Advertisement

Kabini ಹಿನ್ನೀರಲ್ಲಿ 3.5 ಟನ್‌ ತ್ಯಾಜ್ಯ ಸಂಗ್ರಹಿಸಿದ ಅರಣ್ಯ ಸಿಬಂದಿ, ಸ್ವಯಂಸೇವಕರು

07:49 PM Jun 07, 2023 | Team Udayavani |

ಹುಣಸೂರು: ಪಶ್ಚಿಮ ಘಟ್ಟ ಸಾಲಿನಲ್ಲಿ ಅಭಿವೃದ್ದಿ ಮತ್ತಿತರ ಕಾರಣಗಳಿಂದ ದಿನೇದಿನೇ ಪರಿಸರ ನಾಶವಾಗುತ್ತಿದ್ದು, ಪರಿಸರ ನಾಶದಿಂದ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಆತಂಕಕಾರಿಯಾಗಿದೆ ಎಂದು ನಾಗರಹೊಳೆ ಉದ್ಯಾನವನದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಆತಂಕ ವ್ಯಕ್ತಪಡಿಸಿದರು.

Advertisement

ವಿಶ್ವಪರಿಸರ ದಿನ ಅಂಗವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ನಡೆದ ಸ್ವಚ್ಛತಾ ಆಂದೋಲನ, ಬೀಜ ಬಿತ್ತನೆ, ಸಸಿನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಗರೀಕರಣ, ರಸ್ತೆಗಳ ಅಭಿವೃದ್ದಿ ಅಭಿವೃದ್ದಿ ನೆಪದಲ್ಲಿ ಮರಗಿಡಗಳನ್ನು ಕಡಿದು ಹಾಕಿ ಯತೇಚ್ಚವಾಗಿ ಪರಿಸರ ನಾಶ ಮಾಡಿದ್ದೇವೆ. ಇಳುವರಿ ಪಡೆಯುವ ಸಲುವಾಗಿ ಭೂಮಿಗೆ ರಾಸಾಯನಿಕಗೊಬ್ಬರ, ಕ್ರಿಮಿನಾಶಕವೆಂಬ ವಿಷ ಉಣಿಸಿದ್ದೇವೆ ಇದರಿಂದಾಗಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದರೂ ಸಹ ಎಚ್ಚೆತ್ತುಕೊಳ್ಳದೆ ಮತ್ತೆಮತ್ತೆ ತಪ್ಪುಗಳನ್ನು ಮಾಡುತ್ತಲೇ ಜೀವನ ನಡೆಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ರೋಗಗಳೊಡನೆ ಜೀವನ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದು ಆತಂಕ ವ್ಯಕ್ತಪಡಿಸಿ. ಪರಿಸರ ಉಳಿಸುವುದೆಂದರೆ ಕೇವಲ ಅರಣ್ಯ ಇಲಾಖೆ, ರೈತರು, ವಿದ್ಯಾರ್ಥಿಗಳು ಮರನೆಟ್ಟರೆ ಸಾಲದು, ಪ್ರತಿಯೊಬ್ಬ ನಾಗರೀಕನೂ ಸಹ ಪರಿಸರ ಉಳುವಿಗಾಗಿ ಪಣತೊಡಬೇಕು. ಸಮಾಜದಲ್ಲಿ ಎಲ್ಲ ಸೌಲಭ್ಯ ಪಡೆದುಕೊಳ್ಳುವವರು ಕನಿಷ್ಟ ಮನೆ, ಶಾಲಾ-ಕಾಲೇಜು ಆವರಣ, ಸರಕಾರಿ ಕಚೇರಿ ಆವರಣ, ಜಮೀನು, ಹೀಗಾದಲ್ಲಿ ಮಾತ್ರ ಮುಂದೆ ಶುದ್ದಗಾಳಿ-ನೀರು ಪಡೆಯಲು ಸಾಧ್ಯವೆಂದರು.

680 ಕೆ.ಜಿ.ಬೀಜ ಬಿತ್ತನೆ:
ಈಗಾಗಲೇ ಅರಣ್ಯ ಉಳಿಸುವ, ಹೆಚ್ಚಿಸುವ ಸಲುವಾಗಿ ಅರಣ್ಯ ಇಲಾಖೆವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ನಾಗರಹೊಳೆ ವನ್ಯಜೀವಿ ವಿಭಾಗದ ವತಿಯಿಂದ ಮರ-ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 8 ವಿಭಾಗಗಳಲ್ಲೂ ಸಸಿಗಳನ್ನು ನೆಡುವ, 680 ಕೆಜಿ.ವಿವಿಧ ಜಾತಿಯ ಮರಗಳ ಬೀಜ ಬಿತ್ತುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲ ವಲಯಗಳಲ್ಲೂ ಏಕಕಾಲಕ್ಕೆ ನಡೆಯುತ್ತಿದೆ ಎಂದರು.

ಉದ್ಯಾನದಲ್ಲಿ ತ್ಯಾಜ್ಯ ಹಾಕದಂತೆ ಮನವಿ
ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ನಾಗರಹೊಳೆಯು ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಹೆಚ್ಚಿನ ಪ್ರಶಸ್ತ ಸ್ಥಳವಾಗಿದ್ದು, ವನ್ಯಪ್ರಾಣಿಗಳನ್ನು ಸಂರಕ್ಷಿಸುವ ಜವಾಬ್ದಾರಿ ನಾಗರಹೊಳೆ ವನ್ಯಜೀವಿ ವಿಭಾಗದ ಮೇಲಿದ್ದು, ಕಾಡಿನ ಪ್ರಾಣಿಗಳಾದ ಆನೆ,ಜಿಂಕೆ,ಕಾಡೆಮ್ಮೆ ಸಾಂಬರ್ ಸಸ್ಯಹಾರಿ ಪ್ರಾಣಿಗಳಾಗಿದ್ದು, ಕಬಿನಿ ಹಿನ್ನೀರಿನ ಬಳಿ ನೀರು ಕುಡಿಯಲು ಬರುವ ವೇಳೆ ಪ್ಲಾಸ್ಟಿಕ್ ತ್ಯಾಜ್ಯ ಸೇವನೆ ಮಾಡುವ ಆತಂಕವೂ ಹೆಚ್ಚಿದೆ. ಎಷ್ಟೇ ತಿಳುವಳಿಕೆ ನೀಡಿದರೂ ಸಹ ಕಬಿನಿ ಹಿನ್ನೀರಿನ ಬಳಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸಿದ ವೇಳೆ ಸುಮಾರು 3.5 ಟನ್ ನಷ್ಟು ಪ್ಲಾಸ್ಟಿಕ್ ನೀರು ಮತ್ತು ಗಾಜಿನ ಬಾಟಲ್‌ಗಳು ಸಂಗ್ರಹವಾಗಿರುವುದು ಬೇಸರದ ಸಂಗತಿಯಾಗಿದೆ. ಕಬಿನಿ ನದಿ ಪಾತ್ರದ ಜನತೆ ನದಿಗೆ ತ್ಯಾಜ್ಯ ಎಸೆಯದಂತೆ ಹಾಗೂ ಉದ್ಯಾನದೊಳಗಿನಿಂದ ಹಾಯ್ದು ಹೋಗುವ ವಾಹನ ಸವಾರರು, ಪ್ರಯಾಣಿಕರು ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಡದಂತೆ ಮನವಿ ಮಾಡಿದರು.

Advertisement

ಸ್ವಚ್ಚತಾ ಕಾರ್ಯದಲ್ಲಿ ಅಂತರಸಂತೆ ಮೇಟಿಕುಪ್ಪೆ ಮತ್ತು ಡಿ.ಜಿಕುಪ್ಪೆ ವನ್ಯ ಜೀವಿ ವಲಯದ ಅರಣ್ಯಾಧಿಕಾರಿಗಳು, ಸಿಬಂದಿ, ಕಬಿನಿ ಹಿನ್ನೀರಿನ ಬದಿಯಲ್ಲಿರುವ ಜಂಗಲ್ ಲಾಡ್ಜಸ್ ಹಾಗೂ ನಾಗರಹೊಳೆ ಉದ್ಯಾನದ ಸುತ್ತಮುತ್ತಲಿನ ಖಾಸಗಿ ರೆಸಾರ್ಟ್ ಸಿಬಂದಿ ಹಾಗೂ ಎಚ್.ಡಿ.ಕೋಟೆಯ ಪದವಿ ಕಾಲೇಜಿನ ಉಪನ್ಯಾಸಕ ರಾಮಚಂದ್ರರ ನೇತೃತ್ವದಲ್ಲಿ ೧೮೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದು, ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಎ.ಸಿ.ಎಫ್. ರಂಗಸ್ವಾಮಿ, ಅರಣ್ಯಾಧಿಕಾರಿಗಳಾದ ಸಿದ್ದೇಗೌಡ (ಅಂತರಸಂತೆ), ಮಧು(ಡಿ.ಬಿ.ಕುಪ್ಪೆ), ಹರ್ಷಿತ್ (ಮೇಟಿಕುಪ್ಪೆ), ವೀರನಹೊಸಹಳ್ಳಿಯಲ್ಲಿ ಗಣರಾಜ್‌ಪಟಗಾರ್, ಹುಣಸೂರಲ್ಲಿ ರತನ್ ಕುಮಾರ್, ಡಿಆರ್‌ಎಫ್‌ಒ ನಾರಾಯಣ್, ಸತೀಶ್, ಉಪನ್ಯಾಸಕರಾದ ಸಿದ್ದೇಗೌಡ, ಚೆನ್ನಕೇಶವ ನಾಯಕ, ಕಲ್ಲೇಶ್‌ಗೌಡ, ಜಿ.ಸಿ. ಮಹೇಂದ್ರ, ಮಹೇಶ್, ಅಮೂಲ್ಯ, ಚೈತ್ರ, ಚಂದನ, ಆಯಾ ವಲಯಗಳ ಸಿಬಂದಿಗಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next