Advertisement
ಜನಸಂಖ್ಯೆ, ವಿಸ್ತೀರ್ಣ, ಭೂ ಕಂದಾಯ ಹಾಗೂ ಸಾರ್ವಜನಿಕರ ಬೇಡಿಕೆಗಳನ್ನು ಆಧರಿಸಿ ಆಡಳಿತಾತ್ಮಕ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕ ಭೂಕಂದಾಯ ಕಾಯ್ದೆ 1962ರ ಸೆಕ್ಷೆನ್ 4ರ ಸಬ್ ಸೆಕ್ಷೆನ್ (4)ರ ಅನ್ವಯ ಹಾರೋಹಳ್ಳಿ ತಾಲೂಕನ್ನು ರಚನೆಮಾಡಲು 2020ರ ಡಿ.31ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಕಂದಾಯ ವೃತ್ತಗಳನ್ನು ರಚಿಸಿ ಸಾರ್ವಜನಿಕರ ಆಕ್ಷೇಪ, ಸಲಹೆಗಳನ್ನು ಆಹ್ವಾನಿಸಿತ್ತು. ಇದೀಗ ಸರ್ಕಾರ ಉದ್ದೇಶಿತ ಹೊಸ ತಾಲೂಕಿನಲ್ಲಿ ಕಂದಾಯ ವೃತ್ತಗಳನ್ನು ರಚಿಸಲು ಅಂತಿಮ ಆದೇಶವನ್ನು ಹೊರೆಡಿಸಿದೆ.
Related Articles
Advertisement
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ತಾಲೂಕು ರಚನೆಗೆ ನಿರ್ಧಾರ: 2019 ಫೆಬ್ರವರಿ 8, ಅಂದು ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಕನಕಪುರ ತಾಲೂಕಿನ ಹೋಬಳಿ ಹಾರೋಹಳ್ಳಿ ಯನ್ನು ನೂತನ ತಾಲೂಕನ್ನಾಗಿ ರಚಿಸಲು ನಿರ್ಧರಿಸಲಾಗಿತ್ತು.
2007ರಲ್ಲಿ ಕುಮಾರಸ್ವಾಮಿ ಮಂತ್ರಿಯಾಗಿದ್ದ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ, ಕನಕಪುರ, ಚನ್ನಪಟ್ಟಣ ಮತ್ತು ಮಾಗಡಿ ತಾಲೂಕುಗಳನ್ನು ಬೇರ್ಪಡಿಸಿ ರಾಮನಗರ ಜಿಲ್ಲೆಯ ರಚನೆಗೆ ಕಾರಣವಾಗಿದ್ದರು. 2018ರಲ್ಲಿ ಮತ್ತೆ ಸಿಎಂ ಪಟ್ಟ ಅಲಂಕರಿಸಿದ ಕುಮಾರಸ್ವಾಮಿ ಕನಕಪುರ ತಾಲೂಕಿನ ಹೋಬಳಿ ಹಾರೋಹಳ್ಳಿಯನ್ನು ಹೊಸ ತಾಲೂಕು ರಚಿಸಲು ಮುನ್ನುಡಿ ಬರೆದಿದ್ದರು. ನೂತನ ತಾಲೂಕಿನಲ್ಲಿ ಹೊಸ ತಾಲೂಕು ಕಚೇರಿ ತೆರೆಯಲು ಕಂದಾಯ ಇಲಾಖೆಗೆ ಸೂಚಿಸಿತ್ತು. ಜತೆಗೆ ಇತರ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ಹಣಕಾಸು ಇಲಾಖೆ ಸಹಮತಿಯೊಂದಿಗೆ ಹಂತ ಹಂತವಾಗಿ ತೆರೆಯಲು ಅನುಮತಿ ನೀಡಲಾಗಿತ್ತು.
ಬಿಜೆಪಿ ಸರ್ಕಾರದಲ್ಲಿ ಅಧಿಕೃತ ಮುದ್ರೆ: ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ತಾಲೂಕುಗಳ ರಚನೆ ಕಾರ್ಯ ಮಂದಗತಿಯಲ್ಲಿ ಸಾಗಿತ್ತು. 2020ರ ಡಿಸೆಂಬರ್‌ನಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಾರೋಹಳ್ಳಿ ತಾಲೂಕು ರಚನೆ ಪ್ರಕ್ರಿಯೆಗೆ ಅಧಿಕೃತ ಮುದ್ರೆ ಒತ್ತಿದೆ. ಲೋಕೋಪಯೋಗಿ ಇಲಾಖೆ ಸರ್ಕಾರಿ ಇಲಾಖೆಗಳ ಹೊಸ ಕಚೇರಿ ನಿರ್ಮಾಣಕ್ಕೆ 109 ಕೋಟಿ ರೂ.ಗಳ ಅಂದಾಜು ವೆಚ್ಚದ ಪಟ್ಟಿ ಸಲ್ಲಿಸಿತ್ತು. ತಾಲೂಕುಕಚೇರಿ ಸೇರಿದಂತೆ ಒಟ್ಟು 31 ಸರ್ಕಾರಿ ಕಚೇರಿಗಳು ನೂತನ ತಾಲೂಕಿನ ಆಡಳಿತ ನಡೆಸಲಿವೆ.
ಕನಕಪುರ ತಾಲೂಕಿನಲ್ಲಿ ಉಳಿಯುವ ಹೋಬಳಿಗಳು: ಹಾರೋಹಳ್ಳಿ ತಾಲೂಕು ರಚನೆಯಾದ ನಂತರ ಕನಕಪುರ ತಾಲೂಕಿನಲ್ಲಿ 4 ಹೋಬಳಿಗಳು ಉಳಿಯಲಿವೆ. ಕೋಡಿಹಳ್ಳಿ, ಉಯ್ಯಂಬಳ್ಳಿ, ಸಾತನೂರು, ಕಸಬಾ ಹೋಬಳಿಗಳು ಉಳಿಯಲಿವೆ.
ಸರ್ಕಾರದ ಗಮನಸೆಳೆದ ಶಾಸಕಿ : ಹಾರೋಹಳ್ಳಿ ತಾಲೂಕು ರಚನೆಬಗ್ಗೆ ಕಳೆದ ಡಿಸೆಂಬರ್ ನಲ್ಲಿನಡೆದ ವಿಧಾನಸಭೆಯಲ್ಲಿ ರಾಮನಗರ ಶಾಸಕರಾದ ಅನಿತಾಕುಮಾರಸ್ವಾಮಿ ನಿಯಮ 351ರಡಿ ಹಾರೋಹಳ್ಳಿ ನೂತನ ತಾಲೂಕು ಘೋಷಣೆಯಾಗಿದ್ದು, ಇದುವರೆವಿಗೂ ಅಂತಿಮ ಅಧಿಸೂಚನೆ ಹೊರಡಿಸಲು ವಿಳಂಬವಾಗುತ್ತಿದೆ ಎಂದು ಸರ್ಕಾರದ ಗಮನ ಸೆಳೆದಿದ್ದರು. ನೂತನ ತಾಲೂಕಿಗೆ ಸಂಬಂಧಿಸಿ ದಂತೆ ಅಗತ್ಯ ದಾಖಲೆಗಳನ್ನು ಜಿಲ್ಲಾಡಳಿತ ಒದಗಿಸದೆ ಇರುವುದರಿಂದ ನೂತನ ತಾಲೂಕು ಪ್ರಾರಂಭವಾಗಲು ವಿಳಂಬವಾಗುತ್ತಿದೆ ಎಂದು ದೂರಿದ್ದರು.
ಎಷ್ಟು ಗ್ರಾಮಗಳು? : ಹಾರೋಹಳ್ಳಿ ಹೋಬಳಿಯ 11 ಕಂದಾಯ ವೃತ್ತಗಳ 107 ಗ್ರಾಮಗಳುಮತ್ತು ಮರಳವಾಡಿ ಹೋಬಳಿಯ 15 ವೃತ್ತಗಳ 145 ಗ್ರಾಮಗಳು ಒಟ್ಟು 252ಗ್ರಾಮಗಳು ನೂತನ ಹಾರೋಹಳ್ಳಿ ತಾಲೂಕು ವ್ಯಾಪ್ತಿಗೆ ಬರಲಿದೆ.
ಸಚಿವ ಅಶೋಕ್ ಸ್ಪಷ್ಟನೆ :
ಶಾಸಕಿ ಅನಿತಾ ಕುಮಾರಸ್ವಾಮಿಯವರ ಈ ಸೂಚನೆಗೆ ಕಂದಾಯ ಸಚಿವ ಆರ್.ಅಶೋಕ್ ಉತ್ತರ ನೀಡಿ 28.2.2019ರಲ್ಲಿ ಸರ್ಕಾರ ತನ್ನ ಆದೇಶದಲ್ಲಿ ರಾಮನಗರ ಜಿಲ್ಲೆಯ ಕನಕಪುರತಾಲೂಕನ್ನು ವಿಭಜಿಸಿ ಹಾರೋಹಳ್ಳಿ ತಾಲೂಕನ್ನು ರಚಿಸಲು ತಾತ್ವಿಕವಾಗಿ ಆಡಳಿತಾತ್ಮಕವಾಗಿ ಅನುಮೋದನೆ ನೀಡಿ ಆದೇಶ ಹೊರೆಡಿಸಿತ್ತು. ನಂತರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾಗಿದ್ದ ಪ್ರಸ್ತಾವನೆ ಆಧರಿಸಿ, ಸರ್ಕಾರದ ಅಧಿಸೂಚನೆಸಂಖ್ಯೆ ಆರ್‌ಡಿ 07 ಎಲ್‌ಆರ್‌ಡಿ 2019, ದಿನಾಂಕ ಡಿ.31, 2020ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಸಾರ್ವಜನಿಕರಿಂದಸಲಹೆ/ಆಕ್ಷೇಪಗಳನ್ನು ಆಹ್ವಾನಿಸಲಾಗಿತ್ತು. ಈ ಅಧಿಸೂಚನೆಗೆ ನಿಗದಿತ ಅವಧಿಯಲ್ಲಿ ಸ್ವೀಕೃತವಾಗಿದ್ದ ಸಲಹೆ/ಆಕ್ಷೇಪಣೆ ಪರಿಶೀಲಿಸಿ, ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸದರಿ ವರದಿಯನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದರು. ಇದೀಗ ಸರ್ಕಾರ ಕಂದಾಯ ವೃತ್ತಗಳನ್ನು ಗುರುತಿಸಿ ಅಂತಿಮ ಆದೇಶ ಹೊರೆಡಿಸಿದ್ದು, ಹೊಸ ತಾಲೂಕು ರಚನೆಗೆ ವೇದಿಕೆ ಸಿದ್ಧವಾಗಿದೆ.
-ಬಿ.ವಿ. ಸೂರ್ಯಪ್ರಕಾಶ್