Advertisement
ಈ ನಡುವೆ ಕ್ಷೇತ್ರವನ್ನು ಪ್ರಾಧಿಕಾರ ವ್ಯಾಪ್ತಿಗೆ ಒಳಪಡಿಸುವ ಪ್ರಸ್ತಾವಗಳು ಗರಿಗೆದರಿದ್ದು, ಮಲೆಮಹದೇಶ್ವರ ಮಾದರಿಯಲ್ಲಿ ಇಲ್ಲಿ ಪ್ರಾಧಿಕಾರ ರಚನೆಗೆ ಪ್ರಕ್ರಿಯೆಗಳು ಆರಂಭಗೊಂಡಿವೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ವ್ಯಾಪ್ತಿಯನ್ನು ಅಧಿಸೂಚಿತ ಪ್ರದೇಶವೆಂದು ಘೋಷಿಸಿ ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಕುರಿತು ಪ್ರಸ್ತಾವನೆ 2008ರಲ್ಲಿ ಆಗಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿದ್ದ ದಿ| ವೆಂಕಟರಮಣ ಭಟ್ ಅವರ ಅವಧಿಯಲ್ಲಿ ಪ್ರಸ್ತಾವಕ್ಕೆ ಬಂದಿತ್ತು. ಅವರ ಅಧಿಕಾರ ಅವಧಿಯಲ್ಲಿ ಇದರ ಕುರಿತು ಎರಡು ಬಾರಿ ಸಭೆ ನಡೆದಿತ್ತು. 2012ರಲ್ಲಿ ಪ್ರಕ್ರಿಯೆಗೆ ವೇಗ ದೊರಕಿತ್ತು. ರಾಜ್ಯ ಧಾರ್ಮಿಕ ಪರಿಷತ್, ಆಡಳಿತ ಸಮಿತಿ ಸಭೆ, ಮಾಸ್ಟರ್ ಪ್ಲಾನ್ ಸಮಿತಿಗಳಲ್ಲಿ ಚರ್ಚೆ ನಡೆದಿತ್ತು.
Related Articles
2017ರ ಜು. 28ರಂದು ಸಹಾಯಕ ಆಯುಕ್ತರ ಕಚೇರಿಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರ, ಇಒ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಕುರಿತು ಪರಿಶೀಲನೆ ನಡೆಸಿ ವ್ಯವಸ್ಥಾಪನ ಸಮಿತಿಯ ಅಭಿಪ್ರಾಯ ದೊಂದಿಗೆ ಮಾಹಿತಿ ನೀಡುವಂತೆ ಡಿಸಿ ಸೂಚಿ ಸಿದ್ದರು.
Advertisement
ಕರಡು ಪ್ರತಿ ರವಾನೆ2019ರ ಫೆ. 22ರಂದು ನಡೆದ ದೇಗುಲದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಈ ವಿಚಾರ ಮಂಡನೆಯಾಗಿತ್ತು. ಪ್ರಾಧಿಕಾರ ರಚಿಸುವ ಕುರಿತು ಸಾಧಕ- ಬಾಧಕ ಚರ್ಚೆ ನಡೆದು ಸಭೆಯಲ್ಲಿ ಸಿದ್ಧಪಡಿಸಿದ ನಿರ್ಣಯದ ಕರಡು ಪ್ರತಿಯನ್ನು ಅನುಮೋದನೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿತ್ತು. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಮಾದರಿಯಲ್ಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಕರಡು ಪ್ರತಿಯಲ್ಲಿ ತಿಳಿಸಲಾಗಿತ್ತು. ಸಚಿವರ ಗಮನಕ್ಕೆ
ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮುಜರಾಯಿ ಖಾತೆ, ಉಸ್ತುವಾರಿ ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಇದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಪ್ರಾಧಿಕಾರ ರಚಿಸಲು ಸಚಿವರು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕುಕ್ಕೆ ಪ್ರಾಧಿಕಾರ ರಚಿಸುವ ಕುರಿತು ಅಪರ ಜಿಲ್ಲಾಧಿಕಾರಿ ಸಚಿವರ ಗಮನ ಸೆಳೆದಿದ್ದರು. ಸಚಿವರೂ ಇಂಗಿತ ವ್ಯಕ್ತಪಡಿಸಿದ್ದರು. ಜಾಗೃತ ಸಮಿತಿ ರಚನೆ
ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯನ್ನು ಅಧಿಸೂಚಿತ ಪ್ರದೇಶವೆಂದು ಘೋಷಿಸಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಕುರಿತು ಈ ಹಿಂದೆ ಪ್ರಸ್ತಾವವಾದಾಗ ಅದರ ಸಾಧಕ- ಬಾಧಕ ತಿಳಿಯಲು ವಿಶೇಷ ಗ್ರಾಮಸಭೆ ಸುಬ್ರಹ್ಮಣ್ಯದಲ್ಲಿ ನಡೆದಿತ್ತು. ಪ್ರಾಧಿಕಾರ ರಚನೆಯಾದರೆ ಗ್ರಾಮಸ್ಥರಿಗೆ ತೊಂದರೆ, ಭೂಮಿ ಮಾರಾಟವಾಗಲ್ಲ, ದೇಗುಲದ ತೆರಿಗೆ ವಿನಾಯಿತಿ ಪಡೆಯಲು ಪ್ರಾಧಿಕಾರ ರಚಿಸಲಾಗುತ್ತಿದೆ ಎಂದು ಅದಕ್ಕೆ ತಡೆಯೊಡ್ಡಲು ಸಭೆ ನಿರ್ಧರಿಸಿತ್ತು. ಜಾಗೃತಿ ಸಮಿತಿ ರಚನೆಯಾಗಿತ್ತು. ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ ಜಾಗೃತ ಸಮಿತಿ ಅಧ್ಯಕ್ಷರಾಗಿದ್ದರು. ಸರಕಾರ ಮಟ್ಟದಲ್ಲಿ ಪ್ರಾಧಿಕಾರ ರಚನೆ ತಡೆಗೆ ನಿರ್ಧರಿಸಲಾಗಿತ್ತು. ಹಸ್ತಕ್ಷೇಪಕ್ಕೆ ಕಡಿವಾಣ?
ಪ್ರಾಧಿಕಾರ ರಚನೆಯಾದಲ್ಲಿ ಸರಕಾರದ ಅನುದಾನ ನೇರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತದೆ. ಅಭಿವೃದ್ಧಿಗೆ ವೇಗ ಸಿಗುತ್ತದೆ. ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಸರಕಾರದ ನಾಮನಿರ್ದೇಶಿತರು. ಇಲಾಖೆಗಳ ಕಾರ್ಯದರ್ಶಿಗಳು ಸಮಿತಿಯಲ್ಲಿರುತ್ತಾರೆ. ಕೆಎಎಸ್ ಅಧಿಕಾರಿ ನೇಮಕವಾಗುತ್ತಾರೆ. ಆಡಳಿತಾತ್ಮಕ ನಿರ್ಧಾರ ಸುಲಭವಾಗುತ್ತದೆ. ಕ್ಷೇತ್ರದಲ್ಲಿ ಗೊಂದಲ, ಅಹಿತಕರ ಘಟನೆಗಳಿಗೂ ತೆರೆ ಬೀಳುತ್ತದೆ. ಹೊರಗಿನ ಹಸ್ತಕ್ಷೇಪಕ್ಕೂ ಅವಕಾಶವಿರುವುದಿಲ್ಲ. ಮಾದರಿ ನಕಾಶೆ ಹೀಗಿದೆ
ಪ್ರಾಧಿಕಾರ ರಚನೆಗೆ ಸಂಬಂಧಿಸಿ ಸಿದ್ಧಪಡಿಸಿದ ಮಾದರಿ ನಕಾಶೆ ಪ್ರಕಾರ ಕ್ಷೇತ್ರದ ಕೇಂದ್ರ ಸ್ಥಳದಿಂದ ಸುತ್ತಮುತ್ತಲ 2 ಕಿ.ಮೀ. ವ್ಯಾಪ್ತಿ ಇರುತ್ತದೆ. ದೇಗುಲದ ಕೇಂದ್ರ ಸ್ಥಾನದಿಂದ ದೇವರಗದ್ದೆ ಮಾನಾಡು ಭಾಗ, ಜಾಲೂÕರು ಸುಬ್ರಹ್ಮಣ್ಯ ರಸ್ತೆ ಭಾಗ, ಸುಬ್ರಹ್ಮಣ್ಯ-ಮಂಜೇಶ್ವರ ಭಾಗ, ಕುಮಾರಧಾರಾ-ಗುಂಡ್ಯ-ಉಪ್ಪಿನಂಗಡಿ ರಾ.ಹೆ ಭಾಗ, ಆದಿಸುಬ್ರಹ್ಮಣ್ಯ- ನೂಚಿಲ ರಸ್ತೆ ಈ ಭಾಗಗಳಿಗೆ ತಲಾ 2 ಕಿ.ಮೀ. ವ್ಯಾಪ್ತಿ ಹೊಂದಿರುತ್ತದೆ. ಪರಿಶೀಲನೆಯಲ್ಲಿದೆ
ಕುಕ್ಕೆಯಲ್ಲಿ ಅಭಿವ್ರದ್ಧಿ ಪ್ರಾಧಿಕಾರ ರಚನೆ ಪ್ರಸ್ತಾವ ಹಿಂದಿನಿಂದಲೂ ಇದೆ. ಇದು ಅಭಿವೃದ್ಧಿಗೆ ಪೂರಕ. ಈಗ ಅದು ಸರಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಚರ್ಚಿಸಿ ಮುಂದೆ ಅದರ ಕುರಿತು ಪ್ರತಿಕ್ರಿಯಿಸುತ್ತೇನೆ.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ -ಬಾಲಕೃಷ್ಣ ಭೀಮಗುಳಿ