ಮೀನು ತಿನ್ನುವವರು ಮೀನು ಮಾರುಕಟ್ಟೆಗೆ ಹೇೂಗಲೇಬೇಕು ತಾನೆ?.ಅಂತೂ ಅಬುಧಾಬಿಗೆ ಬಂದ ನನಗೆ ಮೀನು ತಂದು ತಿನ್ನಬೇಕೆಂಬ ಆಸೆಯಿಂದ ಮೀನು ಮಾರುಕಟ್ಟೆಯನ್ನು ಹುಡುಕಿ ಹೊರಟೆ..ಅಬುಧಾಬಿಯ ಇಲೆಕ್ಟ್ರೇೂ ಸ್ಟ್ರೀಟ್ ನಿಂದ ಅಣತಿ ದೂರದಲ್ಲೊಂದು ಮೀನು ಮಾರುಕಟ್ಟೆ. ಹತ್ತಿರ ಹೇೂದಾಗ ಅದೊಂದು ಭವ್ಯ ಕಟ್ಟಡದ ಒಳಗೆ ಹೇೂದ ಅನುಭವ. ಪ್ರವೇಶಿಸಿದ ತಕ್ಷಣವೇ ತಂಪಾಗಿಸುವ ಹವಾ.ಇಡೀ ಮಾರುಕಟ್ಟೆಯೇ ಕೇಂದ್ರಿಕೃತವಾದ ಹವಾ ನಿಯಂತ್ರಣ ವ್ಯವಸ್ಥೆ.ಬಿಸಿಲಿನ ತಾಪದಿಂದ ಒಳಗೆ ಹೇೂದ ನನಗೆ ಇದೆಂತಹ ಹೈಟೆಕ್ ಹೇೂಟೆಲ್ ಒಳಗೆ ಪ್ರವೇಶ ಮಾಡಿದ ಹಾಗೆ ಅನ್ನಿಸಿತು.
ವಿಸ್ತಾರವಾದ ಜಾಗ ಎಲ್ಲಾ ಕಡೆ ವಿವಿಧ ಗಾತ್ರದ ವಿವಿಧ ರೂಪದ ಮೀನುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಇಟ್ಟಿದ್ದರು ಅನ್ನುವುದಕ್ಕಿಂತ ಅಷ್ಟೇ ವ್ಯವಸ್ಥಿತವಾಗಿ ಜೇೂಡಿಸಿ ಇಟ್ಟಿದ್ದರು ಅನ್ನುವುದು ಸೂಕ್ತ. ಅಬುಧಾಬಿಯ ಮಾರುಕಟ್ಟೆಯಲ್ಲಿ ಸಿಗುವ ಮೀನುಗಳನ್ನು ನೇೂಡಿದಾಗ ನಮ್ಮಲ್ಲಿ ಸಿಗುವ ಮೀನುಗಳು ಅಲ್ಲಿ ಲಭ್ಯ. ಬಗುಂಡೆ; ಬುತಾಯಿ; ಕಂಡಿಕೆ(ಕಾಣಿ) ಅಂಜಲ್ ;ಪಾಂಪ್ಲೇಟ್ ನಲ್ಲಿ ಬಿಳಿ ಕಪ್ಪು..ಈ ಎಲ್ಲಾ ಮೀನುಗಳ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಇಟ್ಟಿರುವ ಪರಿ ಚೆನ್ನಾಗಿದೆ.ಮೀನು ಮಾರುವವರ ತಲೆಯ ಮೇಲು ಜರಿಯ ಕ್ಯಾಪ್ ಇರುತ್ತದೆ. ಮೀನುಮಾರುಕಟ್ಟೆ ಅಂದರೆ ಗೌಜಿ ಗದ್ದಲ ಇರಲೇ ಬೇಕು ಅಲ್ವಾ?ಆದರೆ ಇಲ್ಲಿ ಅದೇನು ಇಲ್ಲ ಎಲ್ಲವೂ ಶಾಂತ ಪ್ರಶಾಂತ.
ನಮ್ಮಲ್ಲಿ ಒಂದು ಕ್ರಮವಿದೆ. ಮೀನು ಮಾರುಕಟ್ಟೆಗೆ ಹೇೂದವ ಕಾಲುತೊಳೆದೆ ಮನೆಯ ಒಳಗೆ ಬರಬೇಕು. ಅಲ್ಲಿ ಹಾಗಲ್ಲ..ಕಾಲು ತೊಳೆದೆ ಮೀನು ಮಾರುಕಟ್ಟೆಗೆ ಕಾಲುಹಾಕುವಷ್ಟು ಸ್ವಚ್ಛತೆ ಕಾಪಾಡಿಕೊಂಡು ಬಂದಿರುವುದು ಅವರು ಸ್ವಚ್ಛತೆ ಕೊಟ್ಟ ಆದ್ಯತೆ ಎದ್ದು ಕಾಣುವಂತಿದೆ. ಇದನ್ನು ಪರಿಶೀಲಿಸುವ ಅಧಿಕಾರಿಗಳು ಕೂಡಾ ವೀಕ್ಷಣೆ ಮಾಡುವುದನ್ನು ಗಮನಿಸ ಬಹುದು.
ಮೀನು ಖರೀದಿಸಿದ ಅನಂತರದಲ್ಲಿ ಮೀನು ಕಟ್ಟಿಂಗ್ ಪ್ರತ್ಯೇಕವಾದ ಸ್ಥಳ. ಅಲ್ಲಿಯೂ ಅಷ್ಟೇ ಮೆಾದಲಿಗೆ ನಮ್ಮ ಹೆಸರನ್ನು ನೋಂದಾಯಿಸಿಕೊಂಡು ಒಂದು ನಂಬರ್ ಕೊಡುತ್ತಾರೆ. ನಾವು ಖರೀದಿಸಿದ ಮೀನು ನೇರವಾಗಿ ಹವಾ ನಿಯಂತ್ರಿತ ಕೊಠಡಿಗೆ ಹೇೂಗುತ್ತದೆ..ಅಲ್ಲಿ ಮೀನು ಕಟ್ಟಿಂಗ್ ಮಾಡುವವರು ಅಷ್ಟೇ ಆಸ್ಪತ್ರೆಯಲ್ಲಿನ ಆಪರೇಷನ್ ಥಿಯೇಟರ್ ಹಾಗಿದೆ. ತಲೆ ಕೈಗೆ ನೀಲಿ ಪ್ಲ್ಯಾಸ್ಟಿಕ್ ಬಟ್ಟೆ ಕಟ್ಟಿಕೊಂಡು ಚಾಕು ಚೂರಿಯಿಂದ ಕೆಲಸ ಮಾಡುವಾಗ ಹೊರಗೆ ಕೂತ ನಮಗೆ ಅವರು ನಮ್ಮ ಮೀನು ಯಾವ ರೀತಿಯಲ್ಲಿ ಕಟ್ಟಿಂಗ್ ಮಾಡುತ್ತಿದ್ದಾರೆ ಅನ್ನುವುದನ್ನು ಕಾಣ ಬಹುದು..ಹತ್ತಿರ ಹೇೂಗಲು ಅವಕಾಶವಿಲ್ಲ. ಹೊರಗಿನಿಂದಲೇ ಕೈ ಸನ್ನೆಯಲ್ಲಿಯೇ ಮಾಹಿತಿ ನೀಡಬಹುದು. ನಮ್ಮ ಟೇೂಕನ್ ನಂಬರ್ ಸ್ಕ್ರೀನ್ ನಲ್ಲಿ ಡಿಸ್ ಪ್ಲೇ ಆದ ತಕ್ಷಣವೇ ಕೌಂಟರ್ ನಲ್ಲಿ ನಮ್ಮ ಮೀನನ್ನು ಸಂಗ್ರಹಿಸಬೇಕು.
ಅಲ್ಲಿನ ಇನ್ನೊಂದು ವಿಶೇಷ ಅಂದರೆ ನಾವು ಖರೀದಿಸುವ ಮೀನಿನ ಕ್ವಾಲಿಟಿ ಬಗ್ಗೆ ಸಂಶಯವಿದ್ದರೆ ಅಲ್ಲಿಯೇ ಅದಕ್ಕೆ ಸಂಬಂಧಿಸಿದ ಡಾಕ್ಟರ್ ಕೂಡಾ ಲಭ್ಯವಿದ್ದಾರೆ. ಇದೊಂದು ಅಲ್ಲಿನ ಸರಕಾರಿ ನಿಯಂತ್ರಣ ಮೀನುಮಾರುಕಟ್ಟೆ ಅನ್ನುವುದು ನಮ್ಮ ಅನುಭವಕ್ಕೆ ಬಂತು. ಅಂತೂ ಅಬುಧಾಬಿ ಪ್ರವಾಸಕ್ಕೆ ಹೇೂದವರಲ್ಲಿ ಮೀನು ತಿನ್ನುವ ಅಭ್ಯಾಸ ವಿದ್ದವರಿಗೆ ಅಬುಧಾಬಿಯ ಈ ಮೀನುಮಾರುಕಟ್ಟೆಯ ನೇೂಟ ಒಂದು ವಿಶೇಷವಾದ ಅನುಭವ ನೀಡುವ ತಾಣವು ಹೌದು..
ಯುನೈಟೆಡ್ ಅರಬಿಕ್ ಎಮಿರೇಟ್ಸ್ ರಾಷ್ಟ್ರದ ತೈಲ ಸಂಪತ್ತು ಬಿಟ್ಟರೆ ಇನ್ನೊಂದು ಪ್ರಮುಖ ಆದಾಯ ತರುವ ಉದ್ಯಮವೆಂದರೆ ಮತ್ಸೇೂಧ್ಯಮ ಅನ್ನುವುದನ್ನು ಇಲ್ಲಿ ಪ್ರಮುಖವಾಗಿ ಗಮನಿಸ ಬೇಕಾದ ಅಂಶ. ಆದುದರಿಂದ ಅಲ್ಲಿನ ಸರ್ಕಾರ ಮೀನುಗಾರಿಕೆಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದೆ ಅನ್ನುವುದು ಸೂಕ್ತ.
ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ .ಉಡುಪಿ (ಅಬುಧಾಬಿಯಿಂದ)