Advertisement

ರೈಲ್ವೆ ಇಲಾಖೆಗೆ ಹೆಜ್ಜಾಲದ ಅರಣ್ಯ ಭೂಮಿ

12:21 PM Oct 03, 2018 | |

ಬೆಂಗಳೂರು: ನಗರದ ಸಿಟಿ ರೈಲು ನಿಲ್ದಾಣಕ್ಕೆ ಬರುವ ರೈಲುಗಳ ನಿಲುಗಡೆ ಮತ್ತು ನಿರ್ವಹಣೆಗಾಗಿ ಬಿನ್ನಿ ಮಿಲ್‌ ಜಾಗ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಇದಕ್ಕೆ ಪರ್ಯಾಯವಾಗಿ ಹೆಜ್ಜಾಲದಲ್ಲಿ ಲಭ್ಯವಿರುವ ತನ್ನ ಅರಣ್ಯ ಭೂಮಿ ನೀಡಲು ಮನಸ್ಸು ಮಾಡಿದೆ. ಈ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.

Advertisement

ಬಿನ್ನಿ ಮಿಲ್‌ ಸುತ್ತಲಿನ ಜಾಗಕ್ಕೆ ಭಾರೀ ಬೇಡಿಕೆ ಇದ್ದು, ಎಕರೆಗೆ ಅಂದಾಜು 80 ಕೋಟಿ ರೂ. ಪರಿಹಾರ ನೀಡಬೇಕಾಗುತ್ತದೆ. ನಿರ್ವಹಣಾ ಘಟಕ ನಿರ್ಮಾಣಕ್ಕೆ ಸುಮಾರು ಹತ್ತು ಎಕರೆ ಜಾಗದ ಅವಶ್ಯಕತೆ ಇದ್ದು, ಪರಿಹಾರ ಮೊತ್ತವೇ 800 ಕೋಟಿ ರೂ. ಆಗಲಿದೆ. ಇದು ಉದ್ದೇಶಿತ ಯೋಜನಾ ವೆಚ್ಚಕ್ಕಿಂತ ಹಲವು ಪಟ್ಟು ಹೆಚ್ಚಾಗುತ್ತದೆ.

ಆದ್ದರಿಂದ ಹೆಜ್ಜಾಲ ಮತ್ತು ಬಿಡದಿ ನಡುವೆ ಇರುವ ಕುಂಬಳಗೋಡು ಅರಣ್ಯ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. “ನಾಲ್ಕನೇ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣಕ್ಕೆ ಕುಂಬಳಗೋಡು ಅರಣ್ಯ ಭೂಮಿ ಜಾಗ ಗುರುತಿಸಿದ್ದು, ಈ ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸಬೇಕು’ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಈಚೆಗೆ ಸರ್ಕಾರ ಪತ್ರ ಬರೆದಿದೆ.

ಮೂಲಗಳ ಪ್ರಕಾರ ಅಲ್ಲಿ ಸುಮಾರು 1,100 ಎಕರೆಗಿಂತ ಹೆಚ್ಚು ಭೂಮಿ ಲಭ್ಯವಿದೆ. ಆದರೆ, ಹೀಗೆ ಸರ್ಕಾರದಿಂದ ಪಡೆಯುವ ಜಾಗದಲ್ಲಿ ವಾಸ್ತವವಾಗಿ ಯಾವ ಯೋಜನೆ ಕೈಗೊಳ್ಳಲಾಗುತ್ತಿದೆ? ಇದರಿಂದ ನಗರದ ಜನರಿಗೆ ಏನು ಅನುಕೂಲ? ಎಷ್ಟು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ? ಎಂಬ ಸಮಗ್ರ ಯೋಜನಾ ವರದಿ ಸಲ್ಲಿಸ‌ಬೇಕು ಎಂಬ ಷರತ್ತನ್ನೂ ಸರ್ಕಾರ ವಿಧಿಸಿದೆ.

ಪ್ಲಾಟ್‌ಫಾರಂ ವಿಸ್ತರಣೆ ಅನಿವಾರ್ಯ: ನಿತ್ಯ ನೂರಾರು ರೈಲುಗಳು ನಗರಕ್ಕೆ ಆಗಮಿಸುತ್ತವೆ. ಆದರೆ, ನಿಲುಗಡೆಗೆ ಜಾಗವೇ ಇಲ್ಲದ್ದರಿಂದ ಗಂಟೆಗಟ್ಟಲೆ ಹೊರವಲಯದಲ್ಲೇ ಕಾಯಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಅನಾನುಕೂಲ ಆಗುತ್ತಿದೆ. ಈ ಮಧ್ಯೆ ಉಪನಗರ ರೈಲು ಯೋಜನೆ ಕೂಡ ಬರುತ್ತಿದ್ದು, ಎರಡು ಪ್ಲಾಟ್‌ಫಾರಂಗಳನ್ನು ಇದಕ್ಕಾಗಿಯೇ ಮೀಸಲಿಡಬೇಕಾಗುತ್ತದೆ.

Advertisement

ಇನ್ನು ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಮಧ್ಯೆ ಮೆಂಟೆನನ್ಸ್‌ ಯಾರ್ಡ್‌ (ನಿರ್ವಹಣಾ ಘಟಕ) ಇದೆ. ಪ್ರಸ್ತುತ ರೈಲು ಮತ್ತು ಪ್ರಯಾಣಿಕರದಟ್ಟಣೆ ಸಾಕಷ್ಟು ಏರಿಕೆಯಾಗಿದ್ದು, ಈ ಯಾರ್ಡ್‌ ಅನ್ನು ಬಿನ್ನಿಮಿಲ್‌ಗೆ ಸ್ಥಳಾಂತರಿಸಿ, ತೆರವಾಗುವ ಜಾಗದ ಜತೆಗೆ ರೈಲ್ವೆ ಇಲಾಖೆ ಬಳಿ ಇರುವ ಮತ್ತಷ್ಟು ಭೂಮಿಯನ್ನು ಬಳಸಿಕೊಂಡು ಪ್ಲಾಟ್‌ಫಾರಂಗಳ ಸಂಖ್ಯೆ ಹೆಚ್ಚಿಸಲು ನೈರುತ್ಯ ರೈಲ್ವೆ ಉದ್ದೇಶಿಸಿದೆ.

ಈ ಸಂಬಂಧ ರೈಟ್ಸ್‌ ಅಧ್ಯಯನ ನಡೆಸಿ, 2017ರಲ್ಲಿ ವರದಿ ಸಲ್ಲಿಸಿದೆ. ಅದರಂತೆ ಈ ಯೋಜನೆಗೆ ಬಿನ್ನಿಮಿಲ್‌ನ 9.56 ಎಕರೆ ಜಾಗ ಬೇಕಾಗುತ್ತದೆ ಎಂದು ಹೇಳಿದೆ. ಈ ಮಧ್ಯೆ ಬಿನ್ನಿಮಿಲ್‌ ಭೂಮಿ ಸ್ವಾಧೀನಪಡಿಸಿಕೊಂಡು ತಮಗೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಕಚೇರಿ ಆರೋಪಿಸುತ್ತಿತ್ತು.

ಆದರೆ, “ಬಿನ್ನಿಮಿಲ್‌ ಭೂಸ್ವಾಧೀನ ಸಾಧ್ಯವಿಲ್ಲ. ಪರ್ಯಾಯ ಜಾಗ ನೀಡಲಾಗುವುದು’ ಎಂದು ಈ ಮೊದಲೇ ರೈಲ್ವೆ ಇಲಾಖೆಗೆ ಸ್ಪಷ್ಟಪಡಿಸಲಾಗಿದೆ. ಆದರೂ ಯೋಜನೆ ವಿಳಂಬಕ್ಕೆ ಸರ್ಕಾರದತ್ತ ಬೊಟ್ಟುಮಾಡುವುದು ಎಷ್ಟು ಸರಿ ಎಂದು ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.
 
ಬೇಡಿಕ ದುಪ್ಪಟ್ಟು?: ಈ ನಡುವೆ ಬಿನ್ನಿಮಿಲ್‌ ವ್ಯಾಪ್ತಿಯಲ್ಲಿ ಪಿಟ್‌ಲೆçನ್‌, ಸ್ಟೇಬಲಿಂಗ್‌ ಲೈನ್‌ ನಿರ್ವಹಣೆಗಾಗಿ ಹತ್ತು ಎಕರೆಗೆ ರೈಲ್ವೆ ಇಲಾಖೆ ಬೇಡಿಕೆ ಇಟ್ಟಿತ್ತು. ಹೆಜ್ಜಾಲ-ಬಿಡದಿ ನಡುವಿನ ಕುಂಬಳಗೋಡು ಅರಣ್ಯದಲ್ಲಿ ನಾಲ್ಕನೇ ಕೋಚಿಂಗ್‌ ಟರ್ಮಿನಲ್‌ಗೆ 160 ಎಕರೆ ಕೇಳುತ್ತಿದೆ. ಆದರೆ, ಟರ್ಮಿನಲ್‌ಗೆ ಅಗತ್ಯ ಇರುವ ಭೂಮಿ ಅಬ್ಬಬ್ಟಾ ಎಂದರೆ 80 ಎಕರೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಯೋಜನೆಗೆ ಸಂಬಂಧಿಸಿದ ಸ್ಪಷ್ಟ ನೀಲನಕ್ಷೆ ತಮ್ಮ ಮುಂದಿಡುವಂತೆ ಸರ್ಕಾರ ಕೋರಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ. 

ಬೆಲೆ ಗಗನಕ್ಕೇರಲು ಏನು ಕಾರಣ?: ಬಿನ್ನಿಮಿಲ್‌ ಸುತ್ತಮುತ್ತ ಸಾಕಷ್ಟು ಅಪಾರ್ಟ್‌ಮೆಂಟ್‌ಗಳು ಬಂದಿವೆ. ಹತ್ತಿರದಲ್ಲೇ ಮೆಟ್ರೋ ಹಾದುಹೋಗಿದೆ. ಮೆಜೆಸ್ಟಿಕ್‌ ಕೂಡ ಅಣತಿ ದೂರದಲ್ಲೇ ಇದೆ. ಈ ಎಲ್ಲ ಕಾರಣಗಳಿಂದ ಉದ್ದೇಶಿತ ಜಾಗದ ಬೆಲೆ ಗಗನಕ್ಕೇರಿದೆ.

ಇದನ್ನು ವಶಪಡಿಸಿಕೊಂಡರೆ, ಪರಿಹಾರಕ್ಕಾಗಿಯೇ ನೂರಾರು ಕೋಟಿ ರೂ. ಸುರಿಯಬೇಕಾಗುತ್ತದೆ. ಅಷ್ಟಕ್ಕೂ ಹೃದಯಭಾಗದಲ್ಲಿರುವ ಜಾಗವನ್ನು ಅದರ ಮಾಲಿಕರು ಮಾರಾಟ ಮಾಡಲು ಮನಸ್ಸು ಮಾಡುತ್ತಾರೆಯೇ ಎಂಬುದೂ ಅನುಮಾನ. ಈ ಹಿನ್ನೆಲೆಯಲ್ಲಿ ಟರ್ಮಿನಲ್‌ಗಾಗಿಯೇ ಪರ್ಯಾಯ ಜಾಗವನ್ನು ಸರ್ಕಾರ ಗುರುತಿಸಿದೆ. 

ಪ್ರಸ್ತುತ ಸಂದರ್ಭದಲ್ಲಿ ನಗರದ ಹೃದಯಭಾಗದಲ್ಲಿ ಭೂಮಿ ಸಿಗುವುದು ಕಷ್ಟವೇ. ಆದರೆ, ಪರ್ಯಾಯ ಭೂಮಿ ನೀಡುವ ಬಗ್ಗೆ ಸರ್ಕಾರದಿಂದ ಅಧಿಕೃತ ಪತ್ರ ಬಂದಿಲ್ಲ. ಪರ್ಯಾಯ ಜಾಗದಲ್ಲಿ 4ನೇ ಟರ್ಮಿನಲ್‌ ನಿರ್ಮಿಸಲು ಅನುಕೂಲ ಆಗಲಿದೆ. 
-ಇ.ವಿಜಯಾ, ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

ಸಿಟಿ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಯೋಜನೆಯಿದೆ. ಇದಕ್ಕೆ ಬಿನ್ನಿಮಿಲ್‌ ಜಾಗ ಅಗತ್ಯವಿದೆ. ಯೋಜನೆಯನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ.
-ಪ್ರಕಾಶ್‌ ಮಂಡೂತ್‌, ಮೆಟ್ರೋ, ಉಪನಗರ ರೈಲು ಪ್ರಯಾಣಿಕರ ಒಕ್ಕೂಟದ ಅಧ್ಯಕ್ಷ

ದಶಕದಿಂದಲೂ ಬಿನ್ನಿಮಿಲ್‌ ಜಾಗ ಬೇಕು ಎಂದು ರೈಲ್ವೆ ಇಲಾಖೆ ಹೇಳುತ್ತಿದೆ. ಆದರೆ, ಅಲ್ಲಿ ಏನು ಮಾಡಲು ಹೊರಟಿದೆ ಎಂಬ ಮಾಸ್ಟರ್‌ ಪ್ಲಾನ್‌ ಅನ್ನು ಬಹಿರಂಗಪಡಿಸಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಅಗತ್ಯ ಭೂಮಿ ಒದಗಿಸಬೇಕು.
-ಸಂಜೀವ ದ್ಯಾಮಣ್ಣವರ, ಪ್ರಜಾ ಸಂಸ್ಥೆ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next