Advertisement

ಖೋಟಾ ನೋಟು ಚಲಾವಣೆ: ಕ್ಯಾಮರೂನ್‌ ಪ್ರಜೆ ಸಿಸಿಬಿ ಬಲೆಗೆ

04:38 AM Jul 14, 2019 | Lakshmi GovindaRaj |

ಬೆಂಗಳೂರು: ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಕಲರ್‌ ಪ್ರಿಂಟ್‌ ಮಾಡಿ ಚಲಾವಣೆ ಮಾಡುತ್ತಿದ್ದ ಕ್ಯಾಮರೂನ್‌ ದೇಶದ ಪ್ರಜೆಯೊಬ್ಬ ಕೇಂದ್ರ ಅಪರಾಧ ವಿಭಾಗ ( ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಆರೋಪಿ ಡಿಯೋಡೆನ್ನೆ ಕ್ರಿನ್ಪೋಲ್‌ (35) ಎಂಬಾತನನ್ನು ಬಂಧಿಸಿ ಆತನಿಂದ ಎರಡು ಸಾವಿರ ರೂ. ಮುಖಬೆಲೆಯ 33.70 ಲಕ್ಷ ರೂ.ಗಳ ಖೋಟಾನೋಟುಗಳನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

2017ರಲ್ಲಿ ಪ್ರವಾಸಿ ವೀಸಾ ಅಡಿಯಲ್ಲಿ ಭಾರತಕ್ಕೆ ಆಗಮಿಸಿದ್ದ ಆರೋಪಿ ಡಿಯೋಡೆನ್ನೆಯ ವೀಸಾ ಅವಧಿ ಅಂತ್ಯಗೊಂಡಿದೆ. ಅಕ್ರಮವಾಗಿ ಬಾಣಸವಾಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಖೋಟಾ ನೋಟು ಮುದ್ರಣ ಮಾಡುತ್ತಿದ್ದ. ಬಳಿಕ ಅವುಗಳನ್ನು ಚಲಾವಣೆ ಮಾಡುತ್ತಿದ್ದ.

ಸ್ನೇಹಿತನೊಬ್ಬನ ಸಲಹೆಯಿಂದ ಸುಲಭವಾಗಿ ಹಣ ಸಂಪಾದನೆ ಮಾಡಲು, ಆರು ತಿಂಗಳಿಂದ ಖೋಟಾ ನೋಟು ಮುದ್ರಿಸುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಖೋಟಾನೋಟುಗಳ ಚಲಾವಣೆಯಿಂದ ಬಂದ ಹಣದಿಂದಲೇ ಐಶಾರಾಮಿ ಜೀವನ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸ್ವದೇಶಕ್ಕೆ ವಾಪಸ್‌ ಕಳುಹಿಸಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದರು.

ಮನೆಯೇ ಮುದ್ರಣಾಲಯ: ಸುಬ್ಬಯ್ಯನ ಪಾಳ್ಯದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದ ಆರೋಪಿ, ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಚಲನವಲನಗಳ ನಿಗಾವಹಿಸಲಾಗಿತ್ತು.

Advertisement

ಅದರಂತೆ, ಆರೋಪಿ ಡಿಯೋಡೆನ್ನೆಯನ್ನು ಬೆನ್ನತ್ತಿದ ಸಿಸಿಬಿ ಎಸಿಪಿ ಮೋಹನ್‌ಕುಮಾರ್‌, ಇನ್ಸ್‌ಪೆಕ್ಟರ್‌ಗಳಾದ ಕೆ.ನಾರಾಯಣಗೌಡ, ಆಯಿಷಾ ಹಾಗೂ ಪೊಲೀಸ್‌ ಪೇದೆ ಶಶಿಧರ್‌ ಮತ್ತಿತರ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ, ಆತ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ನಡೆಸಿದಾಗ ಕಲರ್‌ ಪ್ರಿಂಟರ್‌, ಸ್ಕ್ಯಾನರ್‌ಗಳು, ಎ4 ಅಳತೆಯ ಬಿಳಿ ಹಾಳೆ ಬಂಡಲ್‌ಗ‌ಳು ಸಿಕ್ಕಿವೆ.

ಜತೆಗೆ ಟೇಬಲ್‌ ಒಂದರ ಮೇಲೆ 2000 ರೂ. ಮುಖಬೆಲೆಯ ನೋಟುಗಳನ್ನು ಹರಡಲಾಗಿತ್ತು. ಬಳಿಕ ಆರೋಪಿ ಮನೆಯಲ್ಲಿ ವಶಕ್ಕೆ ಪಡೆದ ಬ್ಯಾಗ್‌ ತೆರೆದು ನೋಡಿದಾಗ ಖೋಟಾನೋಟುಗಳ ಕಂತೆಗಳು ಸಿಕ್ಕಿವೆ. ಕೂಡಲೇ ಆರೋಪಿಯನ್ನು ಬಂಧಿಸಿ 33.70 ಲಕ್ಷ ರೂ ಖೋಟಾ ನೋಟು, ಎರಡು ಕಲರ್‌ ಪ್ರಿಂಟರ್‌, ಸ್ಕ್ಯಾನರ್‌ಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಯಿತು ಎಂದು ಹಿರಿಯ ಆಧಿಕಾರಿ ತಿಳಿಸಿದರು.

ಖೋಟಾ ನೋಟಿಗೆ 400 ರೂ.!: ಆರೋಪಿ ಡಿಯೋಡೆನ್ನೆ ಮನೆಯಲ್ಲಿಯೇ ಕಲರ್‌ ಪ್ರಿಂಟರ್‌ ಮೂಲಕ ಖೋಟಾನೋಟುಗಳನ್ನು ಮುದ್ರಣ ಮಾಡುತ್ತಿದ್ದ. ಬಳಿಕ ತನ್ನ ಪರಿಚಯದ ಅಫ್ರಿಕನ್‌ ಪ್ರಜೆಗಳಿಗೆ ಒಂದು ಖೋಟಾನೋಟಿಗೆ 400 ರೂ. ಅಸಲಿ ಹಣ ಪಡೆದುಕೊಳ್ಳುತ್ತಿದ್ದ.

ವಿಶೇಷ ಎಂದರೆ ಆತ ಒಬ್ಬನಿಗೆ ಒಂದೇ ಖೋಟಾನೋಟು ನೀàಡುತ್ತಿದ್ದ. ಈ ನೋಟುಗಳು ಕಮ್ಮನಹಳ್ಳಿ, ಬಾಣಸವಾಡಿ, ಎಚ್‌.ಬಿ.ಆರ್‌. ಲೇಔಟ್‌, ಹೆಣ್ಣೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಚಲಾವಣೆಯಾಗುತ್ತಿದ್ದವು ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಅಧಿಕಾರಿ ವಿವರಿಸಿದರು.

ಆರೋಪಿ ಬಳಿ ಖೋಟಾನೋಟು ಪಡೆಯುತ್ತಿದ್ದವರು, ಆತ ಹೊರರಾಜ್ಯಗಳು ಸೇರಿದಂತೆ ಇನ್ನಿತರೆ ಖೋಟಾನೋಟು ಜಾಲ ಹೊಂದಿದ್ದಾನೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next