Advertisement

ವಿದೇಶಿ ಲಸಿಕೆ ಪ್ರವೇಶ ಸಲೀಸು : ಪ್ರತೀ ಬ್ಯಾಚ್‌ ಪರೀಕ್ಷೆ , ಪ್ರಯೋಗದಿಂದ ವಿನಾಯಿತಿ

02:33 AM Jun 03, 2021 | Team Udayavani |

ಹೊಸದಿಲ್ಲಿ: ಶೀಘ್ರವೇ ಫೈಜರ್‌, ಮಾಡೆರ್ನಾ ಸಹಿತ ವಿದೇಶಿ ಲಸಿಕೆಗಳು ದೇಶದಲ್ಲಿ ಲಭ್ಯವಾಗಲಿದ್ದು, ದೇಶದಲ್ಲಿ ಲಸಿಕೆ ಕೊರತೆ ನಿವಾರಿಸಲು ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ.

Advertisement

ಈ ಲಸಿಕೆಗಳನ್ನು ದೇಶದಲ್ಲಿ ಪ್ರತ್ಯೇಕವಾಗಿ ಪ್ರಯೋಗಕ್ಕೆ ಒಡ್ಡುವುದು ಮತ್ತು ಪ್ರತೀ ಬ್ಯಾಚನ್ನು ಪರೀಕ್ಷೆಗೆ ಒಳಪಡಿಸುವುದರಿಂದ ವಿನಾಯಿತಿ ನೀಡುವ ನಿರ್ಧಾರವನ್ನು ಭಾರತದ ಪ್ರಧಾನ ಔಷಧ ನಿಯಂತ್ರಕ (ಡಿಜಿಸಿಐ) ನಿರ್ಧಾರ ಕೈಗೊಂಡಿದೆ. ಪ್ರತಿಕೂಲ ಪರಿಣಾಮ ಉಂಟಾದರೆ ಸಂಭಾವ್ಯ ಕಾನೂನು ಖಟ್ಲೆಯಿಂದ ರಕ್ಷಣೆ ನೀಡಬೇಕು ಎಂಬ ಬೇಡಿಕೆಗೂ ಸರಕಾರ ಸಮ್ಮತಿಸಿದೆ ಎನ್ನಲಾಗಿದೆ.

ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನೀಡಲು ಲಸಿಕೆ ಕೊರತೆ ಉಂಟಾಗಿರುವಂತೆಯೇ ಫೈಜರ್‌, ಮಾಡೆರ್ನಾದಂಥ ವಿದೇಶಿ ಲಸಿಕೆಗಳ ಬಳಕೆಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ಈ 2 ಪ್ರಮುಖ ವಿನಾಯಿತಿ ಪ್ರಕಟಿಸಲಾಗಿದೆ. ಈ ನಿರ್ಧಾರದಿಂದ ದೇಶದಲ್ಲಿ ಮತ್ತಷ್ಟು ಲಸಿಕೆಗಳು ಸಿಗಲಿವೆ.

ರಕ್ಷಣೆ ವಿಚಾರ ಪ್ರಶ್ನೆಯೇ ಅಲ್ಲ
ವಿದೇಶಿ ಲಸಿಕೆಗಳಿಂದ ಪ್ರತಿಕೂಲ ಪರಿಣಾಮ ಉಂಟಾದರೆ ಕಾನೂನು ಖಟ್ಲೆಗಳಿಂದ ರಕ್ಷಣೆ ಕೊಡಬೇಕು ಎನ್ನುವುದು ಪ್ರಶ್ನೆಯೇ ಅಲ್ಲ ಎಂದು ಸರಕಾರ ನಿರ್ಧರಿಸಿದೆ. ಇತರ ದೇಶಗಳಲ್ಲಿ ಕೂಡ ಇದೇ ಮಾದರಿಯ ರಕ್ಷಣೆ ನೀಡಲಾಗಿದೆ ಎಂದು ಸರಕಾರಿ ಮೂಲಗಳು ಪ್ರತಿಪಾದಿಸಿವೆ. ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಬೇಕು ಎಂದು ಕಂಪೆನಿಗಳು ಅರ್ಜಿ ಸಲ್ಲಿಸಿದ್ದರೆ, ಶೀಘ್ರವೇ ಅನುಮತಿ ನೀಡುತ್ತೇವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ವಿದೇಶಿ ಲಸಿಕೆ ಯಾವಾಗ ಲಭ್ಯ?
- ಫೈಜರ್‌: ಪ್ರಸಕ್ತ ವರ್ಷವೇ 5 ಕೋಟಿ ಡೋಸ್‌ ನೀಡುವುದಾಗಿ ಈಗಾಗಲೇ ಕಂಪೆನಿ ಹೇಳಿದೆ. ಕೇಂದ್ರ ಸರಕಾರದ ಪ್ರಕಾರ ಮೊದಲ ಕಂತು ಮುಂದಿನ ತಿಂಗಳು ಸಿಗಲಿದೆ.
- ಮಾಡೆರ್ನಾ: ಸಿಪ್ಲಾ ಔಷಧ ಸಂಸ್ಥೆ ದೇಶದಲ್ಲಿ ಮಾಡೆರ್ನಾ ಲಸಿಕೆಯನ್ನು ವಿತರಿಸಲಿದೆ. ಇದರ ಸಿಂಗಲ್‌ ಡೋಸ್‌ ಲಸಿಕೆ ಮುಂದಿನ ವರ್ಷ ಲಭ್ಯವಾಗಲಿದೆ.
- ಜಾನ್ಸನ್‌ ಆ್ಯಂಡ್‌ ಜಾನ್ಸನ್‌ : ಭಾರತ ಸಹಿತ ಹಲವು ದೇಶಗಳಿಗೆ ಲಸಿಕೆ ಪೂರೈಸಲು ಸದ್ಯಕ್ಕೆ ಸಾಧ್ಯವಿಲ್ಲವೆಂದು ಅಮೆರಿಕದ ಈ ಕಂಪೆನಿ ಹೇಳಿದೆ. ಆದರೂ ಲಸಿಕೆ ಆಮದಿಗೆ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next