Advertisement

ಅರಣ್ಯ ರಕ್ಷಕ ಸಿಬ್ಬಂದಿ ಸಂಬಳ ಕೇವಲ 11 ಸಾವಿರ! ಜೀವನ ನಡೆಸುವುದೇ ದುಸ್ತರ

01:31 PM Jan 17, 2022 | Team Udayavani |

ಶಿವಮೊಗ್ಗ: ಒಂದಲ್ಲ, ಎರಡಲ್ಲ, 27 ಸಾವಿರ ಹೆಕ್ಟೇರ್‌ ಅರಣ್ಯ ರಕ್ಷಿಸುತ್ತಿರುವ ಸಿಬ್ಬಂದಿ ಕನಿಷ್ಟ ಕೂಲಿಗಿಂತಲೂ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ದಶಕದಿಂದ ಕೇವಲ 11 ಸಾವಿರ ರೂ. ಪಡೆಯುತ್ತಿರುವ ಇವರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ.

Advertisement

1937ರಲ್ಲಿ ಆರಂಭವಾದ ಭದ್ರಾವತಿಯ ಎಂಪಿಎಂ ಕಾರ್ಖಾನೆ ಅತ್ಯುತ್ತಮ ಗುಣಮಟ್ಟದ ಪೇಪರ್‌ ಒದಗಿಸುತ್ತಿತ್ತು. ಇದಕ್ಕೆ ಇಡೀ ದೇಶದಲ್ಲೇ ಬೇಡಿಕೆ ಇತ್ತು. ಇಂತಹ ಪೇಪರ್‌ಗೆ ಕಚ್ಚಾ ವಸ್ತು
ಪೂರೈಕೆಯಾಗುತ್ತಿದ್ದುದು ಮಲೆನಾಡಿನಲ್ಲಿ ಬೆಳೆಸಿದ ನೀಲಗಿರಿ, ಅಕೇಶಿಯಾದಿಂದ. ಎಂಪಿಎಂ ಕಾರ್ಖಾನೆ ಆರಂಭಗೊಂಡ ನಂತರ ಕಚ್ಚಾವಸ್ತು ಪೂರೈಕೆಗೆ 27 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿಯಲ್ಲಿ ಮೀಸಲಿಡಲಾಗಿತ್ತು. ಈ ಅರಣ್ಯ ರಕ್ಷಣೆಗೆ ವಾಚರ್‌ ಗಳನ್ನು ನೇಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ತೀರಾ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಇವರಿಗೆ ಈವರೆಗೂ ಕನಿಷ್ಟ ಕೂಲಿ ದೊರೆತಿಲ್ಲ.

ಸರ್ಕಾರವೇ ಇವರನ್ನು ದಿನಗೂಲಿ ನೌಕರರ ವಿಧೇಯಕದಡಿ ಪರಿಗಣಿಸಿ “ಡಿ’ ಗ್ರೂಪ್‌ ನೌಕರರಿಗೆ ನೀಡುವಷ್ಟು ಸಂಬಳ ನೀಡಬೇಕು ಎಂದು ಹೇಳಿದ್ದರೂ ಈವರೆಗೆ ಪಾಲನೆಯಾಗಿಲ್ಲ. ಜಗದೀಶ್‌ ಶೆಟ್ಟರ್‌ ಸಿಎಂ ಆದ ಅವಧಿಯಲ್ಲಿ ಅನೇಕ ಇಲಾಖೆಯಲ್ಲಿ ಇದ್ದ 23 ಸಾವಿರ ನೌಕರರನ್ನು ವಿಧೇಯಕದಡಿ ಒಳಪಡಿಸಿ “ಡಿ’ ಗ್ರೂಪ್‌ ನೌಕರರಿಗೆ ಸಿಗುವಷ್ಟು ವೇತನ ಒದಗಿಸಲಾಗಿದೆ. ಆದರೆ ಕೈಗಾರಿಕಾ ಇಲಾಖೆ ಇದನ್ನು ಪಾಲನೆ ಮಾಡಿಲ್ಲ. “ಡಿ’ ಗ್ರೂಪ್‌ ನೌಕರರಿಗೆ 18 ಸಾವಿರ ರೂ. ಪ್ರಾಥಮಿಕ ವೇತನ ಇದ್ದು ಅದರ ಜತೆ ಇನ್ನಷ್ಟು ಸೌಲಭ್ಯಗಳು ದೊರೆಯುತ್ತಿವೆ. 20
ವರ್ಷದಿಂದ 9 ಸಾವಿರ ರೂ. ವೇತನ ದೊರೆಯುತಿತ್ತು.

2008ರಿಂದ ಅದನ್ನು 11400 ರೂ.ಗೆ ಏರಿಸಲಾಗಿದೆ. ಅಲ್ಲಿಂದ ಇಲ್ಲಿವರೆಗೆ ವೇತನ ಏರಿಕೆಯಾಗಿಲ್ಲ. ಬಟ್ಟೆ, ಶೂ, ರಜೆ ಸಂಬಳ, ಬೋನಸ್‌ ಕೂಡ 2012ರಿಂದ ಬಂದ್‌ ಆಗಿದೆ. ವರ್ಷದ ಹಿಂದೆ ಕಾರ್ಖಾನೆ ಸಂಪೂರ್ಣ ಲಾಕ್‌ಡೌನ್‌ಗೆ ಆದೇಶ ಮಾಡಲಾಗಿದೆ. ಇರುವ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಖಾಸಗಿಯವರಿಗೆ ಮಾರಾಟ ಮಾಡುವ ಉದ್ದೇಶದಿಂದ 2020ರಲ್ಲಿ ಪೂರ್ಣಗೊಂಡ ಲೀಸ್‌ ಅವಧಿಯನ್ನು ಮತ್ತೆ 40 ವರ್ಷಕ್ಕೆ ವಿಸ್ತರಿಸಲಾಗಿದೆ. ಖಾಸಗೀಕರಣಕ್ಕೆ ಗ್ಲೋಬಲ್‌ ಟೆಂಡರ್‌ ಕರೆದಿದ್ದರೂ ಯಾರೂ ಬಿಡ್‌ ಮಾಡಿರಲಿಲ್ಲ. ಇತ್ತ ಅರಣ್ಯ ಇಲಾಖೆ
ನೌಕರರ ನೋವು ಸರಕಾರಕ್ಕೆ ಮುಟ್ಟುತ್ತಿಲ್ಲ.

10 ಕಿಮೀ ಸುತ್ತಬೇಕು
ದಶಕದ ಹಿಂದೆ 540 ನೌಕರರು ಇದ್ದು ಈಗ 280 ಮಾತ್ರ ಇದ್ದಾರೆ. ಎಂಪಿಎಂ ಕಾರ್ಖಾನೆ ವ್ಯಾಪ್ತಿಯಲ್ಲಿ 27 ಸಾವಿರ ಹೆಕ್ಟೇರ್‌ ಅರಣ್ಯ ಇದ್ದು ಅದು ಶಿವಮೊಗ್ಗ, ಭದ್ರಾವತಿ, ಹೊಸನಗರ,
ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಸಾಗರ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ತರೀಕೆರೆ, ದಾವಣಗೆರೆ ತಾಲೂಕಿನ ಚನ್ನಗಿರಿಯ ವ್ಯಾಪ್ತಿಯಲ್ಲಿ ಈ ಅರಣ್ಯ ಬರಲಿದೆ. 280 ಮಂದಿ
ಮೊದಲು ತಲಾ 60-70 ಹೆಕ್ಟೇರ್‌ ಅರಣ್ಯ ಕಾವಲು ಕಾಯಬೇಕಿತ್ತು. ಸಿಬ್ಬಂದಿ ಕಡಿಮೆಯಾದ ಮೇಲೆ 150 ಹೆಕ್ಟೇರ್‌ಗೆ ಏರಿಕೆಯಾಗಿದೆ. ದಿನಕ್ಕೆ 8ರಿಂದ 10 ಕಿಮೀ ನಡೆಯಬೇಕು. ಈಗಿರುವ
ಪೆಟ್ರೋಲ್‌ ದರದಲ್ಲಿ ಬೈಕ್‌ ಓಡಿಸೋದು ಕಷ್ಟ. 10 ವರ್ಷದಿಂದ ಈಚೆಗೆ ದಿನಬಳಕೆ ವಸ್ತುಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಸಂಬಳ ಮಾತ್ರ ಅಷ್ಟೇ ಇದೆ. ಬಹುತೇಕ ನೌಕರರು 50 ವರ್ಷ
ಮೇಲ್ಪಟ್ಟವರಾಗಿದ್ದಾರೆ. ಉದ್ಯೋಗ ಭದ್ರತೆ ಸಿಗದೆ ಮುಂದೆ ದಾರಿ ಕಾಣದೆ ಅತಂತ್ರರಾಗಿದ್ದಾರೆ.

Advertisement

2008ರಿಂದ 11400 ರೂ. ವೇತನ ಸಿಗುತಿತ್ತು. ಹೋರಾಟದ ನಂತರ 2018ರಲ್ಲಿ ನಮ್ಮನ್ನು ದಿನಗೂಲಿ ವಿಧೇಯಕದಡಿ ಸೇರಿಸಲಾಗಿದೆ. ಆದರೂ ನಮ್ಮ ಸಂಬಳ 11857 ರೂ. ದಾಟಿಲ್ಲ. ಪಿಎಫ್‌, ಇಎಸ್‌ಐ, ಬೂಟ್‌, ಬಟ್ಟೆ, ಬೋನಸ್‌, ರಜೆ ಭತ್ಯೆ ಎಲ್ಲವನ್ನೂ ಸೇರಿಸಿ ಮರು ಹೊಂದಾಣಿಕೆ ಮಾಡಲಾಗಿದೆ. ಒಟ್ಟು 15410 ರೂ. ಸಂಬಳ ತೋರಿಸಿದ್ದು ಕೈಗೆ ಸಿಗುವುದು 11857 ರೂ. ಮಾತ್ರ.
ದಿನಗೂಲಿ ವಿಧೇಯಕದ ಪ್ರಕಾರ “ಡಿ’ ಗ್ರೂಪ್‌ ನೌಕರರಂತೆ ಮೂಲ ವೇತನ 18 ಸಾವಿರಕ್ಕೆ ಏರಿಸಬೇಕು.
– ನೊಂದ ಎಂಪಿಎಂ ಅರಣ್ಯ ಇಲಾಖೆ ನೌಕರರು

– ಶರತ್ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next