ಬಾಲ ಕುಣಿಸುತ್ತಾ ನಡೆದಾಡುತ್ತಿರುವಾಗಲೇ ಛಕ್ಕನೆ ಹಾರಿ ಬೇಟೆಯನ್ನು ಕ್ಯಾಚ್ ಮಾಡುವ ಕಲೆ ಈ ಹಕ್ಕಿಗೆ ಸಿದ್ಧಿಸಿದೆ. ಗೂಡು ಕಟ್ಟುವ ಹಾಗೂ ಕಾವು ಕೊಡುವ ಕೆಲಸವನ್ನು ಹೆಣ್ಣು ಹಕ್ಕಿಯೂ, ಮರಿಗಳಿಗೆ ಗುಟುಕು ನೀಡುವ ಕೆಲಸವನ್ನು ಗಂಡು ಹಕ್ಕಿಯೂ ನಿರ್ವಹಿಸುವುದು. FOREST WAGTAIL (Dendronanthusindicus ) (Gmeline) R M sparrow ಈ ಪಕ್ಷಿಯನ್ನು ಬೆಟ್ಟದ ಕುಂಡೆಕುಸ್ಕ, ಕಾಡು ಕುಂಡೆಕುಸ್ಕ ಎಂದೆಲ್ಲಾ ಕರೆಯುವರು. ಸದಾ ತನ್ನ ಬಾಲವನ್ನು ಮೇಲೆ ಕೆಳಗೆ ಕುಣಿಸುತ್ತಾ, ಕೆಲವೊಮ್ಮೆ ಹಾರುತ್ತಾ, ಇನ್ನು ಕೆಲವೊಮ್ಮೆ ಕುಪ್ಪಳಿಸಿ ಬೇಟೆಯಾಡಿ ಹುಳಗಳನ್ನು ಹಿಡಿಯುವುದರಿಂದ ಇದಕ್ಕೆ ಕುಂಡೆಕುಸ್ಕ ಎಂಬ ಹೆಸರು ಬಂದಿದೆ. ಗುಬ್ಬಚ್ಚಿ ಗಾತ್ರದ ಹಕ್ಕಿಯಾದರೂ ಇದರ ಬಾಲ ಮಾತ್ರ ಉದ್ದವಾಗಿದೆ. ಇದು 17-18 ಸೆಂ.ಮೀ ದೊಡ್ಡ ಇದೆ. ಬಾಲ ಇದರ ಉದ್ದದ ಮುಕ್ಕಾಲರಷ್ಟಿದೆ. ಸದಾ ಬಾಲ ಕುಣಿಸುವ ಸ್ವಭಾವ ಇದರದು.
ತರಗಲೆ ಕೆಳಗಿರುವ ಹುಳು, ಇಲ್ಲವೇ ಮರದ ಮೇಲಿರುವ ಚಿಕ್ಕ ಕ್ರಿಮಿ ಇದರ ಆಹಾರ. ಕೆಲವೊಮ್ಮೆ ಬೆಟ್ಟಗುಡ್ಡದ ಇಳಿಜಾರಿರುವ ಹಳ್ಳ, ತೊರೆ, ನೀರಿನ ಝರಿ ಇರುವಲ್ಲಿ ಇದು ಕಾಣುವುದು. ತಿಳಿ ಪಾಚಿ ಹಸಿರು ಮಿಶ್ರಿತ ಕಂದು ಬಣ್ಣ ಮೇಲ್ಮೆ„ಇದ್ದು, ಕಣ್ಣಿನ ಸುತ್ತ ತಿಳಿ ಮಚ್ಚೆ ಇದೆ. ಬಿಳಿಯ ಕಣ್ಣು ಹುಬ್ಬು ಮತ್ತು ಕಣ್ಣಿನ ಸುತ್ತ ಇರುವ ವರ್ತುಲ ಇದನ್ನು ಗುರುತಿಸಲು ಸಹಾಯ ಮಾಡುವುದು. ಎದೆ ಮತ್ತು ರೆಕ್ಕೆಯ ಮೇಲೆ ಅಚ್ಚ ಕಂದುಗಪ್ಪು ಬಣ್ಣದ ನಡುವೆ ಇರುವ ಎರಡು ಬಿಳಿ ಬಣ್ಣದ ರೇಖೆ ಇದರ ಗುರುತಿನ ಚಿಹ್ನೆ. ರೆಕ್ಕೆಯಲ್ಲಿರುವ ಕಂದುಗಪ್ಪು ಮತ್ತು ಬಿಳಿ ಗೆರೆ ಇದು ಹಾರುವಾಗ ಸ್ಪಷ್ಟವಾಗಿ ಕಾಣುವುದು. ಈ ಗುಂಪಿಗೆ ಸೇರಿದ ಇತರ ಹಕ್ಕಿಗಳಾದ ಹಳದಿ ಕುಂಡೆಕುಸ್ಕ ಹಕ್ಕಿಯ ಎದೆ, ಹಳದಿ ಬಣ್ಣ ಇದೆ. ಬೆನ್ನು ಮತ್ತು ರೆಕ್ಕೆಯ ಗರಿಯ ಕಪ್ಪು ಮತ್ತು ಕಂದು ಬಣ್ಣ ,ಬೆಟ್ಟದ ಕುಂಡೆಕುಸ್ಕಕ್ಕಿಂತ ತಿಳಿ ಬಣ್ಣ ಇದೆ. ಇದರಿಂದ ಇವೆರಡನ್ನೂ ಪ್ರತ್ಯೇಕವಾಗಿ ಗುರುತಿಸಬಹುದು.
ಬೂದು ಬಣ್ಣದ ಕುಂಡೆಕುಸ್ಕ ಹಕ್ಕಿ ಇದನ್ನೆ ಹೋಲುವುದು. ಆದರೆ, ಅದರ ಹೊಟ್ಟೆಯ ಭಾಗ ಮತ್ತು ತಲೆ, ತಿಳಿ ಹಳದಿ ಬಣ್ಣ ಇದೆ. ಇದನ್ನು ಗಮನಿಸಿ ಬೆಟ್ಟದ ಕುಂಡೆಕುಸ್ಕ ಹಕ್ಕಿಯ ಭಿನ್ನತೆ ತಿಳಿಯಬಹುದು. ಇನ್ನೊಂದು ಹಕ್ಕಿ ಬಿಳಿ ಕುಂಡೆಕುಸ್ಕ. ಇದರ ಮುಖ, ಎದೆ, ರೆಕ್ಕೆಯ ಮೇಲಿರುವ ಬಿಳಿ ಗೆರೆ ಹೆಚ್ಚು ಬಿಳಿಯಾಗಿದೆ. ಮೈ ಮತ್ತು ರೆಕ್ಕೆಯ ಇತರ ಭಾಗ ದಟ್ಟ ಬೂದು ಬಣ್ಣ ಇದೆ. ದೊಡ್ಡ ಮತ್ತು ಬಿಳಿ ಹುಬ್ಬಿರುವ ಕುಂಡೆಕುಸ್ಕ ಸಹ ಇದೆ. ಇದರ ರೆಕ್ಕೆ ಅಂಚಿನಲ್ಲಿ ಬಿಳಿ ಬಣ್ಣ ಎದ್ದು ಕಾಣುವುದು. ಮತ್ತು ಬಿಳಿ ಹುಬ್ಬು ಸ್ಪಷ್ಟವಾಗಿ ಗೋಚರಿಸುವುದು. ಹೊಟ್ಟೆ ಬಿಳಿ ಬಣ್ಣವಿದ್ದು, ತಲೆ ಮತ್ತು ಬಾಲದ ಗರಿಗಳಲ್ಲಿ ಕಪ್ಪು ಬಣ್ಣವಿದೆ. ಆದರೆ ಬೆಟ್ಟದ ಕುಂಡೆಕುಸ್ಕದ ತಲೆ ತಿಳಿ ಪಾಚಿ ಬಣ್ಣ -ತಿಳಿ ಕಂದು ಬಣ್ಣ ಮಿಶ್ರಿತವಾಗಿದೆ. ಅಚ್ಚ ಕಂದುಬಣ್ಣದ ಎದೆ ಹಾರದಂತೆ ಕಾಣುವ ಎರಡು ಪಟ್ಟೆ ಎದೆಯಲ್ಲಿದೆ. ಈ ರೀತಿಯ ಎದೆಹಾರ ಇನ್ನಾವ ವೇಗ್‌ಟೇಲ್- ಕುಂಡೆಕುಸ್ಕ ಹಕ್ಕಿಗಳ ಪ್ರಭೇಧದಲ್ಲಿ ಇಲ್ಲ.
ಬಾಲ ಕುಣಿಸುತ್ತಾ ನಡೆದಾಡುತ್ತಿರುವಾಗಲೇ ಚಕ್ಕನೆ ಹಾರಿ ರೆಕ್ಕೆ ಹುಳುಗಳನ್ನು ಮಾರ್ಗ ಮಧ್ಯದಲ್ಲೇ ಹಿಡಿಯುವ ಕಲೆ ಬೇಟೆ ಇದಕ್ಕೆ ಸಿದ್ಧಿಸಿದೆ. ಈ ಪಕ್ಷ “ಮೊಟಾಸಿಲಿಡಿಯಾ’ ಕುಟುಂಬಕ್ಕೆ ಸೇರಿದೆ. ಕುಂಡೆಕುಸ್ಕ ಹಕ್ಕಿಗಳಲ್ಲಿ ಈ ಹಕ್ಕಿ ಮಾತ್ರ ಬೆಟ್ಟದ ಮರಗಳಲ್ಲಿ ಗೂಡು ಕಟ್ಟುವುದು. ಉಷ್ಣ ವಲಯದ ಕಾಡಿನಲ್ಲಿ ತನ್ನ ಗೂಡನ್ನು ನಿರ್ಮಿಸಿ ಮರಿ ಮಾಡುವುದು. ದೊಡ್ಡ ಮರಗಳಿರುವ ಪಶ್ಚಿಮ ಘಟ್ಟದಂಥ ಕಾಡನ್ನು ತನ್ನ ನೆಲೆ ಮಾಡಿಕೊಳ್ಳುವುದು. ಗಂಡು- ಹೆಣ್ಣು ಒಂದೇ ರೀತಿ ಇರುವುದು. ಮರಿಯಾಗಿರುವಾಗ ಈ ಹಕ್ಕಿಯ ಎದೆ ಭಾಗ ತಿಳಿ ಹಳದಿ ಇರುವುದರಿಂದ ಗ್ರೇ ಕುಂಡೆಕುಸ್ಕ ಅಂದರೆ ಬೂದು ಕುಂಡೆಕುಸ್ಕ ಎಂಬ ಭ್ರಮೆ ಬರುವುದು. ಆದರೆ ಬೆಟ್ಟದ ಕುಂಡೆಕುಸ್ಕ ಹಕ್ಕಿಯ ಇನ್ನೂ ಪ್ರಾಯಕ್ಕೆ ಬರದ ಹಕ್ಕಿಗಳ ಎದೆ ಹಳದಿಬಣ್ಣ. ಬೂದು ಕುಂಡೆಕುಸ್ಕ ಹಕ್ಕಿಯ ಎದೆ ಬಣ್ಣದ ಹಳದಿಗಿಂತ ತಿಳಿಯಾಗಿರುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುವುದು. ಇದರಿಂದ ಮರಿಯಾಗಿರುವಾಗ ಮತ್ತು ಪ್ರೌಢಾವಸ್ಥೆಯ ಎರಡೂ ಬಣ್ಣಗಳನ್ನು ಗಮನಿಸಿ. ಈ ಹಕ್ಕಿಯ ಅಧ್ಯಯನ ನಡೆಸುವುದು ಅನಿವಾರ್ಯ.
ಪೂರ್ವಏಷಿಯಾ, ಕೊರಿಯ, ಚೀನಾ, ಶಿಬಿರಾ, ಆಸ್ಸಾಂ, ಶ್ರೀಲಂಕಾ, ಅಂಡಮಾನ್ ನಡುಗಡ್ಡೆಗಳಲ್ಲೂ ಮರಿ ಮಾಡಿರುವುದು ದಾಖಲಾಗಿದೆ. ಇವುಗಳ ವಲಸೆ, ವಲಸೆಯ ನಿಖರತೆ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಕೆಲವು ಅಧ್ಯಯನದ ಪ್ರಕಾರ ವಲಸೆ ಬಂದ ಹಕ್ಕಿ ವಲಸೆ ಬಂದ ಜಾಗದಲ್ಲೇ 2-3 ವರ್ಷ ಇದ್ದು ಅನಂತರ ತಿರುಗಿ ಹೋಗಿರುವುದು ಮತ್ತು ಪ್ರತಿ ವರ್ಷ ಅದೇ ಸ್ಥಳಕ್ಕೆ ಬಂದಿರುವುದು ದಾಖಲಾಗಿದೆ. ಕೇರಳ, ಬಿಳಿಗಿರಿರಂಗನ ಬೆಟ್ಟದ ಪ್ರದೇಶದಲ್ಲಿ ಬೂದು ಬಣ್ಣದಕುಂಡೆ ಕುಸ್ಕ ಇರುವುದನ್ನೂ ದಾಖಲಿಸಲಾಗಿದೆ. ನವೆಂಬರ್ ಮತ್ತು ಫೆಬ್ರವರಿ ತಿಂಗಳಲ್ಲಿ ಭಾರತ, ಹಾಗೂ ದಕ್ಷಿಣ ಭಾರತ, ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ವಲಸೆ ಬಂದಿರುವುದು ದಾಖಲಾಗಿದೆ. ಇದು ಮರಿಮಾಡುವ ಸಮಯ ಮೇ ನಿಂದ ಜೂನ್. ಆ ಸಂದರ್ಭದಲ್ಲಿ ಇದು ಟಿಸಿ, ಫೀ ಎಂದು ಎರಡು ನೋಟ್- ಇರುವ ದನಿಯನ್ನು ಹೊರಡಿಸುವುದು. ನಿತ್ಯ ಹಸಿರಿರುವ ಎತ್ತರದ ಮರಗಳಿರುವ-ಕಾಫಿ ತೋಟ, ಬೆಟ್ಟದ ಸರಹದ್ದಿನಲ್ಲಿರುವ ತೋಟ ಪಟ್ಟಿಗಳಲ್ಲಿ- ಇದು ಮರದ ಟೊಂಗೆಗೆ- ಟಿಸಿಲುಗಳಲ್ಲಿ ಬಟ್ಟಲಿನಂತೆ ಅಂಟಿಸಿದ ಗೂಡಿನಲ್ಲಿ ಮೊಟ್ಟೆ ಇಡುವುದು. ಆಸ್ಸಾಮಿನ ಉತ್ತರಚಾಹರ್ ಪ್ರದೇಶದಲ್ಲಿ ಮೊಟ್ಟೆ ಇರಿಸಿದ ಹಳೆಯ ದಾಖಲೆ ಸಹ ಇದೆ. ಭೂಮಿಗೆ ಸಮಾನಾಂತರವಾಗಿರುವ ಟೊಂಗೆಗೆ ಎಲೆ ನಾರು, ಮತ್ತು ಬಿಂಜಲು- ಜೇಡರ ಬಲೆ- ಸೇರಿಸಿ ಬಟ್ಟಲಾಕಾರದ ಗೂಡನ್ನು ಅಂಟಿಸಿ ಅದರ ಹೊರ ಮೈಗೆ ಎಂಜಲನ್ನು ಗಿಲಾನಂತೆ ನುಣುಪಾಗಿಅಂಟಿಸುವುದು. ಅದರಲ್ಲಿ ಬದನೆಕಾಯಿ ಬಣ್ಣದ ಮಚ್ಚೆ ಇರುವ ಬೂದು ಬಣ್ಣದ ಮೊಟ್ಟೆ ಇಡುವುದು. ಗೂಡು ಕಟ್ಟುವುದು ಮತ್ತು ಕಾವು ಕೊಡುವ ಕೆಲಸವನ್ನು ಹೆಣ್ಣು ಹಕ್ಕಿ ನಿರ್ವಹಿಸುವುದು. ಗಂಡುಹಕ್ಕಿ ಮರಿಗಳಿಗೆ ಗುಟುಕು ನೀಡುವುದು ಮತ್ತು ರಕ್ಷಣೆ ಕಾರ್ಯದಲ್ಲಿ ಹೆಚ್ಚು ಮುತುವರ್ಜಿ ವಹಿಸುವುದು.
ಚಿಕ್ಕರೆಕ್ಕೆ ಹುಳ, ಜೇಡ ಇದರ ಪ್ರಧಾನ ಆಹಾರ. ಜೀವ ಸಮತೋಲನ ಕಾಪಾಡಲು ಇಂತಹ ಸುಂದರ ಹಕ್ಕಿಗಳನ್ನು ಉಳಿಸುವುದು ಅನಿವಾರ್ಯ.