ಗೋಣಿಕೊಪ್ಪ: ಕೊಡಗಿನ ಮೂಲನಿವಾಸಿಗಳಾದ ಗಿರಿಜನರ ಹಾಡಿಗಳ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ನಿವಾರಣೆಗೆ ಮುಂದಾಗುತ್ತೇವೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಭರವಸೆ ನೀಡಿದರು.
ತಿತಿಮತಿ ಗ್ರಾ.ಪಂ ವ್ಯಾಪ್ತಿಯ ಬೊಂಬುಕಾಡು ಹಾಡಿಯ ಸಂಪರ್ಕ ಸೇತುವೆ ಉದ್ಘಾಟಿಸಿ ಮಾತನಾಡಿದರು.
ಇಂದಿಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರು ಸೌಲಭ್ಯ ವಂಚಿತರಾಗಿದ್ದು. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಅವರ ಸೌಲಭ್ಯವನ್ನು ಕೊಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು. ಕಳೆದ ಹಲವಾರು ವರ್ಷಗಳಿಂದ ಮರದ ಸೇತುವೆಯಲ್ಲಿ ಸಂಚರಿಸುತ್ತಿದ್ದ ಜನರಿಗೆ ಅಗತ್ಯ ವ್ಯವಸ್ಥೆ ಪಂಚಾಯ್ತಿ ಕಲ್ಪಿಸಿರುವುದು ಶ್ಲಾಘನೀಯ. ತಿತಿಮತಿ ಪಂಚಾಯ್ತಿ ವ್ಯಾಪ್ತಿಯ ಬಹುತೇಕ ಹಾಡಿಗಳ ಅಭಿವೃದ್ದಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರದ ಸಂಬಂದಪಟ್ಟ ಸಚಿವರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಆದೇಶ ಸಡಿಲಿಕೆಗೆ ಒತ್ತಾಯ ಮಾಡಲಾಗುವುದು. ನಿಗಮದ ವತಿಯಿಂದ ಹಾಡಿಯ 75 ಕುಟುಂಬಗಳಿಗೆ ಸೋಲಾರ್ ಲ್ಯಾಂಪ್ ವಿತರಿಸಲಾಗುವುದು ಎಂದು ಈ ಸಂದರ್ಭ ಘೋಷಣೆ ಮಾಡಿದರು.
ಜಿ.ಪಂ ಸದಸ್ಯೆ ಪಂಕಜ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಮಾಜದ ಮುಖ್ಯವಾಹಿನಿಗೆ ಬಾರದೆ ಕಾಡಿನಲ್ಲಿ ಜೀವನ ಕಟ್ಟಿಕೊಂಡಿರುವ ಬುಡಕಟ್ಟು ನಿವಾಸಿಗಳಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಇಲಾಖೆ ನಮ್ಮೊಂದಿಗೆ ಕೈ ಜೋಡಿಸಿದರೆ ಗಿರಿಜನರ ಅಭಿವೃದ್ದಿ ಸಾಧ್ಯವಾಗಲಿದೆ ಮುಂದಿನ ದಿನದಲ್ಲಿ ಮತ್ತಷ್ಟು ಅಭಿವೃದ್ದಿ ಮಾಡಲಾಗುವುದು ಎಂದರು.
14ನೇ ಹಣಕಾಸು ಯೋಜನೆಯಡಿ ಯಲ್ಲಿ 1.75 ಲಕ್ಷ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಬ್ಬಿಣದ ಸೇತುವೆ ನಿರ್ಮಿಸಿದ್ದು ಇದು ಇಲ್ಲಿನ ಜನಕ್ಕೆ ಉಪಯೋಗಕಾರಿ ಎಂದು ಗ್ರಾ.ಪಂ ಅಧ್ಯಕ್ಷ ಶಿವಕುಮಾರ್ ಹೇಳಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿನಯ್ ಕುಮಾರ್,ತಾ.ಪಂ ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ ಸದಸ್ಯರಾದ ಶ್ರೀನಿವಾಸ್, ಶಾಂತಮ್ಮ, ಚುಬ್ರು, ಹಾಡಿ ಮುಖ್ಯಸ್ಥರಾದ ರವಿ, ಮಾರ, ವೈದ್ಯರಾದ ಮಧ್ಯಸ್ಥ ಹಾಜರಿದ್ದರು.