Advertisement

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

12:40 AM Jul 25, 2024 | Team Udayavani |

ಬೆಳ್ತಂಗಡಿ: ಕಾಡಾನೆಗಳು ಹಗಲು ಹೊತ್ತಿನಲ್ಲೇ ಅರಣ್ಯದಂಚಿನ ರೈತರ ಕೃಷಿಯನ್ನು ಹಾನಿ ಮಾಡುತ್ತಿದ್ದು, ಇದನ್ನು ತಡೆಯಲು ಇಲಾಖೆ ಮಟ್ಟದಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳು ಆಗಿಲ್ಲ. ಆನೆ ಹಾವಳಿ ನಿಯಂತ್ರಿಸಿ ಎಂದು ಮನವಿಪತ್ರ ಹಿಡಿದು ಇಲಾಖೆ ಅಧಿಕಾರಿಗಳ ಬಳಿಗೆ ಅಲೆದಾಡುತ್ತಾ, ಪರಿಹಾರಕ್ಕಾಗಿ ಸರಕಾರಕ್ಕೆ ಮೊರೆ ಇಡುತ್ತಾ ರೋಸಿ ಹೋದ ರೈತರು ಈಗ ಆನೆ ಹಾವಳಿ ಸಂತ್ರಸ್ತರ ಹೋರಾಟ ಸಮಿತಿಯೊಂದನ್ನು ಬೆಳ್ತಂಗಡಿ ತಾಲೂಕಿನಲ್ಲಿ ರೂಪಿಸಿ ಗಮನ ಸೆಳೆದಿದ್ದಾರೆ.

Advertisement

ತಾಲೂಕಿನ ಅರಣ್ಯದಂಚಿನ ಮುಂಡಾಜೆ, ಕಡಿರುದ್ಯಾವರ, ಚಾರ್ಮಾಡಿ, ಧರ್ಮಸ್ಥಳ, ತೋಟತ್ತಾಡಿ, ದಿಡುಪೆ, ಚಿಬಿದ್ರೆ, ಶಿಶಿಲ, ಶಿಬಾಜೆ, ಹತ್ಯಡ್ಕ, ನಿಡ್ಲೆ ಸಹಿತ ಸುತ್ತಮುತ್ತಲ ಗ್ರಾಮಗಳ ರೈತರು ಆನೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಆನೆ ದಾಳಿಯಿಂದ ಹಾನಿಗೀಡಾಗುವ ಕೃಷಿಗೆ ಸರಕಾರ ಜುಜುಬಿ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ರಾಜ್ಯದಲ್ಲೇ ಮೊದಲ ಸಮಿತಿ
ರಾಜ್ಯದಲ್ಲೇ ಪ್ರಥಮ ಎಂಬಂತೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ “ಕಡಿರುದ್ಯಾವರ ಗ್ರಾಮದ ಆನೆ ಸಂತ್ರಸ್ತರ ಹೋರಾಟ ಸಮಿತಿ’ ರಚನೆಯಾಗಿದೆ. ನಮಗೆ ಹಣದ ಬದಲು ಶಾಶ್ವತ ಪರಿಹಾರ ಬೇಕು. ಕೃಷಿ ಭೂಮಿಗೆ ತಾಗಿಕೊಂಡಿರುವ ಅರಣ್ಯಗಳಿಗೆ ಸೋಲಾರ್‌ ಬೇಲಿ, ರೈಲ್ವೇ ಬ್ಯಾರಿಕೇಡ್‌, ಹ್ಯಾಂಗಿಂಗ್‌ ಬೇಲಿ ಅಥವಾ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ತಿಳಿಸಿದೆ.

ವಾಟ್ಸಾಪ್‌ ಬಳಗ
ಮೊದಲ ಹಂತದಲ್ಲಿ ನೂರು ಮಂದಿಯ ಒಂದು ವಾಟ್ಸಾಪ್‌ ಬಳಗ ರಚಿಸಲಾಗಿದೆ. ಸದ್ಯ ಈ ಬಳಗ ಕಾಡಾನೆ ಊರಿನ ಯಾವ ಭಾಗದಲ್ಲಿದೆ, ಅವುಗಳ ಚಲನವಲನ, ಸುರಕ್ಷೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮುಂದಿನ ಹಂತದಲ್ಲಿ ಸಮಿತಿಗೆ ಅಧ್ಯಕ್ಷ ಸಹಿತ ಪದಾಧಿಕಾರಿಗಳ ಆಯ್ಕೆ, ಗ್ರಾಮದ ಸಂತ್ರಸ್ತರ ಪೈಕಿ ಒಂದೊಂದು ಪ್ರದೇಶದಿಂದ ಒಟ್ಟು 10 ಮಂದಿ ಸಂಚಾಲಕರು, ಕಾನೂನು ಸಲಹೆಗಾರ, ಮಾಧ್ಯಮ ಪ್ರತಿನಿಧಿ, ಇತರ ಸಹಸಂಚಾಲಕರ ನೇಮಕವಾಗಲಿದೆ. ಜು.22ರಂದು ಒಂದು ಸುತ್ತಿನ ಸಭೆ ನಡೆದಿದ್ದು, ಜು.27ರಂದು ಪದಾಧಿಕಾರಿಗಳ ಅಂತಿಮಪಟ್ಟಿ ಸಿದ್ಧವಾಗಲಿದೆ.

ಈಗಾಗಲೇ ನೂರು ಮಂದಿ ಗ್ರಾಮಸ್ಥರ ವಾಟ್ಸಾಪ್‌ ಬಳಗ ರಚಿಸಿದ್ದೇವೆ. ಸಭೆ ಕರೆದು ಸಂತ್ರಸ್ತರನ್ನು ಸಂಘಟಿಸುತ್ತಿದ್ದೇವೆ ಎಂದು ಸಮಿತಿಯ ಕಡಿರುದ್ಯಾವರ ಗ್ರಾಮದ ಸಂಚಾಲಕ ಜಾರ್ಜ್‌ ಟಿ.ವಿ. ತಿಳಿಸಿದ್ದಾರೆ. ಆನೆ ಹಾವಳಿಯಿಂದ ಗ್ರಾಮಸ್ಥರು ತೀರಾ ಸಂಕಷ್ಟದಲ್ಲಿದ್ದಾರೆ. ಆನೆಗಳು ನಾಡಿಗೆ ಬರದಂತೆ ಶಾಶ್ವತ ಪರಿಹಾರ ಕ್ರಮ ಆಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪ್ರಧಾನ ಸಂಚಾಲಕರು ಕಿರಣ್‌ ಹೆಬ್ಟಾರ್‌ ಸಿರಿಬೈಲು ತಿಳಿಸಿದ್ದಾರೆ.

Advertisement

ಹಿಂದೆ ಆನೆಗಳು ನಾಡಿಗೆ ಬರುತ್ತಿರಲಿಲ್ಲ. ಆದರೆ ಚಾರ್ಮಾಡಿಯಲ್ಲಿ ವಿದ್ಯುತ್‌ ಯೋಜನೆ ಸಹಿತ ಹಲವು ಕಾರಣಗಳಿಗಾಗಿ ಅರಣ್ಯ ನಾಶವಾದ ಬಳಿಕ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಗ್ರಾಮದಲ್ಲಿ 15 ವರ್ಷಗಳಿಂದ ಆನೆ ದಾಳಿಯ ಕಷ್ಟವನ್ನು ಅನುಭವಿಸುತ್ತಿದ್ದೇವೆ. ಇದಕ್ಕೊಂದು ಶಾಶ್ವತ ಹಾಗೂ ತಾರ್ಕಿಕ ಅಂತ್ಯ ಸಿಗಲು ಹೋರಾಟ ಸಮಿತಿ ಅನಿವಾರ್ಯವಾಗಿದೆ.
– ಸಂತೋಷ್‌ ಗೌಡ ಒಳಂಬ್ರ, ನಿಯೋಜಿತ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next