Advertisement

ಮರಗಳ ಅಕ್ರಮ ಕಡಿತ : ಟ್ರ್ಯಾಕ್ಟರ್ ಸಮೇತ ಮೂವರು ವಶಕ್ಕೆ

02:30 PM May 10, 2021 | Team Udayavani |

ಸೊರಬ : ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸುತ್ತಿದ್ದ ಮೂವರು ಆರೋಪಿಗಳ ಸಮೇತ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಹಳೇಸೊರಬ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ.

Advertisement

ಹಳೇ ಸೊರಬ ಗ್ರಾಮದ ಸರ್ವೆ ನಂ. 245ರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಲಕ್ಷಾಂತರ ರೂ., ಬೆಲೆಬಾಳುವ ಮರಗಳನ್ನು ಕಡಿತಲೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಡಿಎಫ್‌ ಒ ಮೋಹನ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್ ಬಸರೂರು ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಪ್ರಭುರಾಜ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ, ಕಡಿತಲೆ ಮಾಡಿದ ಮರಗಳ ಸಮೇತ ಆರೋಪಿತರಾದ ಸುರೇಶ್ ನಾರಾಯಣ ಆಚಾರ್, ಪ್ರಶಾಂತ್ ಪರಶುರಾಮ್, ಕೃತಿಕ್ ಗೋವಿಂದಪ್ಪ ಅವರನ್ನು ಬಂಧಿಸಲಾಗಿದೆ.

ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್, ಟ್ರ್ಯಾಕ್ಟರ್, ಮರಗಳ ಕಡಿತಲೆ ಮಿಷನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿಯಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ಶ್ರೀಕಾಂತ್ ರಾಥೋಡ್, ಮುತ್ತಣ್ಣ, ಹನುಮಂತಪ್ಪ, ಅರಣ್ಯ ವೀಕ್ಷಕ ಮಂಜುನಾಥ್ ಪಾಲ್ಗೊಂಡಿದ್ದರು. ತನಿಖೆ ಮುಂದುವರೆದಿದೆ. ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಕಡಿತಲೆಗೊಂಡಿರುವ ಮರಗಳನ್ನು ವಶಕ್ಕೆ ಪಡೆಯಬೇಕಿದ್ದು, ಕೃತ್ಯದಲ್ಲಿ ಪಾಲ್ಗೊಂಡ ಇನ್ನೂ ಹಲವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಅನೇಕ ಅನಧಿಕೃತ ಮತ್ತು ಅಕ್ರಮ ಚಟುವಟಿಕೆಗಳಿಗೆ ನೋಂದಣಿಯಾಗದ ಟ್ರ್ಯಾಕ್ಟರ್‌ಗಳು ಮತ್ತು ವಾಹನಗಳನ್ನು ಬಳಕೆ ಮಾಡುತ್ತಿರುವ ವಿಷಯ ತಾಲ್ಲೂಕಿನಲ್ಲಿ ಗುಟ್ಟಾಗಿ ಉಳಿದಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಟ್ರ್ಯಾಕ್ಟರ್ ನೋಂದಣಿ ಸಂಖ್ಯೆ ಇಲ್ಲದಿರುವುದು ಸ್ಪಷ್ಟ ನಿದರ್ಶನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next