ಪಣಜಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ. ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ನಡೆಯುತ್ತಿರುವ ಬಾರ್ ನ ಪರವಾನಗಿಯನ್ನು ನಕಲಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಪರವಾನಗಿಯನ್ನು ನಕಲಿ ರೀತಿಯಲ್ಲಿ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಜೈರಾಮ್ ರಮೇಶ್, ‘ಪ್ರಧಾನಿಯವರು ಕೂಡಲೆ ಸ್ಮೃತಿ ಇರಾನಿ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸುತ್ತೇವೆ. ಗೋವಾದಲ್ಲಿ ಅವರ ಮಗಳ ಹೆಸರಲ್ಲಿ ಬಾರ್ ಅಕ್ರಮವಾಗಿ ನಡೆಸಲಾಗುತ್ತಿದೆ. ಆ ಬಾರ್ ನ ಪರವಾನಗಿಯನ್ನು ಸತ್ತ ವ್ಯಕ್ತಿಯ ಹೆಸರಿನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಸ್ಮೃತಿ ಇರಾನಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇದಲ್ಲದೆ, ರೆಸ್ಟೋರೆಂಟ್‍ಗೆ ನೋಟಿಸ್ ನೀಡಿದ ಅಬಕಾರಿ ಆಯುಕ್ತರನ್ನು ಬದಲಾಯಿಸಲು ಸಿದ್ಧತೆ ನಡೆಯುತ್ತಿದೆ ಎಂದು ಆರೋಪಿಸಿದೆ.
ಇರಾನಿಯವರೇ ಇದು ನಿಮ್ಮ ಅನುಮತಿಯಿಲ್ಲದೆ ನಡೆಯುತ್ತಿದೆಯೇ? ವಂಚನೆಯನ್ನು ಮುಚ್ಚಿಡಲು ಅಧಿಕಾರದ ಪ್ರಭಾವವಿದೆಯೇ? ಮುಂತಾದ ಪ್ರಶ್ನೆಗಳನ್ನು ಎತ್ತಿರುವ ಜೈರಾಮ್ ರಮೇಶ್, ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ ಮಹಿಳಾ ಆರ್ ಟಿ ಟಿಐ ಕಾರ್ಯಕರ್ತೆಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಾಗ್ದಾಳಿ ನಡೆಸಿದ ಜೈರಾಮ್ ರಮೇಶ್, ಸ್ಮೃತಿ ಇರಾನಿ ಯಾವಾಗಲೂ ಸೋನಿಯಾ ಜಿ ರಾಹುಲ್ ಜಿ ಬಗ್ಗೆ ಮಾತನಾಡುತ್ತಾರೆ, ಆದರೆ ಅವರ ಮಾತು ಆಧಾರ ರಹಿತವಾಗಿದೆ. ನಾವು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮಾತನಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ : ದೆಹಲಿ:ಎಎಪಿ ಸರ್ಕಾರದ ಹೊಸ ಮದ್ಯ ನೀತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ