ಬೆಂಗಳೂರು: ರಾಜ್ಯ ಅರಣ್ಯ ಇಲಾಖೆಯ ತನಿಖಾ ತಂಡದಲ್ಲಿ ಹೆಸರು ಮಾಡಿದ್ದ ರಾಣಾ ಎಂಬ ಹೆಸರಿನ ಶ್ವಾನ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದು, ಸಕಲ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲು ಅರಣ್ಯ ಇಲಾಖೆ ಸಿದ್ದವಾಗಿದೆ.
ಬಂಡಿಪುರದ ಮೇಲಕಾಮನಹಳ್ಳಿ ಕ್ಯಾಂಪ್ ನಲ್ಲಿ ನಿಯೋಜನೆಗೊಂಡಿದ್ದ ಈ ಶ್ವಾನಕ್ಕೆ ಹನ್ನೊಂದು ವರ್ಷ ವಯಸ್ಸಾಗಿತ್ತು. ಅರಣ್ಯ ಇಲಾಖೆಗೆ ಸೇರ್ಪಡೆಗೊಂಡ ಪೂರ್ಣ ಪ್ರಮಾಣದಲ್ಲಿ ತರಬೇತಿ ಪಡೆದ ಸ್ನೀಪರ್ ಡಾಗ್ ಎಂಬ ಖ್ಯಾತಿಗೆ ರಾಣಾ ಪಾತ್ರವಾಗಿತ್ತು. ಅರಣ್ಯ ಅಧಿಕಾರಿಗಳ ಪಾಲಿಗೆ ಅಚ್ಚುಮೆಚ್ಚಿನ ಗೆಳೆಯನಾಗಿದ್ದ ರಾಣಾ ತಮಿಳುನಾಡು ಹಾಗೂ ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲೂ ಭಾಗವಹಿಸಿ ಸೈ ಎನಿಸಿಕೊಂಡಿತ್ತು.
ಇದನ್ನೂ ಓದಿ:ಭಟ್ಕಳ ತಾಲೂಕಿನಲ್ಲಿ ಮೇಘ ಸ್ಫೋಟ : ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಸಿಲುಕಿರುವ ಶಂಕೆ
ಬಂಡಿಪುರದಲ್ಲಿ ಪ್ರಿನ್ಸ್ ಎಂಬ ಹುಲಿ ಕಾಣೆಯಾದಾಗ ಅದರ ಶೋಧ ಕಾರ್ಯದಲ್ಲಿ ಭಾಗಿಯಾದ ರಾಣಾ ಮೂರು ದಿನಗಳ ಬಳಿಕ ಅರಣ್ಯದಲ್ಲಿ ಹುಲಿಯ ಶವವನ್ನು ಪತ್ತೆ ಮಾಡಿತ್ತು. ಹುಲಿ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ರಾಣಾನ ಸಹಾಯವನ್ನು ಬಹುತೇಕ ಸಂದರ್ಭದಲ್ಲಿ ಪಡೆದಿದ್ದರು. ಅದೇ ರೀತಿ ಶ್ರೀಗಂಧ ಹಾಗೂ ಆನೆ ದಂತ ಸಂಗ್ರಹಣೆ, ಕಳ್ಳಬೇಟೆ ಪತ್ತೆಗೆ ರಾಣಾ ಬಹುವಾಗಿ ಸಹಕರಿಸಿದ್ದ.
ವಯೋಸಹಜ ಬಳಲಿಕೆ ಹಾಗೂ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಣಾಗೆ ಸೂಕ್ತ ಚಿಕಿತ್ಸೆ ನೀಡಿದ್ದರೂ ಫಲಿಸಿಲ್ಲ. ರಾಣಾನನ್ನು ಅರಣ್ಯ ಇಲಾಖೆ ಉದ್ಯೋಗಿ ಎಂದೇ ಪರಿಗಣಿಸಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ನಿರ್ಧರಿಸಿದೆ.