Advertisement

Forest: ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ: ಸಚಿವ ಖಂಡ್ರೆ

05:50 PM Oct 09, 2024 | Team Udayavani |

ದಾಂಡೇಲಿ: ಎಲ್ಲ ಜೀವ ವೈವಿಧ್ಯತೆಗಳ ತಾಣವಿದ್ದರೆ ಅದು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಹಾಗೂ ಪರಿಸರ ಈ ನಾಡಿಗೆ ರಾಷ್ಟ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ. ಭೂಮಿಗೆ ಅರಣ್ಯ ಭೂಷಣ, ಅರಣ್ಯಕ್ಕೆ ವನ್ಯ ಪ್ರಾಣಿಗಳೇ ಭೂಷಣ. ಈ ನಿಟ್ಟಿನಲ್ಲಿ ಅರಣ್ಯ ಮತ್ತು ವನ್ಯಪ್ರಾಣಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ನಗರದ ಹಾರ್ನಬಿಲ್ ಸಭಾಭವನದಲ್ಲಿ ಬುಧವಾರ ನಡೆದ 70ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ಸ್ವಚ್ಛ ಹಾಗೂ ಸಮೃದ್ಧ ಪರಿಸರದಿಂದ ಕಂಗೊಳಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಸಂಪತ್ತು ನಾಡಿನ ಮಹತ್ವದ ಆಸ್ತಿ. ಇಲ್ಲಿಯ ಅರಣ್ಯ ಮತ್ತು ವನ್ಯಪ್ರಾಣಿಗಳ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಬಹುಮುಖ್ಯವಾಗಿದೆ.

ಪರಿಹಾರ ಧನ ಹೆಚ್ಚಿಸಲು ಸಿಎಂ ಜೊತೆ ಚರ್ಚಿಸುವೆ: 
ಅರಣ್ಯ ಅತಿಕ್ರಮಣಕಾರರ ಒಕ್ಕಲೆಬ್ಬಿಸದಂತೆ ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 2015ನೇ ಇಸವಿಗಿಂತ ಮೊದಲು ಮೂರು ಎಕರೆಯೊಳಗಿನ ಎಲ್ಲಾ ಅತಿಕ್ರಮಣಕಾರರಿಗೆ ಹಕ್ಕು ಪತ್ರ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಮೂರು ಎಕರೆಗಿಂತ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿ ರೆಸಾರ್ಟ್, ಹೋಂಸ್ಟೇ ನಿರ್ಮಾಣ ಮಾಡಿದವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವನ್ಯಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಗೆ ಪರಿಹಾರ ಧನ ಹೆಚ್ಚಿಸುವಲ್ಲಿ ಹಾಗೂ ಹಾವು ಕಡಿತಕ್ಕೊಳಗಾದವರಿಗೆ ಪರಿಹಾರ ಧನ ನೀಡುವ ನಿಟ್ಟಿನಲ್ಲಿಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪರಿಹಾರ ಧನದ ಮೊತ್ತ ಹೆಚ್ಚಿಸಿ: ಸಚಿವ ವೈದ್ಯ
ಕಾರ್ಯಕ್ರಮದ ಮುಖ್ಯ ಅತಿಥಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು.ಎಸ್.ವೈದ್ಯ ಮಾತನಾಡಿ ಕೇಂದ್ರ ಸರಕಾರದ ಒತ್ತಡವಿದ್ದರೂ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿರುವ ರಾಜ್ಯ ಸರಕಾರದ ನಿರ್ಧಾರ  ಸ್ವಾಗತಾರ್ಹ. ಇಂಥ ಮಹತ್ವದ ನಿರ್ಧಾರ ಕೈಗೊಂಡ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಸರಕಾರಕ್ಕೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆಗಳ ಸಲ್ಲಿಸಿದರು. ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ  ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಹಲವು ವರ್ಷಗಳ ಸಮಸ್ಯೆಗೆ ಇತಿಶ್ರೀ ಹಾಡಬೇಕು. ವನ್ಯಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಗೆ ಪರಿಹಾರ ಮತ್ತು ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಮತ್ತು ಗಂಭೀರ ಗಾಯಗೊಂಡವರಿಗೆ ನೀಡುವ ಪರಿಹಾರ ಧನದ ಮೊತ್ತ ಹೆಚ್ಚಿಸಬೇಕು ಹಾಗೂ ಹಾವು ಕಡಿತಕ್ಕೊಳಗಾದವರಿಗೂ ಪರಿಹಾರ ಧನ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಸಚಿವರಿಗೆ ಮನವಿ ಮಾಡಿದರು. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ನೀಡುವ ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಆದ್ಯತೆಯಡಿ ಅನುದಾನ ನೀಡಬೇಕೆಂದು ಮನವಿ ಮಾಡಿದರು.

Advertisement

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ: 
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವಿವಿಧ ಸಸ್ಯಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಐವರು ಸಿಬ್ಬಂದಿಗೆ ಅತ್ಯುತ್ತಮ ಸಸ್ಯಕ್ಷೇತ್ರ ನಿರ್ವಾಹಕ ಪ್ರಶಂಸನಾ ಪತ್ರ ನೀಡಲಾಯಿತು. ಜಿಲ್ಲೆಯ ಒಟ್ಟು 14 ಗ್ರಾಮ ಅರಣ್ಯ ಸಮಿತಿಗಳಿಗೆ ಲಾಭಾಂಶದ ಚೆಕ್‌ ವಿತರಿಸಲಾಯಿತು. 70ನೇ ವನ್ಯಜೀವಿ ಸಪ್ತಾಹದ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಚಿವ ಈಶ್ವರ ಖಂಡ್ರೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಕ್ಷಿಗಳ ಸರ್ವೆ ವರದಿ ಅನಾವರಣಗೊಳಿಸಲಾಯಿತು. ಶಿರಸಿ ವಿಭಾಗದಿಂದ ಕೆರೆ ಮತ್ತು ಜೇನಿನ ವಿವಿಧ ಪ್ರಬೇಧಗಳು ಹಾಗೂ ಮಧುವನ ನಿರ್ವಹಣೆ ಎಂಬ ಕೈಪಿಡಿ ಬಿಡುಗಡೆ ಮಾಡಲಾಯಿತು.

ಕೆನರಾ ವೃತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ದಾಂಡೇಲಿ ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ್, ವನ್ಯಜೀವಿ ಇಲಾಖೆ ನಿರ್ದೇಶಕನಿಲೇಶ ಶಿಂಧೆ,  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ ಚೌವ್ಹಾಣ್ ಇತತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next