ಚನ್ನರಾಯಪಟ್ಟಣ: ಬಂಡಿಪುರ ಮತ್ತು ನಾಗರಹೊಳೆ ಅರಣ್ಯಕ್ಕೆ ಕಿಡಿ ಗೇಡಿಗಳು ಬೆಂಕಿ ಹಾಕುವ ಮೂಲಕ ಸುಮಾರು 20 ಎಕರೆ ಅರಣ್ಯ ಸಂಪೂರ್ಣ ನಾಶವಾಗಲು ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಾಗರ್ ಜಿ.ಪಾಟೀಲ್ ಆರೋಪಿಸಿದರು. ತಾಲೂಕಿನ ಹಡೇನಹಳ್ಳಿ ಗುಡ್ ಸಿಟಿಜನ್ ಶಾಲೆಯಲ್ಲಿ ತಾಲೂಕು ಕಾನೂನುಗಳ ಸೇವೆ ಮತ್ತು ವಕೀಲರ ಸಂಘ ಏರ್ಪಡಿಸಿದ್ದ ರಾಷ್ಟ್ರೀಯ ಜಲ ದಿನ ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ಅರಣ್ಯ ಪ್ರದೇಶವಿರುವ ಕಡೆ ಬೇಸಿಗೆ ವೇಳೆ ಅಗ್ನಿಶಾಮಕ ದಳ ತೆರೆಯಬೇಕಿದೆ. ಹೆಚ್ಚು ಸಿಬ್ಬಂದಿ ನೇಮಕ ಮಾಡುವ ಮೂಲಕ ಅರಣ್ಯ ನಾಶವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಕೆಲಸ. ಇದನ್ನು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಸಸಿಗಳನ್ನು ಬೆಳೆಸಿ: ಕೇಂದ್ರ-ರಾಜ್ಯ ಸರ್ಕಾರಗಳು ಪ್ರತಿ ವರ್ಷ ಬಜೆಟ್‌ನಲ್ಲಿ ಅರಣ್ಯ ಅಭಿವೃದ್ಧಿಗೆ ಹಣ ಮೀಸಲಿಡುತ್ತವೆ. ಆದರೆ, ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದನ್ನು ಗಮನಿಸುವುದಿಲ್ಲ. ಹಲವು ಅರಣ್ಯ ಒತ್ತುಯಾಗುತ್ತಿದ್ದು ಇದನ್ನು ಬಿಡಿಸಿ ಮರ ಗಿಡ ಬೆಳೆಸಲು ಮುಂದಾಗುತ್ತಿಲ್ಲ, ಅರಣ್ಯದ ಹೆಸರಿನಲ್ಲಿ ಕೋಟ್ಯಂತರ ರೂ., ಸಾರ್ವಜನಿಕ ತೆರಿಗೆ ಹಣ ಪ್ರತಿ ವರ್ಷ ದುಂದು ವೆಚ್ಚವಾಗುತ್ತಿದೆ ಎಂದು ಹೇಳಿದರು.
ನೀರಿನ ಬಂಕ್ ತಲೆಎತ್ತಲಿವೆ: ಅಪಾರ ಅರಣ್ಯ ಸಂಪತ್ತನ್ನು ಹೊಂದಿದ್ದ ಭಾರತ ಪ್ರಸ್ತುತ ದಿನಗಳಲ್ಲಿ ವಿನಾಶದ ಹಾದಿಯತ್ತ ಸಾಗುತ್ತಿದೆ. ಪರಿಸರ ಮತ್ತು ಅರಣ್ಯ ಅಭಿವೃದ್ಧಿಗೊಳಿಸುವ ಮೂಲಕ ಜಲ ಮೂಲ ಉಳಿಸಬೇಕಿದೆ. ನಿರ್ಲಕ್ಷ್ಯ ಮುಂದುವರಿದರೆ ಮುಂದೊಂದು ದಿನ ಪೆಟ್ರೋಲ್ ಬಂಕ್‌ಗಳ ರೀತಿಯಲ್ಲಿ ನೀರಿನ ಬಂಕ್‌ಗಳು ತಲೆ ಎತ್ತಲಿವೆ ಎಂದು ಭವಿಷ್ಯ ನುಡಿದರು.
ಅವನತಿ: ಸಿವಿಲ್ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ, ಪರಿಸರ ಉಳಿಸುವಲ್ಲಿ ಕಾಳಜಿ ತೋರದಿದ್ದರೆ ಮುಂದೊಂದು ದಿನ ಕುಡಿಯಲು ನೀರು ದೊರೆಯದೆ ತೊಂದರೆ ಅನುಭವಿಸಬೇಕಾಗುತ್ತದೆ. ಮಾನವರ ದುರಾಸೆಗಾಗಿ ಅರಣ್ಯ ನಾಶವಾಗುತ್ತಿದ್ದು ತಾಪಮಾನ ಹೆಚ್ಚುತ್ತಿದೆ. ಇದರಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದಲ್ಲದೆ ಜೀವ-ಸಂಕುಲ ಅವನತಿಯತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಭಿವೃದ್ಧಿ ಇಲ್ಲ: ರಾಜ ಮಹಾರಾಜರ ಕಾಲದಲ್ಲಿ ಪ್ರತಿ ಗ್ರಾಮಗಳಲ್ಲಿ ಕೆರೆ, ಕಟ್ಟೆ ನಿರ್ಮಿಸುವ ಮೂಲಕ ಪ್ರಕೃತಿ ಉಳಿಸುವುದೊರಂದಿಗೆ ಅಂತರ್ಜಲ ವೃದ್ಧಿ, ಕೃಷಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು. ಆದರೆ ಇಂದು ಆಧುನಿಕತೆಗೆ ಮಾರು ಹೋಗಿ ಅಭಿವೃದ್ಧಿ ನೆಪದಲ್ಲಿ ಕೆರೆ ಕಟ್ಟೆಗಳನ್ನು ನಾಶ ಮಾಡುತ್ತಿದ್ದಾರೆಂದರು. ವಕೀಲ ಮಂಜೇಶ್ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಆಂಥೋನಿ ಜೋಸೆಫ್ ಇದ್ದರು.
ಕಾಡು ಸಹಜ ಸ್ಥಿತಿಗೆ ಬರಲು 30 ವರ್ಷ ಬೇಕು: ನಾಗರಹೊಳೆ ಅರಣ್ಯ ಪ್ರದೇಶದ ಸಹಜ ಸ್ಥಿತಿಗೆ ಬರಲು ಕನಿಷ್ಠ 30 ವರ್ಷ ಬೇಕು. ಅಲ್ಲಿನ ಅನೇಕ ಕಾಡು ಪ್ರಾಣಿಗಳು ಸಜೀವವಾಗಿ ದಹಣವಾಗಿವೆ. ಅರಣ್ಯ ಒಳ ಭಾಗದ ಖಾಲಿ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಿ ವನ್ಯ ಜೀವಿಗಳಿಗೆ ಸಹಕಾರ ನೀಡಬೇಕು, ಅಲ್ಲಲ್ಲಿ ದೊಡ್ಡ ತೊಟ್ಟಿ ನಿರ್ಮಾಣ ಮಾಡಿ ನೀರು ಸಂಗ್ರಹ ಮಾಡಲು ಅರಣ್ಯ ಇಲಾಖೆ ಮುಂದಾಗಬೇಕು, ಅರಣ್ಯ ಸಂಪತ್ತು ಉಳಿದರೆ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಾಗರ್ ಜಿ.ಪಾಟೀಲ್ ಎಚ್ಚರಿಸಿದರು.