Advertisement

ಭಾರತ ಬತ್ತಳಿಕೆಗೆ ವಿದೇಶಿ ಲಸಿಕೆ ಬಾಣ ; ಕ್ಲಿನಿಕಲ್‌ ಟ್ರಯಲ್‌ ಷರತ್ತಿನಿಂದ ವಿನಾಯಿತಿ

12:05 AM Apr 15, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ದಿನಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಡುತ್ತಿರುವ ನಡುವೆಯೇ ಕೇಂದ್ರ ಸರಕಾರ ಇನ್ನಷ್ಟು ಲಸಿಕೆಗಳ ನಿರ್ಬಂಧಿತ ಬಳಕೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ಹೆಜ್ಜೆಹಾಕಿದೆ.

Advertisement

ಈಗಾಗಲೇ ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ ಹಾಗೂ ಸ್ಪುಟ್ನಿಕ್‌-5 ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಇನ್ನೂ ಹಲವು ಲಸಿಕೆಗಳಿಗೆ ತ್ವರಿತಗತಿಯಲ್ಲಿ ಒಪ್ಪಿಗೆ ನೀಡಲು ನಿರ್ಧರಿಸಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಅದರಲ್ಲೂ, ಅಮೆರಿಕ, ಐರೋಪ್ಯ ಒಕ್ಕೂಟ, ಯುಕೆ ಹಾಗೂ ಜಪಾನ್‌ನಲ್ಲಿ ಒಪ್ಪಿಗೆ ಸಿಕ್ಕಿರುವ ಲಸಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ ಲಸಿಕೆಗಳಿಗೂ ಅನುಮತಿ ಸಿಗಲಿದೆ. ದೇಶದ ವಿವಿಧ ಭಾಗಗಳಲ್ಲಿ ಲಸಿಕೆ ಕೊರತೆ ಉಂಟಾಗಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಭಾರತದಲ್ಲೇ ಲಸಿಕೆಯ 2 ಮತ್ತು 3ನೇ ಹಂತದ ಪ್ರಯೋಗ ನಡೆಯಬೇಕು ಎಂಬ ಷರತ್ತನ್ನೂ ಕೇಂದ್ರ ಸರಕಾರ ಸಡಿಲಿಸಿದೆ. ಇದರಿಂದಾಗಿ ವಿದೇಶಿ ಲಸಿಕೆಗಳು ಕ್ಷಿಪ್ರವಾಗಿ ಭಾರತದಲ್ಲಿ ಲಭ್ಯವಾಗಲಿದೆ. ಫೈಜರ್‌, ಮಾಡೆರ್ನಾ, ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸೇರಿದಂತೆ ಕೆಲವು ಲಸಿಕೆ ತಯಾರಕ ಕಂಪನಿಗಳಿಗೆ ನಾವು ಆಹ್ವಾನ ನೀಡಲಿದ್ದೇವೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್‌ ತಿಳಿಸಿದ್ದಾರೆ.

ಇನ್ನು, ಡಾ| ರೆಡ್ಡೀಸ್‌ ಲ್ಯಾಬೊರೆಟರೀಸ್‌ ಎಪ್ರಿಲ್‌ -ಜೂನ್‌ ವೇಳೆಗೆ ಸ್ಪುಟ್ನಿಕ್‌ 5 ಆಮದು ಮಾಡಿಕೊಳ್ಳಲಿದ್ದು, ಅದರ ದರದ ಬಗ್ಗೆ ಸರಕಾರದ ಜತೆಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಯೋಗಿ, ಅಖೀಲೇಶ್‌ಗೆ ಕೊರೊನಾ: ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್‌ ಹಾಗೂ ಮಾಜಿ ಸಿಎಂ ಅಖೀಲೇಶ್‌ ಯಾದವ್‌ಗೆ ಬುಧವಾರ ಸೋಂಕು ದೃಢಪಟ್ಟಿದೆ. ಇಬ್ಬರೂ ತಮ್ಮ ತಮ್ಮ ಮನೆಗಳಲ್ಲೇ ಐಸೋಲೇಷನ್‌ ನಲ್ಲಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಈ ನಡುವೆ, ಉತ್ತರಪ್ರದೇಶದಲ್ಲಿ 4 ಮತ್ತು 5ನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಕೊರೊನಾ ಕರ್ತವ್ಯಕ್ಕೆ ನಿಯೋಜಿಸಲು ಸರಕಾರ ನಿರ್ಧರಿಸಿದೆ. ಎಂಬಿಬಿಎಸ್‌ ಪರೀಕ್ಷೆ ರದ್ದು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಸರಕಾರ ಈ ತೀರ್ಮಾನ ಕೈಗೊಂಡಿದೆ.

Advertisement

ಕುಂಭ ಮೇಳ- 1086 ಮಂದಿಗೆ ಸೋಂಕು: ಹರಿದ್ವಾರದಲ್ಲಿನ ಕುಂಭ ಮೇಳದಲ್ಲಿ ಕೇವಲ 3 ದಿನಗಳ ಅವಧಿಯಲ್ಲಿ 1086 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಮವಾರ ನಡೆದಿದ್ದ 2ನೇ ಶಾಹಿ ಸ್ನಾನದ ವೇಳೆ ಲಕ್ಷಾಂತರ ಭಕ್ತರು ಪಾಲ್ಗೊಂಡು ಪುಣ್ಯ ಸ್ನಾನ ಮಾಡಿದ್ದರು. ಎ.10ರಿಂದ 13ರ ಸಂಜೆ 4ರ ವರೆಗೆ 1086 ಮಂದಿಗೆ ಪಾಸಿಟಿವ್‌ ಬಂದಿದೆೆ. ಈ ಹಿನ್ನೆಲೆಯಲ್ಲಿ ಕುಂಭ ಮೇಳಕ್ಕೆ ಅವಧಿಗೆ ಮುನ್ನವೇ ತೆರೆ ಎಳೆಯುವ ಸಾಧ್ಯತೆಯಿದೆ.

ರಾಜಸ್ಥಾನದಲ್ಲಿ ಕೊರೊನಾ ಕರ್ಫ್ಯೂ: ಶುಕ್ರವಾರದಿಂದ ಮಾಸಾಂತ್ಯದವರೆಗೆ ದಿನಕ್ಕೆ 12 ಗಂಟೆಗಳ ಕೊರೊನಾ ಕರ್ಫ್ಯೂ ಜಾರಿ ಮಾಡಿ ರಾಜಸ್ಥಾನ ಸರಕಾರ ಬುಧವಾರ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲ ನಗರಗಳಲ್ಲೂ ಸಂಜೆ 6ರಿಂದ ಬೆ.6ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.

ಈ ನಡುವೆ ಇದೇ ತಿಂಗಳ ಅಂತ್ಯಕ್ಕೆ ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸದ ಅವಧಿಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅವಳಿ ರೂಪಾಂತರಿ: ಮಹಾರಾಷ್ಟ್ರದಲ್ಲಿ ಜನವರಿಯಿಂದ ಮಾರ್ಚ್‌ವರೆಗೆ ಪರೀಕ್ಷೆಗೆ ಒಳಪಡಿಸಿದ 361 ಸ್ಯಾಂಪಲ್‌ ಗಳ ಪೈಕಿ ಶೇ.61ರಲ್ಲಿ ಸೋಂಕಿನ ಅವಳಿ ರೂಪಾಂತರ(ಡಬಲ್‌ ಮ್ಯುಟೇಷನ್‌) ಪತ್ತೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next