Advertisement

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ

06:57 PM Jul 01, 2021 | Team Udayavani |

ಕಲಬುರಗಿ: ಕಲಾವಿದರ ನಡುವಿನ ತಾರತಮ್ಯ ನೀತಿ ನಿವಾರಣೆ ಮತ್ತು ಸ್ಥಳೀಯ ಕಲಾವಿದರಿಗೆ ಸೌಕರ್ಯ ಕಲ್ಪಿಸುವುದು, ಎಲ್ಲ ಪ್ರಕಾರದ ಕಲಾವಿದರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಈ ಭಾಗದ ಕಲಾವಿದರನ್ನು ಸಂಘಟಿಸಬೇಕೆಂಬ ಉದ್ದೇಶದಿಂದ ಈ ಒಕ್ಕೂಟ ರಚನೆ ಮಾಡಲಾಗಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನು ಒಕ್ಕೂಟದ ಗೌರವಾಧ್ಯಕ್ಷರನ್ನಾಗಿ ಮಾಡಲಾಗಿದೆ. ಒಕ್ಕೂಟದ ಪದಾಧಿಕಾರಿಗಳಾಗಿ ಏಳು ಜಿಲ್ಲೆಗಳಿಂದ ತಲಾ ಮೂವರು ಕಲಾವಿದರನ್ನು ನೇಮಿಸಲಾಗಿದೆ. ಅಲೆಮಾರಿ, ಜಾನಪದ, ರಂಗಭೂಮಿ, ಸಂಗೀತ,
ನೃತ್ಯ, ಬಯಲಾಟ ಕಲಾವಿದರಿಂದ ಹಿಡಿದುಕೊಂಡು ಎಲ್ಲ ಪ್ರಕಾರದ ಕಲಾವಿದರ ಸಮಸ್ಯೆಗೆ ಸ್ಪಂದಿಸುವುದೇ ಒಕ್ಕೂಟದ ಗುರಿಯಾಗಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಡಿಂಗ್ರಿ ನರೇಶ ಮಾತನಾಡಿ, ಕಲಾವಿದರ ನಡುವೆ ತಾರತಮ್ಯ ಮನೋಭಾವನೆ ಅಧಿಕವಾಗಿದೆ. ನಮ್ಮ ರಾಜ್ಯದಲ್ಲೇ ಹೊರ ರಾಜ್ಯಗಳ ಕಲಾವಿದರಿಗೆ ಸಿಗುವ ಗೌರವ, ಸೌಲಭ್ಯ ಸ್ಥಳೀಯ ಕಲಾವಿದರಿಗೆ ದಕ್ಕುತ್ತಿಲ್ಲ. ಸಂಭಾವಣೆಯಲ್ಲೂ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಕಲಾವಿದರು ಒಗ್ಗಟಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದರು.

ಕೊರೊನಾದಂತ ಕೆಟ್ಟ ಕಾಲದಲ್ಲಿ ಕಲಾವಿದರು ಅಳಿವು, ಉಳಿವಿನ ಪರಿಸ್ಥಿತಿ ಎದುರಿಸುವಂತೆ ಆಗಿದೆ. ಆದ್ದರಿಂದ ರಾಜ್ಯದ ಕಲಾವಿದರ ಮಾಸಾಶನ ವಯೋಮಿತಿಯನ್ನು 58ರಿಂದ 50ಕ್ಕೆ ಇಳಿಸಬೇಕು. ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಮಾಸಾಶನ ಪಡೆಯುವ ಅವಕಾಶವಿತ್ತು. ಆದರೆ, ಈಗ ಯಾವುದಾದರೂ ಒಂದು ಮಾಸಾಶನ ಪಡೆಯಬೇಕೆಂಬ ನಿಯಮ ಮಾಡಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಮಾಸಾಶನ ಮೊತ್ತ 2000ರೂ.ದಿಂದ 5000ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.

Advertisement

ತೆಲಂಗಾಣದಲ್ಲಿ ಪದ್ಮ ಮತ್ತು ರಾಜ್ಯೋತ್ಸವ ಪುರಸ್ಕೃತ ಕಲಾವಿದರಿಗೆ 10 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದ ಕಲಾವಿದರಿಗೂ ಮಾಸಾಶನ ನೀಡಬೇಕು. ಸರ್ಕಾರದಿಂದ ನಡೆಯುವ ಉತ್ಸವಗಳಲ್ಲಿ ಕಲ್ಯಾಣ ಕರ್ನಾಟಕದ ಕಲಾವಿದರಿಗೆ ಕಡ್ಡಾಯವಾಗಿ ಅವಕಾಶ ನೀಡಬೇಕು. ಕೆಕೆಆರ್‌ ಡಿಬಿಯಿಂದ ಸಾಂಸ್ಕೃತಿಕ ಉದ್ದೇಶಕ್ಕೆ ಅನುದಾನ ನೀಡಬೇಕು. ಕಲಬುರಗಿ ರಂಗಾಯಣ ಕೇವಲ ಒಂದು ಜಿಲ್ಲೆಗೆ ಸೀಮಿತವಾಗದೇ ಈ ಭಾಗದ ಎಲ್ಲ ಕಲಾವಿದರನ್ನು ಒಳಗೊಳ್ಳುವ ಕೆಲಸ ಮಾಡಬೇಕು. ಕಲಾವಿದರ ಬಸ್‌ ಪಾಸ್‌ಗೆ ವಿನಾಯಿತಿ ಕೊಡಬೇಕು.

ಶಿಶುನಾಳ ಷರೀಪರ ಮಾದರಿಯಲ್ಲಿ ಕಡಕೋಳ ಮಡಿವಾಳಪ್ಪನವರ ಕ್ಷೇತ್ರ ಭಿವೃದ್ಧಿ ಪಡಿಸಬೇಕು. ಈ ಭಾಗದ ಎಲ್ಲ ಸಾಧಕರ ಹೆಸರಲ್ಲಿ ಟ್ರಸ್ಟ್‌ ಸ್ಥಾಪನೆ ಮಾಡಬೇಕೆಂದು ಅವರು ಮಾಡಿದರು. ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಒಕ್ಕೂಟದ ಪದಾಧಿಕಾರಿಗಳು ಸಲ್ಲಿಸಿದರು. ನಾನು ಕಲಾವಿದರ ಹಿತಕಾಯಲು ಶಾಶ್ವತವಾಗಿ ತೆಗಿರುತ್ತೇನೆಂದು ಪದಾಧಿಕಾರಿಗಳಿಗೆ ಭರವಸೆ ನೀಡಿದರು. ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಕಲಾವಿದರಾದ ಎಸ್‌.ಬಿ. ಹರಿಕೃಷ್ಣ, ಪ್ರಕಾಶ ಅಂಗಡಿ, ಅಂಬರೇಶ,ಶರಣಪ್ಪ ವಡಗೇರಿ ಇದ್ದರು.

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಪ್ರಕಾರದ ಕಲಾವಿದರಿಗೂ ಸರ್ಕಾರ ಗುರುತಿನ ಚೀಟಿ ನೀಡಬೇಕು. ಸರ್ಕಾರಿ ಶಾಲೆಗಳಿಗೆ ರಂಗ ಶಿಕ್ಷಕ ಮತ್ತು ಜಾನಪದ ಶಿಕ್ಷಕರ ನೇಮಕ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಕಲಾವಿದರ ಪರವಾಗಿ ಧ್ವನಿ ಎತ್ತಲು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಂತೆ ಕಲಾವಿದರ ವಿಧಾನ ಪರಿಷತ್‌ ಕ್ಷೇತ್ರ ರಚಿಸಬೇಕು.
ಡಿಂಗ್ರಿ ನರೇಶ,
ಉಪಾಧ್ಯಕ್ಷ, ಕಲ್ಯಾಣ ಕರ್ನಾಟಕ
ಕಲಾವಿದರ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next