Advertisement
“”ಓಣಂ ಹಬ್ಬಕ್ಕೆ ಸಮಾನವಾದ ಪುಲಿಯೇಂದ್ರ ಹಬ್ಬದ ಆಚರಣೆ ಕಾಸರಗೋಡಿನಲ್ಲಿದೆ. ಇದೇ ನಿಜವಾದ ಓಣಂ ಆಗಿದೆ. ನಮ್ಮ ಬಾಲ್ಯಕಾಲದಲ್ಲಿ ಪುಲಿಯೇಂದ್ರ ಹಬ್ಬವನ್ನು ಆಚರಿಸುತ್ತಿದ್ದೆವು. ತಂದೆಯ ಬಳಿ ಕೇಳಿದರೆ ಆ ಹಬ್ಬದ ಹಿನ್ನೆಲೆ ತಿಳಿದಿಲ್ಲ ಎಂದರು. ಕನ್ನಡ ಮಾತನಾಡುವ ಜನರ ಬಳಿ ವಿಚಾರಿಸಿದಾಗ ಅವರು ಬಲಿಯೇಂದ್ರ ಎಂಬ ಹೆಸರಿನಲ್ಲಿ ಅದನ್ನು ಆಚರಿಸುತ್ತಿದ್ದಾರೆ ಎಂದು ತಿಳಿಯಿತು. ಈ ಬಗ್ಗೆ ಬಹಳಷ್ಟು ಸಂಶೋಧನೆ ನಡೆಸಿದ ಬಳಿಕ ಪುಲಿಯೇಂದ್ರ ಅಥವಾ ಬಲಿಯೇಂದ್ರ ಹಬ್ಬವೇ ನಿಜವಾದ ಓಣಂ ಎಂದು ತಿಳಿಯಿತು. ನಿಜವಾದ ಓಣಂ ಸಿಂಹಮಾಸದಲ್ಲಿ ಅಲ್ಲ, ತುಲಾಮಾಸದಲ್ಲಿ ಬರುತ್ತದೆ. ಮಹಾಬಲಿಯನ್ನು ಸ್ವಾಗತಿಸುವ ಈ ಹಬ್ಬ ಉತ್ತರದ ಕಾಸರಗೋಡಿನಲ್ಲಿ ಇಂದಿಗೂ ನಡೆಯುತ್ತಿದೆ. ಸಿಂಹಮಾಸದಲ್ಲಿ ಆಚರಿಸುವ ಹಬ್ಬ ವಾಮನನ ದಿನವಾಗಿದೆ. ಈಗ ಸೋತ (ತುಳಿತಕ್ಕೀಡಾದ) ಮಹಾಬಲಿಯ ದಿನವನ್ನು ಆಚರಿಸುವ ಬದಲು ಓಣಂ ಹೆಸರಿನಲ್ಲಿ ಜಯಿಸಿದವನ (ತುಳಿದವನ) ದಿನವನ್ನು ಆಚರಿಸಲಾಗುತ್ತಿದೆ.” ಮೇಲಿನ ಮಾತುಗಳನ್ನು ಹೇಳಿದವರು ಕೇರಳರಾಜ್ಯದಲ್ಲೇ ಪ್ರಸಿದ್ಧರಾದ ಕಾಸರಗೋಡಿನ ಪ್ರಮುಖ ಮಲಯಾಳಂ ಪ್ರಗತಿಶೀಲ ಸಾಹಿತಿ ಅಂಬಿಕಾ ಸುತನ್ ಮಾಂಗಾಡ್. ಏಷ್ಯಾನೆಟ್ ನ್ಯೂಸ್ ವಾಹಿನಿಯ “ಎಂದೆ ಕೇರಳಂ’ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಕುರಿತಾದ ಭಾಗದಲ್ಲಿ ಹೇಳಿದ ಮಾತಿದು. ಯು ಟ್ಯೂಬಿನಲ್ಲಿ ಹುಡುಕಿದರೆ ಈ ಎಪಿಸೋಡ್ ದೊರೆಯುತ್ತದೆ. ಆದರೆ ದುರದೃಷ್ಟಕರ ವಿಷಯವೆಂದರೆ ಆ ಲೇಖಕರು ತುಲಾಮಾಸದಲ್ಲಿ ಆಚರಿಸುವ ನಿಜವಾದ ಒಣಂ ಎಂದು ಹೇಳಿದ ಬಲಿಯೇಂದ್ರ ಪರ್ಬವನ್ನು ತುಳುನಾಡಿನ ಜನತೆ ಈಗ ಮರೆತುಬಿಟ್ಟಿದ್ದಾರೆ. ತೆಂಕಣದ ತುಳುನಾಡಾದ ಕಾಸರಗೋಡಿನ ಮೂಲೆ ಮೂಲೆಗಳಲ್ಲಿ ತೆಂಕಣ ಕೇರಳದ ಓಣಂ ಆಚರಿಸಲು ತೊಡಗಿದ್ದಾರೆ.
Related Articles
Advertisement
ಕಾಸರಗೋಡಿನಲ್ಲಿ ಓಣಂ ಪರಂಪರಾಗತ ಹಬ್ಬವಲ್ಲ. ಅದಿಲ್ಲಿ ಜನಪ್ರಿಯತೆ ಪಡೆದುದು ಹೆಚ್ಚೆಂದರೆ ಇಪ್ಪತ್ತು ವರ್ಷಗಳಿಂದೀಚೆಗೆ. ಚಂದ್ರಗಿರಿ ನದಿಯ ಉತ್ತರಕ್ಕೆ ಕಡಿಮೆ ಸಂಖ್ಯೆಯಲ್ಲಿರುವ ನಾಯರ್ ಸಮುದಾಯದವರನ್ನು ಬಿಟ್ಟರೆ ಉಳಿದ ಸ್ಥಳೀಯ ಮಿಶ್ರ ಮಲೆಯಾಳ ಮನೆಮಾತಿನ ಜನರೂ ತುಳು-ಕನ್ನಡ ಸಂಸ್ಕೃತಿಯನ್ನು ಪರಂಪರಾಗತವಾಗಿ ಆಚರಿಸುತ್ತಿದ್ದರು. ಓಣಂ ಇಲ್ಲಿ ಜನಪ್ರಿಯತೆ ಪಡೆಯಲು ಆ ಹಬ್ಬದ ಆಚರಣೆಯಲ್ಲಿನ ಸರಳತೆ. ಜಾತ್ಯತೀತತೆ, ಪೂಕಳಂ-ಓಣಭೋಜನದ ಆಕರ್ಷಣೆ ಮೊದಲಾದವುಗಳನ್ನು ಕಾರಣಗಳನ್ನಾಗಿ ಹೇಳಲಾಗುತ್ತದೆ. ಆದರೆ ಇದಕ್ಕೂ ಮೀರಿದ ರಾಜಕೀಯ ವಾಣಿಜ್ಯ ಕಾರಣಗಳೂ ಇವೆ. ಕೇರಳದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಎಡಪಕ್ಷಗಳಿಗೆ ಮಲಯಾಳಂ ಭಾಷೆ ಸಂಸ್ಕೃತಿ ಹೊಸ ರಾಜಕೀಯ ಅಸ್ತ್ರವಾಗಿದೆ. ಇದಕ್ಕೆ ಇಂಗ್ಲೀಷಿನ ವಿರುದ್ಧ ಹೋರಾಡುತ್ತಿರುವ ಕೇರಳದ ಸಾಹಿತಿ ಬುದ್ಧಿಜೀವಿಗಳ ಬೆಂಬಲವೂ ದೊರೆಯುತ್ತಿದೆ. ಕೇರಳದಲ್ಲಿ ಜನರನ್ನು ಒಗ್ಗೂಡಿಸಿ ತಮ್ಮ ರಾಜಕೀಯ ನಿಲುವನ್ನು ಸ್ಥಾಪಿಸಲು ಮಲೆಯಾಳ ಕಡ್ಡಾಯ, ಓಣಂ ಪ್ರಚಾರ ಸಾಧನಗಳಾಗಿವೆ. ತಮ್ಮ ಕಾರ್ಯಕರ್ತರು ಹಾಗೂ ಸಂಪರ್ಕಜಾಲದ ಮೂಲಕ ತುಳು ಸಂಸ್ಕೃತಿಯ ಗ್ರಾಮಗಳಲ್ಲೂ ಓಣಂ ಆಚರಿಸಲು, ಮಲೆಯಾಳ ಕಲಿಯಲು ಪ್ರೋತ್ಸಾಹ ನೀಡಲಾಗುತ್ತದೆ. ಈವರೆಗೂ ಮುಖ್ಯ ಹಬ್ಬಗಳ ಆಚರಣೆಯಿಂದ ದೂರವಿದ್ದ ತಳಮಟ್ಟದ ಸಮುದಾಯಗಳನ್ನು, ಆದಿವಾಸಿ-ದಲಿತರನ್ನು ಓಣಂ ಹಾಗೂ ಮಲೆಯಾಳದ ಮೂಲಕ ಒಗ್ಗೂಡಿಸಲು ಪ್ರಯತ್ನ ನಡೆಯುತ್ತದೆ. ಇದು ರಾಜಕೀಯ ಕಾರಣವಾದರೆ ವಾಣಿಜ್ಯ ಸಂಸ್ಥೆಗಳೂ ತಮ್ಮ ವ್ಯಾಪಾರೋದ್ದೇಶದ ಸ್ವಾರ್ಥಕ್ಕಾಗಿ ಓಣಂಗೆ ಭರ್ಜರಿ ಪ್ರಚಾರ ನೀಡುತ್ತಿವೆ.
ಈ ಹೇರಿಕೆಯಿಂದ ಬೆದರಿಕೆಯುಂ ಟಾಗಿರುವುದು ಕಾಸರಗೋಡಿನಂತಹ ತುಳು- ಕನ್ನಡ ಪ್ರದೇಶಗಳ ಭಾಷಾ ಸಾಂಸ್ಕೃತಿಕ ವೈವಿಧ್ಯಕ್ಕೆ. ಅದರಲ್ಲೂ ತುಳುಭಾಷೆ ಸಂಸ್ಕೃತಿಯನ್ನು ಮಲೆಯಾಳದೊಂದಿಗೆ ಹಲವು ಸಾಮ್ಯತೆಗಳಿರುವ ಸೋದರ ಭಾಷೆ ಸಂಸ್ಕೃತಿಯೆನ್ನುತ್ತ ತನ್ನೊಳಗೆ ಜೀರ್ಣಿಸಿಕೊಂಡು ವಿಸ್ತರಿಸುವ ಬಹುಸಂಖ್ಯಾಕರ ಭಾಷೆಯ ಪ್ರವೃತ್ತಿ ನಿರ್ಲಕ್ಷಿಸುವಂತಹುದಲ್ಲ. ಇಂದು ಕಾಸರಗೋಡಿಗೆ ಸಂಭವಿಸಿರುವುದು ನಾಳೆ ಕರ್ನಾಟಕದ ಕರಾವಳಿಯಲ್ಲೂ ಸಂಭವಿಸಬಹುದು. ಈವರೆಗೂ ಕಾಸರಗೋಡಿನ ಕನ್ನಡ ಹೋರಾಟದ ಪ್ರತಿರೋಧದಿಂದ ಮಲಯಾಳೀಕರಣದ ವಿಸ್ತರಣೆಗೆ ಒಂದಿಷ್ಟು ತಡೆಯುಂಟಾಗಿತ್ತು. ಆದರೆ ಕಾಸರಗೋಡಿನ ಕನ್ನಡ ಚಳುವಳಿ ದುರ್ಬಲವಾಗುತ್ತಿರುವಂತೆ ಕಾಸರಗೋಡಿನಲ್ಲಿ ಮಲಯಾಳೀಕರಣ ಪೂರ್ಣಗೊಂಡು ಕರ್ನಾಟಕದ ಕರೆನಾಡನ್ನು ಆವರಿಸುವ ದಿನಗಳು ದೂರವಿಲ್ಲ.
ನರೇಶ್ ಮುಳ್ಳೇರಿಯಾ