ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಬಳಿಯ ಮೈಲಾರಪುರ ಅರಣ್ಯಕಾವಲ್ ಪ್ರದೇಶದಲ್ಲಿ ಚಿರತೆ ಸೆರೆಗೆ ಇಟ್ಟಿದ್ದ ಬೋನ್ ವೀಕ್ಷಿಸಲು ಹೋಗಿದ್ದ ಬಸವರಾಜ್ ಎಂಬ ಅರಣ್ಯ ಇಲಾಖೆ ಗಾರ್ಡ್ ಕಾಣೆಯಾಗಿದ್ದು, ರಾತ್ರಿವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ಚಿರತೆಯೊಂದು ನನ್ನನ್ನು ಹಿಂಬಾಲಿಸುತ್ತಿದೆ. ಬೇಗ ಬಂದು ಕಾಪಾಡಿ ಎಂದು ಹರೀಶ್ ಎಂಬ ಸಹೋದ್ಯೋಗಿಗೆ ಬೆಳಗ್ಗೆ ಪೋನ್ ಮಾಡಿ ಕಟ್ ಮಾಡಿದ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ಇತ್ತೀಚೆಗೆ ಹಾರಗೊಂಡನಹಳ್ಳಿ ಸುತ್ತಮುತ್ತಲಿರುವ ಗುಡ್ಡದ ಸಮೀಪದ ತೋಟಗಳಲ್ಲಿ ಚಿರತೆ ಕಾಣಿಸಿಕೊಳ್ಳುತಿತ್ತು. ಇದರಿಂದಾಗಿ ಅಲ್ಲಿನ ಜನರು ಭಯಭೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆಹಿಡಿಯಲು ಗುಡ್ಡದ ಬಳಿ ಬೋನ್ ಅಳವಡಿಸಿತ್ತು. ಈ ಸಂಬಂಧ ಮಂಗಳವಾರ ಬೆಳಿಗ್ಗೆಯೇ ಅರಣ್ಯ ವೀಕ್ಷಕ ಬಸವರಾಜಪ್ಪ ಅಳವಡಿಸಿರುವ ಬೋನ್ ವೀಕ್ಷಿಸಿ ನಂತರ ಪೋನ್ ಮೂಲಕ ನನಗೆ ಅಲ್ಲಿನ ಬಗ್ಗೆ ಮಾಹಿತಿ ನೀಡಿದರು.
ಬೆಳಿಗ್ಗೆ ಸುಮಾರು 9.30ರ ಸಮಯದಲ್ಲಿ ಫಾರೆಸ್ಟ್‍ಗಾರ್ಡ್ ಹರೀಶ್ ಎನ್ನುವವರಿಗೆ ಪೋನ್ ಮಾಡಿರುವ ವೀಕ್ಷಕ ಬಸವರಾಜಪ್ಪ, ನಾನು ಮೈಲಾರಪುರ ಅರಣ್ಯಕಾವಲ್ ಪ್ರದೇಶಕ್ಕೆ ಬಂದಿದ್ದು, ಚಿರತೆ ನನ್ನನ್ನೇ ಹಿಂಬಾಲಿಸಿ ಬರುತ್ತಿದೆ. ಬೇಗ ಬಂದು ನನ್ನನ್ನು ಕಾಪಾಡಿ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಪೋನ್ ಕರೆ ಬಂದ ಸ್ಥಳಕ್ಕೆ ಹೋಗಿ ನೋಡಿದರೆ ಅಲ್ಲಿ ಆತನ ಬ್ಯಾಗ್ ಮಾತ್ರ ಇತ್ತು. ಪುನಃ ಪೋನ್ ಮಾಡಿದರೇ ಸ್ವಿಚ್ ಬರುತ್ತಿದೆ. ಬೆಳಿಗ್ಗೆಯಿಂದ ಹುಡುಕಿದ್ದೇವೆ. ಬಸವರಾಜಪ್ಪನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಚಿರತೆ ದಾಳಿ ಮಾಡಿರುವ ಬಗ್ಗೆಯೂ ಸ್ಥಳದಲ್ಲಿ ಯಾವುದೇ ಕುರುಹು ದೊರಕಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ್ ತಿಳಿಸಿದ್ದಾರೆ.
ಶ್ರೀರಾಂಪುರ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.