ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು, ಸುಮಾರು ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ.
ಮಂಗಲ ಉತ್ತರ ದಿಕ್ಕಿನ ಗುಡ್ಡದಲ್ಲಿ ಶನಿವಾರ 11.30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿದು ಅರಣ್ಯ ನೌಕರರು, ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ, ಇದು ಮುಗಿಯುತ್ತಿದ್ದಂತೆ ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಬೆಂಕಿ ಮಗುವಿನಹಳ್ಳಿ ಗೌರಕಲ್ಲುಗುಡ್ಡದ ಬಳಿ ಸುಮಾರು 15ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿತು.
ಶನಿವಾರ ಸಂಜೆ ವೇಳೆಗೆ ಗಾಳಿ ವೇಗಕ್ಕೆ ಬೆಂಕಿ ತನ್ನ ಕೆನ್ನಾಲಿಗೆ ಚಾಚುತ್ತಾ ಸಾಗಿತ್ತು. ಅರಣ್ಯ ಇಲಾಖೆ ನೂರಕ್ಕೆ ಹೆಚ್ಚು ನೌಕರರು ಅಡ್ಡ ಬೆಂಕಿ ಕೊಟ್ಟ ಮತ್ತು ಸಾಧನ ಸಲಕರಣೆ ಬಳಸುವ ಮೂಲಕ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ದಟ್ಟ ಹೊಗೆ, ಭಾರಿ ಶಬ್ಧದೊಂದಿಗೆ ಬೆಂಕಿ ಜ್ವಾಲೆ ಹರಡುವ ವೇಗ ನೋಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವರು ಭಯ ಬೀಳುವ ವಾತವರಣ ಸೃಷ್ಟಿಯಾಗಿತ್ತು.
ಕಾಡ್ಗಿಚ್ಚು ಸಂಭವಿಸಿದ ಪ್ರದೇಶದಲ್ಲಿದ್ದ ಮರ, ಗಿಡ, ಹಾವು ಸೇರಿ ಇನ್ನಿತರ ಪ್ರಾಣಿ ಪಕ್ಷಿಗಳು ಸಾವಿಗೀಡಾಗಿದೆ. ಪ್ರಸ್ತುತ ಬೇಸಿಗೆ ಕಾಲವಾದ ಹಿನ್ನೆಲೆ ಬಂಡೀಪುರ ಅಭಯಾರಣ್ಯ ಸಂಪೂರ್ಣ ವಾಗಿ ಒಣಗಿ ನಿಂತಿದೆ. ಇದರಿಂದ ಕಾಡ್ಗಿಚ್ಚು ಸಹಜವಾಗಿ ಕಾಣಿಸಿಕೊಳ್ಳುತ್ತಿದೆ.
ಪ್ರಸಕ್ತ ವರ್ಷ ಉತ್ತಮ ಮಳೆಯಾದ ಕಾರಣ ಅರಣ್ಯದಲ್ಲಿ ಹುಲ್ಲು, ಲಂಟಾನಾ ಇತರೆ ಗಿಡಗಂಟಿ ಬೆಳೆದು ನಿಂತಿವೆ. ಹೀಗಾಗಿ ಬೆಂಕಿ ನಿರೀಕ್ಷೆಗೂ ಮೀರಿದ ವೇಗದಲ್ಲಿ ಹರಡುತ್ತದೆ. ಈ ಹಿನ್ನೆಲೆ ಅರಣ್ಯ ಇಲಾಖೆ ದಟ್ಟಾರಣ್ಯಕ್ಕೆ ಬೆಂಕಿ ವ್ಯಾಪಿಸುವುದನ್ನು ತಡೆಯಲು ಬೆಂಕಿ ರೇಖೆಯನ್ನು ವಿಶಾಲವಾಗಿ ನಿರ್ಮಿಸಬೇಕಾಗಿತ್ತು. ಆದರೆ, ಅರಣ್ಯ ಇಲಾಖೆಯಿಂದ ಅಂತಹ ಪ್ರಯತ್ನ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.