ಹುಣಸೂರು: ಸರ್ಕಾರ ಮಕ್ಕಳಿಗೆ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತಂತೆ ಪರಿಚಯಿಸಲು 9ನೇ ತರಗತಿ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಮೂಲಕ “ಚಿಣ್ಣರ ವನದರ್ಶನ’ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಉದ್ಯಾನದಂಚಿನ ದೊಡ್ಡಹೆಜೂರು, ನಾಗಪುರ ಸರಕಾರಿ ಪ್ರೌಢಶಾಲೆ ಹಾಗೂ ನೆಲ್ಲೂರುಪಾಲ ಮಲಾ°ಡು ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ನಾಗರಹೊಳೆಯ ಹಸಿರು ವೈಭವವನ್ನು ಕಣ್ತುಂಬಿಕೊಂಡವರು.
ನಾಗರಹೊಳೆ ಉದ್ಯಾನದಲ್ಲಿ ಸಫಾರಿ ವಾಹನದಲ್ಲಿ ಮಕ್ಕಳನ್ನು ಕರೆದೊಯ್ದ ವೇಳೆ ಆನೆ, ಜಿಂಕೆ, ಕಡವೆ, ಕಾಡೆಮ್ಮೆ, ನವಿಲು, ಕಾಡುನಾಯಿ, ಕಾಡುಹಂದಿ, ಲಂಗೂರ್ ಸೇರಿದಂತೆ ವಿವಿಧ ಜಾತಿಯ ಪ್ರಾಣಿ-ಪಕ್ಷಿಗಳನ್ನು ಪರಿಚಯಿಸಲಾಯಿತು. ಕಾಡಂಚಿನಲ್ಲಿದ್ದರೂ ಇದುವರೆಗೂ ಕಂಡಿರದ ವನ್ಯಜೀವಿಗಳನ್ನು ಕಂಡು ಉಲ್ಲಸಿತರಾಗಿದ್ದರು.
ನಿಸರ್ಗ ನಡಿಗೆ: ವಿದ್ಯಾರ್ಥಿಗಳನ್ನು ನಾಗರಹೊಳೆಯಿಂದ ನಿಸರ್ಗ ನಡಿಗೆಯಲ್ಲಿ ಕರೆದೊಯ್ದ ನಿಸರ್ಗ ಮಾರ್ಗದರ್ಶಕ ಗೋಪಿ ಅಡವಿಯಲ್ಲಿನ ತೇಗ, ಬೀಟೆ, ಹೊನ್ನೆ, ಶ್ರೀಗಂಧ, ಮತ್ತಿ, ನೆಲ್ಲಿಕಾಯಿ, ನೇರಳೆ, ಬೂರಗ, ಅತ್ತಿ, ದಿಂಡಿಲು, ಚಿಗುರುತ್ತಿರುವ ಬಿದಿರು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಪರಿಚಯಿಸಿದರು. ಈ ಮರಗಳಿಂದಾಗುವ ಅನುಕೂಲಗಳನ್ನು ತಿಳಿಸಿಕೊಟ್ಟರು. ಹತ್ತಾರು ಪಕ್ಷಿ-ಪ್ರಬೇಧಗಳು ಹಾಗೂ ನದಿ, ತೊರೆಗಳ ಬಗ್ಗೆ ಮತ್ತು ವಿವಿಧ ಪ್ರಾಣಿಗಳ ಹೆಜ್ಜೆ ಗುರುತು, ಹಿಕ್ಕೆಗಳನ್ನು ಪರಿಚಯಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ: ವನ್ಯ ಜೀವಿ ಸಂರಕ್ಷಣೆ ಕುರಿತು ವೀರನಹೊಸಹಳ್ಳಿ ವಲಯದ ಆರ್‌ಎಫ್ಒ ಮಧುಸೂದನ್ ಮಾಹಿತಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅರಣ್ಯಾಧಿಕಾರಿ ಮಧುಸೂಧನ್ ಮಾತನಾಡಿ, ಇದು ಸಂರಕ್ಷಿತ ಪ್ರದೇಶವಾದ್ದರಿಂದ ಇಲ್ಲಿ ಮರಗಳನ್ನು ತೆಗೆಯುವಂತಿಲ್ಲ. ಮಾಂಸಾಹಾರಿ ಪ್ರಾಣಿಗಳಿದ್ದರೆ ಸಸ್ಯಹಾರಿ ಪ್ರಾಣಿಗಳು ನಿಯಂತ್ರಣದಲ್ಲಿರುತ್ತವೆ. ಸರಪಳಿ ಆಹಾರ ಪದ್ಧತಿ ಇಲ್ಲಿರುವುದರಿಂದ ಎಲ್ಲ ವನ್ಯಜೀವಿಗಳನ್ನು ಸಂರಕ್ಷಿಸುವುದು ಅತ್ಯಗತ್ಯ ಎಂದರು.
ಸಾಕ್ಷ್ಯಚಿತ್ರ ಪ್ರದರ್ಶನ: ನಾಗರಹೊಳೆ ಸಂರಕ್ಷಿತ ಪ್ರದೇಶ ಹಾಗೂ ವನ್ಯ ಸಂಪತ್ತಿನ ಬಗೆಗಿನ ಸಾಕ್ಷಚಿತ್ರ ಪ್ರದರ್ಶನ ಹಾಗೂ ಪರಿಸರ ಮತ್ತು ವನ್ಯ ಪ್ರಾಣಿಗಳ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಶಿಕ್ಷಕರು ಸಹ ಮಾಹಿತಿ ಪಡೆದರು. ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
9ನೇ ತರಗತಿಯವರಿಗೆ ಮಾತ್ರ ಅವಕಾಶ: ಅರಣ್ಯ ಇಲಾಖೆಗೆ ಶಾಲೆಗಳವರು ಲಿಖೀತವಾಗಿ ಅರ್ಜಿ ಸಲ್ಲಿಸಿದಲ್ಲಿ ಆದ್ಯತೆ ಮೇರೆಗೆ 9ನೇ ತರಗತಿಯ ವಿದ್ಯಾರ್ಥಿಗಳನ್ನು ಚಿಣ್ಣರ ವನದರ್ಶನ ಯೋಜನೆಯಲ್ಲಿ ನಾಗರಹೊಳೆ ಉದ್ಯಾನಕ್ಕೆ ಉಚಿತವಾಗಿ ಕರೆತರಬಹುದು. ವನ್ಯಜೀವಿಗಳು ಹಾಗೂ ಇಲ್ಲಿನ ಪರಿಸರದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಮಧುಸೂಧನ್ ತಿಳಿಸಿದರು.