ಕತ್ತಾದ್ದು. ಇಲ್ಲಿ ಏನೇ ಘಟನೆ ನಡೆದರೂ ಅದಕ್ಕೆ ರಾಜಕೀಯ ಬಣ್ಣ ಬಳಿಯಲಾಗುತ್ತದೆ. ಇಲ್ಲಿನ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರವು, ಮಾ.8ರಂದು ರಾಜ್ಯದಲ್ಲಿ ಮೊದಲ ಪ್ರಕರಣ ಪತ್ತೆಯಾಗಿರುವ ಕಾರಣ, ಕೋವಿಡ್-19 ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿಲ್ಲ ಎಂದು ಹೇಳುತ್ತಿದೆ. ಆದರೆ, ಇಲ್ಲಿ ಹೆಚ್ಚಿನ ಜನರನ್ನು ಪರೀಕ್ಷೆಗೇ ಒಳಪಡಿಸಿಲ್ಲ ಎನ್ನುತ್ತದೆ ಮತ್ತೂಂದು ವರದಿ. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ಕೇಂದ್ರ ಸರಕಾರವು ಲಾಕ್‌ ಡೌನ್‌ ತೆರವು ಕುರಿತು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಜತೆಗೆ, ಇತ್ತೀಚೆಗೆ ರೋಗಲಕ್ಷಣ ಇಲ್ಲದವರಿಗೂ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ, ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಪರೀಕ್ಷೆ ನಡೆಸುವ ಸಾಮರ್ಥ್ಯದ ಮೇಲೆಯೇ ಲಾಕ್‌ ಡೌನ್‌ ನಿರ್ಗಮನ ಯೋಜನೆ ಅವಲಂಬಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next