ಯು.ಎ.ಇ. ರಾಜಧಾನಿ ಅಬುಧಾಬಿಯಲ್ಲಿಯೇ ದಿನಕಳೆದ ನನಗೆ ಕನಿಷ್ಟ ಪಕ್ಷ ರಾಜಧಾನಿಗೆ ತಾಗಿಕೊಂಡಿರುವ ಮೂರು ಪ್ರತಿಷ್ಟಿತ ನಗರಗಳಾದ ದುಬೈ, ಶಾರ್ಜಾ, ಅಜ್ಮಾನ್ ನಗರಗಳ ಪರ್ಯಟನ ಮಾಡಿ ನಗರಗಳ ಹೊರ ನೇೂಟದ ಸೌಂದರ್ಯ ಕಣ್ಣು ತುಂಬಿಸಿಕೊಳ್ಳ ಬೇಕೆನ್ನುವುದಕ್ಕಾಗಿ ರಾಜಧಾನಿ ಅಬುಧಾಬಿಯಿಂದ ದುಬೈ; ದುಬೈಯಿಂದ ಶಾರ್ಜಾ; ಶಾರ್ಜಾದಿಂದ ಅಜ್ಮಾನ್ ದತ್ತ ಪಯಣ.
ಅಬುಧಾಬಿಯಿಂದ ದುಬೈಗೆ ಸರಿಯಾಗಿ 139.4 ಕಿ.ಮಿ. ಇಲ್ಲಿನ ಎರಡು ದಿಕ್ಕಿನಲ್ಲಿ ಎಂಟು ಟ್ರ್ಯಾಕಿನಲ್ಲಿ ಕ್ರಮಿಸ ಬಹುದಾದ ವಿಶಾಲವಾದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಇದೆ. ಎಲ್ಲಿಯೂ ಅಡೆ ತಡೆ ಇಲ್ಲದೆ ಕ್ರಮಿಸುವ ಕಾರಣ ಈ ದೂರವನ್ನು ಕೇವಲ ಒಂದೂವರೆ ಗಂಟೆಯಲ್ಲಿ ತಲುಪಲು ಸಾಧ್ಯ.ಇಲ್ಲಿಯೂ ಟೋಲ್ ವ್ಯವಸ್ಥೆ ಇದೆ ಆದರೆ ಟೋಲ್ ಹಣವನ್ನು ಆನ್ ಲೈನ್ ನಲ್ಲಿ ಯಾವುದೆ ನಿಲುಗಡೆ ಮಾಡದೆ ನಾಜೂಕಾಗಿ ವಸೂಲಿ ಮಾಡಿಕೊಳ್ಳುವ ವ್ಯವಸ್ಥೆ ಅಲ್ಲಿದೆ. ಇಲ್ಲಿ ಯಾವುದೆ ರೀತಿಯಲ್ಲಿ ವಿನಾಯಿತಿ ಇಲ್ಲ.
ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ಇದೆ ಆದರೆ ಅಲ್ಲಿ ಕೂಡಾ ನಿಮ್ಮ ಖಾತೆಯಿಂದ ನಾಜೂಕಾಗಿ ಪಾರ್ಕಿಂಗ್ ಚಾರ್ಜ್ ವಸೂಲಿ ಮಾಡಿಕೊಳ್ಳುತ್ತಾರೆ. ಇಲ್ಲಿ ಕೂಡಾ ಯಾರು ವಿಚಾರಿಸುವವರಿಲ್ಲ..ಹಣ ಮಾತ್ರ ಸಲೀಸಾಗಿ ಜಮೆಯಾಗಿರುತ್ತದೆ. ಯಾವುದೇ ಚೌಕಾಸಿ ಇಲ್ಲದೆ ಡಿಜಿಟಲ್ ಮೂಲಕ ಹಣ ಸಂಗ್ರಹದಲ್ಲಿ ಅವರು ನಿಷ್ಣಾತರು ಅನ್ನುವುದು ಗೊತ್ತಾಯಿತು.
ಅಬುಧಾಬಿಯಿಂದ ದುಬೈಗೆ ಸಾಗುವ ಉದ್ದಕ್ಕೂ ಅಲ್ಲಿನ ಹೊರವಲಯದ ಕೈಗಾರಿಕಾ ಪ್ರದೇಶ , ಕಡಲ ಕಿನಾರೆ, ಕಣ್ಣು ಕುಕ್ಕಿಸುವ ಭವ್ಯವಾದ ಕಟ್ಟಡಗಳು ..ನೇೂಡುವುದೇ ಚೆಂದ. ನಾವು ಚಲಿಸುವ ಕಾರಿನ ವೇಗಕ್ಕೂ ಮಿತಿ ಇದೆ ಹಾಗಾಗಿ ಹತ್ತಾರು ಕಡೆ ಸಿ.ಸಿ.ಕ್ಯಾಮರಾಗಳ ಕಣ್ಣಗಾವಲು ಇದೆ.
ದುಬೈ: ದುಬೈ ಅಂದರೆ ರಾಜಧಾನಿ ಅಬುಧಾಬಿಯನ್ನು ಮೀರಿಸುವಷ್ಟು ಸಿರಿ ಸಂಪತ್ತು ಹೊಂದಿರುವ ನಗರವಾಗಿ ಬೆಳೆದು ನಿಂತಿದೆ..ಭೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಕೂಡಾ ದುಬೈ ಯು.ಎ.ಇ.ಯ ಉಳಿದ ಆರು ನಗರಗಳನ್ನು ಮೀರಿ ನಿಲ್ಲುತ್ತದೆ. ವಿಶ್ವದ 22 ದುಬಾರಿ ನಗರಗಳಲ್ಲಿ ದುಬೈಗೂ ಒಂದು ಸ್ಥಾನವಿದೆ. ಕಟ್ಟಡಗಳ ನೂತನ ವಿನ್ಯಾಸ , ಆಕಾಶವನ್ನೆ ಚುಂಬಿಸುವ ಗಾತ್ರದ ಕಟ್ಟಡಗಳು, ಕಡಲ ತೀರದಲ್ಲಿ ತಲೆ ಎತ್ತಿನಿಂತ ಹೇೂಟೇಲು ಪ್ರವಾಸಿಧಾಮ ಬಹು ಎತ್ತರದಲ್ಲಿ ತಲೆ ಎತ್ತಿ ನಿಂತಿರುವ ವರ್ಲ್ಡ್ ಟ್ರೇಡ್ ಸೆಂಟರ್ ..ಹಾಗಾಗಿ ಇದೊಂದು ಕಾಸ್ಮೇೂಪೇೂಲಿಟಿಯನ್ ನಗರವೆಂದೇ ಪ್ರಸಿದ್ಧಿ ಪಡೆದಿದೆ.
ವೈವಿಧ್ಯಮಯವಾದ ಜನ ಸಂಖ್ಯೆ..ಇದರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಅಂದಾಗಲೇ ನಮಗೆ ತಿಳಿಯುತ್ತದೆ ದುಬೈ ಭಾರತೀಯರಿಗೆ ಎಷ್ಟು ಹತ್ತಿರವಾಗಿದೆ ಅನ್ನುವುದು. ಇಲ್ಲಿನ ಬುರ್ಜಾ ಖಲೀಫಾ ಭವ್ಯ ಕಟ್ಟಡ ಅತ್ಯಂತ ಜನಾಕರ್ಷಕ ಸೌಧ. ವಿಶ್ವದ ಅತ್ಯಂತ ಎತ್ತರದ ಕಟ್ಟಡ ಅನ್ನುವ ಕೀರ್ತಿ ಇದಕ್ಕಿದೆ. ಸುಮಾರು 2722 ಅಡಿಗಳಷ್ಟು ಎತ್ತರ 160ಕ್ಕೂ ಹೆಚ್ಚಿನ ಮಹಡಿ ಹೊಂದಿರುವ ಬುರ್ಜಾ ಖಲೀಫಾ ಕಟ್ಟಡದ ಹೆಸರು ಅಲ್ಲಿನ ಪ್ರತಿ ಮಕ್ಕಳ ಬಾಯಿಯಲ್ಲೂ ಕೇಳ ಬಹುದು.
ರಾತ್ರಿಯ ಹೊತ್ತಿನಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತವಾದ ಈ ಕಟ್ಟಡ ನೇೂಡುವುದೇ ಒಂದು ಸೊಬಗು. ಪ್ರವಾಸಿಗರನ್ನು ಸೆಳೆಯುವ ಐಷಾರಾಮಿ ಶಾಪಿಂಗ್ ಸಂಕೀರ್ಣಗಳು ಮಾಲ್ ಆಫ್ ದಿ ಎಮಿರೇಟ್ಸ್ ಅದ್ಬುತವಾದ ಶಾಪಿಂಗ್ ಸ್ಥಳವಾಗಿದೆ.
ಇಲ್ಲಿ ನಮ್ಮೂರಿನವರ ಪ್ರತಿಷ್ಠಿತ ಹೇೂಟೇಲು ವಸತಿ ವ್ಯವಸ್ಥೆ ಇದೆ. ನಮದೇ ಭಾಷೆಯಲ್ಲಿ ಉಪಚರಿಸುವ ಸಿಬಂಧಿಗಳು ಇದ್ದಾರೆ..ಅದು ಕರ್ನಾಟಕ ಕರಾವಳಿಯ ಜನರಿಗೆ ತುಂಬಾ ಖುಷಿಕೊಡಬಹುದಾದ ಆತಿಥ್ಯ ಕೂಡಾ.
ಶಾರ್ಜಾ:ದುಬೈಗೆ ಹೇಗೂ ಬಂದಿದ್ದೇವೆ ದುಬೈ ಯಿಂದ ಕೇವಲ 40ಕಿ.ಮಿ ದೂರದಲ್ಲಿರುವ ಶಾರ್ಜಾ ನೇೂಡಿ ಬರೇೂಣ ಅಂದುಕೊಂಡು ಶಾರ್ಜಾದತ್ತ ನಮ್ಮ ಪಯಣ. ಯು.ಎ.ಇ. ರಾಷ್ಟ್ರದ ಮೂರನೇ ಅತೀ ದೊಡ್ಧ ನಗರವೆಂದರೆ ಶಾರ್ಜಾ.. ಬಹು ಹಿಂದೆ ಕ್ರಿಕೆಟ್ ಮ್ಯಾಚ್ ಟಿ.ವಿ.ಯಲ್ಲಿ ಅದರಲ್ಲೂ ಭಾರತ ಪಾಕಿಸ್ತಾನದ ಕ್ರಿಕೆಟ್ ಪಂದ್ಯ ವೀಕ್ಷಿಸುವಾಗ ಬಹುವಾಗಿ ನೆನಪಿನಲ್ಲಿ ಇರುವ ಸ್ಟೇಡಿಯಂ ಅಂದರೆ ಅದು ಶಾರ್ಜಾ. ಇಂದು ಈ ಸ್ಟೇಡಿಯಂ ಅನ್ನು ಕಣ್ಣಾರೆ ನೇೂಡುವ ಅವಕಾಶ ಬಂತು. ದುಬೈ ಯಿಂದ ಶಾರ್ಜಾಕ್ಕೆ ಕೇವಲ ನಲ್ವತು ಕಿ.ಮಿ. ಭಾನುವಾರದಂದು ಮಾತ್ರ ಮೂವತ್ತೈದು ನಿಮಿಷಗಳಲ್ಲಿ ತಲುಪ ಬಹುದು ಆದರೆ ಬೇರೆ ದಿನಗಳಲ್ಲಿ ಇದೇ ದೂರವನ್ನು ತಲುಪಬೇಕಾದರೆ ಸುಮಾರು ಒಂದು ಗಂಟೆಗೂ ಜಾಸ್ತಿ ಸಮಯ ಬೇಕು. ಇದಕ್ಕೂ ಒಂದು ಕಾರಣವಿದೆ .. ದುಬೈ ಯಲ್ಲಿ ಕೆಲಸ ಮಾಡುವವರು ಅತೀ ಹೆಚ್ಚಿನ ಮಂದಿ ಪ್ರತಿನಿತ್ಯ ಶಾರ್ಜಾದಿಂದ ದುಬೈಗೆ ಬರುತ್ತಾರೆ ಬಿಟ್ಟರೆ ದುಬೈ ಯಲ್ಲಿ ಮನೆ ಮಾಡಲು ಸಿದ್ಧರಿಲ್ಲ..ದುಬೈಗೆ ಹೇೂಲಿಸಿದರೆ ಶಾರ್ಜಾ ಎಲ್ಲ ರೀತಿಯಲ್ಲಿ ಅಗ್ಗ( ಚೀಪ್..) ಶಾರ್ಜಾಕ್ಕೆ ಒಂದು ಹೆಸರಿದೆ ವಿಶ್ವ ಆರೇೂಗ್ಯ ಸಂಸ್ಥೆ ಕೊಡ ಮಾಡಿದ ಹೆಸರೆಂದರೆ ಹೆಲ್ತ್ ಸಿಟಿ. ಇಲ್ಲಿ ಆಲ್ಕೋಹಾಲ್ ಲಿಕ್ಕರ್ ನಿಷೇಧ ಹೇರಿದೆ ಅಲ್ಲಿನ ಸ್ಥಳೀಯ ಸರಕಾರ..ಅಲ್ಲಿ ಮುಸ್ಲಿಂ ಜನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಇತ್ತೀಚೆಗೆ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಅಲ್ಲಿ ತಲೆ ಎತ್ತಿವೆ.
ಅಜ್ಮಾನ್:ದುಬೈಯಿಂದ 45 ಕಿ.ಮಿ.ದೂರದಲ್ಲಿದೆ ಅಜ್ಮಾನ್ ನಗರ. ಜನ ಸಂಖ್ಯೆಯಲ್ಲಿ 5ನೇ ಸ್ಥಾನದಲ್ಲಿ ನಿಲ್ಲುತ್ತದೆ. ಕೈಗಾರಿಕೆಗಳು ನಿಧಾನವಾಗಿ ಬೆಳೆಯುತ್ತಿದೆ. ಬೇರೆ ನಗರಗಳಿಗೆ ಹೇೂಲಿಸಿದರೆ ಸ್ವಲ್ಪ ಹಿಂದುಳಿದ ನಗರವೆಂದೇ ಹೇಳಬಹುದು ಆದರೆ ನಗರದ ಒಳ ವಿನ್ಯಾಸ ತುಂಬಾ ವೇಗದಲ್ಲಿ ಬೆಳೆಯುತ್ತಿದೆ ಅನ್ನುವುದು ಅಲ್ಲಿನ ಜನರ ಅನಿಸಿಕೆ. ಟೂರಿಸ್ಟ್ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಇದೇ ಪ್ರದೇಶದಲ್ಲಿ ನಮ್ಮೂರಿನ ಹೊಟೇಲ್ ಯುವ ಉದ್ಯಮಿಗಳಿಂದ ದಕ್ಷಿಣ್ ಹೆಸರಿನ ಅತ್ಯುತ್ತಮ ಗುಣಮಟ್ಟದ ವೆಜ್ ಹೇೂಟೇಲು ಇದೆ ಅನ್ನುವುದು ಕನ್ನಡದ ಜನರಿಗೆ ತೃಪ್ತಿ ನೀಡುಬಹುದಾದ ಅತಿಥಿ ಸತ್ಕಾರಕ್ಕೆ ಹೆಸರು ವಾಸಿಯಾದ ಹೊಟೇಲು ಎಂದೇ ಹೇಳ ಬಹುದು.
ಆಂತೂ ಒಂದೇ ದಿನದಲ್ಲಿ ಬೆಳಿಗ್ಗೆಯಿಂದ ರಾತ್ರಿಯ ತನಕ ಮೂರು ನಗರಗಳ ಪರ್ಯಟನದಲ್ಲಿ ಹತ್ತು ಹಲವು ಅನುಭವಗಳೊಂದಿಗೆ ಮೂರು ನಗರಗಳ ಹೊರ ಸೌಂದರ್ಯ ಜೊತೆಗೆ ಜನರ ಒಳಾಂಗಣದ ಬದುಕನ್ನು ತನು ಮನ ತುಂಬಿಸಿಕೊಳ್ಳುವ ಸದಾವಕಾಶ ನಮ್ಮದಾಯಿತು.ನಮ್ಮ ಒಂದು ದಿನದ ನಗರ ಪರ್ಯಟನಾ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಸಹಕಾರ ನೀಡಿದವರು ಯು.ಎ.ಇ..ಕನಾ೯ಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಅನ್ನುವುದನ್ನು ನಮ್ಮ ಪ್ರವಾಸ ಕಥನದಲ್ಲಿ ನೆನಪಿಸಲೇ ಬೇಕು.
ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ (ಅಬುಧಾಬಿಯಿಂದ)