ಹಾವೇರಿ: ಲೋಕಸಭೆ ಚುನಾವಣೆ 2024ರ ನಾಮಪತ್ರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಸೂಚಕರ ನಕಲಿ ಸಹಿ ಮಾಡಿ ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ಜಿಲ್ಲಾ ಚುನಾವಣಾ ಧಿಕಾರಿ ರಘುನಂದನ ಮೂರ್ತಿ ಅವರು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿಯ ಸಿದ್ದಪ್ಪ ಕಲ್ಲಪ್ಪ ಪೂಜಾರ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರದೊಂದಿಗೆ ಸುಳ್ಳು ಸೂಚಕರ ಪ್ರಮಾಣಪತ್ರ ಸಲ್ಲಿಸಿದ್ದು, ನಾಮಪತ್ರ ಪರಿಶೀಲನೆ ವೇಳೆ ನಕಲಿ ಸಹಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ನಾಮಪತ್ರವನ್ನೂ ತಿರಸ್ಕೃರಿಸಲಾಗಿದೆ.
ನಾಮಪತ್ರ ಪರಿಶೀಲನೆ ಮಾಡಿದಾಗ ಸೂಚಕರ ವಿವರ ಮತ್ತು ಅವರ ಸಹಿಯ ಬಗ್ಗೆ ಸಂಶಯ ಮೂಡಿತು. ಆಗ ಸೂಚಕರ ಸಹಿ ಖಚಿತಪಡಿಸಿಕೊಳ್ಳಲು, ಅವರ ಮನೆಗೆ ಹೋಗಿ ಪರಿಶೀಲನೆ ಮಾಡುವಂತೆ ಹಾನಗಲ್ಲ ತಾಲೂಕಿನ ತಹಶೀಲ್ದಾರ್ ಆರ್.ಎನ್. ಕೊರವರ ಮತ್ತು ಹಾನಗಲ್ಲ ಪೊಲೀಸ್ ಠಾಣೆಯ ಸಿಪಿಐ ವೀರೇಶ ಅವರಿಗೆ ಜಿಲ್ಲಾ ಚುನಾವಣಾಧಿ ಕಾರಿ ಸೂಚನೆ ನೀಡಿದ್ದರು.
ಅಭ್ಯರ್ಥಿ ಸಹಿ ಮಾಡಿಸಿದ ನಮೂನೆ ಕ್ರಮ ಸಂಖ್ಯೆ 2, 3, 4, 5, 6, 8ನೇ ಸೂಚಕರನ್ನು ಖುದ್ದಾಗಿ ಭೇಟಿ ಮಾಡಿ ವಿಚಾರಿಸಿದಾಗ “ನಾವು ಸಹಿ ಮಾಡಿಲ್ಲ. ಇವು ನಮ್ಮ ಸಹಿಗಳಲ್ಲ’ ಎಂದು ತಿಳಿಸಿ, ನಿಜವಾದ ಸಹಿಗಳನ್ನು ತಂಡದ ಅಧಿ ಕಾರಿಗಳ ಮುಂದೆ ಮಾಡಿಕೊಟ್ಟಿದ್ದಾರೆ. ಇದು ಚುನಾವಣ ನಿಯಮದ ಸ್ಪಷ್ಟ ಉಲ್ಲಂಘನೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸಿದ್ದಪ್ಪ ಪೂಜಾರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾಹಿತಿ ನೀಡಿದ್ದಾರೆ.
ಆಯೋಗದ ಮಾರ್ಗಸೂಚಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು 10 ಜನ ಸೂಚಕರು ಬೇಕು. ಈ ಕ್ಷೇತ್ರದವರಾಗಿರಬೇಕು. ನಾಮಪತ್ರದಲ್ಲಿ ಸೂಚಕರ ಮತದಾರ ಪಟ್ಟಿಯ ಭಾಗಸಂಖ್ಯೆ, ಕ್ರಮಸಂಖ್ಯೆ ಕ್ರಮಬದ್ಧವಾಗಿ ನಮೂದಿಸಿ ಖುದ್ದಾಗಿ ಸೂಚಕರೇ ಸಹಿ ಮಾಡಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.