Advertisement

Team India ಬೌಲಿಂಗ್ ಕೋಚ್ ಆಗಿ ವಿದೇಶಿ ಆಟಗಾರ? ಈ ಬೌಲರ್ ಹೆಸರು ಸೂಚಿಸಿದ ಗೌತಿ

02:19 PM Jul 12, 2024 | Team Udayavani |

ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿ (Head Coach) ಗೌತಮ್ ಗಂಭೀರ್ (Gautam Gambhir) ಅವರು ಇತ್ತೀಚೆಗೆ ನೇಮಕವಾಗಿದ್ದಾರೆ. ಇದೀಗ ಗೌತಮ್ ಅವರ ಸಹಾಯಕರ ನೇಮಕಕ್ಕೆ ಬಿಸಿಸಿಐ (BCCI) ಮುಂದಾಗಿದೆ. ಇದಕ್ಕೆ ಇದೀಗ ಹಲವು ಹೆಸರುಗಳು ಕೇಳಿಬರುತ್ತಿದೆ.

Advertisement

ಹೊಸ ಕೋಚ್ ಗೆ ಸಹಾಯಕರಾಗಿ ಬ್ಯಾಟಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಮತ್ತು ಬೌಲಿಂಗ್ ಕೋಚ್ ನೇಮಕವಾಗಬೇಕಿದೆ. ಮುಖ್ಯ ಕೋಚ್ ಸೂಚಿಸಿದ ಹೆಸರುಗಳನ್ನು ಅಳೆದು ತೂಗಿ ಬಿಸಿಸಿಐ ಈ ಕೋಚ್ ಗಳನ್ನು ನೇಮಿಸುತ್ತದೆ.

ಬೌಲಿಂಗ್ ಕೋಚ್ ಹುದ್ದೆಗೆ ಇದೀಗ ಹಲವು ಹೆಸರುಗಳು ಕೇಳಿಬರುತ್ತಿದೆ. ಆರಂಭದಲ್ಲಿ ಕನ್ನಡಿಗ ವಿನಯ್ ಕುಮಾರ್ ಅವರ ಹೆಸರನ್ನು ಗೌತಿ ಸೂಚಿಸಿದ್ದರು ಎನ್ನಲಾಗಿತ್ತು. ಆದರೆ ಬಿಸಿಸಿಐ ಇದನ್ನು ನಿರಾಕರಿಸಿದೆ ಎಂದು ವರದಿಯಾಗಿದೆ. ಆ ಬಳಿಕ ಮಾಜಿ ವೇಗಿಗಳಾದ ಜಹೀರ್ ಖಾನ್ ಮತ್ತು ಲಕ್ಷ್ಮೀಪತಿ ಬಾಲಾಜಿ ಅವರ ಹೆಸರುಗಳು ಕೇಳಿಬಂದಿದ್ದವು.

ಆದರೆ ಇದೀಗ ಹೊಸ ಹೆಸರೊಂದು ತೇಲಿ ಬಂದಿದೆ. ಈ ಹಿಂದೆ ಎಲ್ಎಸ್ ಜಿಯಲ್ಲಿ ತನ್ನೊಂದಿಗೆ ಕೆಲಸ ಮಾಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಮೋರ್ನೆ ಮೊರ್ಕೆಲ್ (Morne Morkel) ಅವರನ್ನು ಗೌತಮ್ ಗಂಭೀರ್ ಶಿಫಾರಸ್ಸು ಮಾಡಿದ್ದಾರೆ ಎನ್ನುತ್ತಿದೆ ವರದಿ.

Advertisement

ಮೊರ್ಕೆಲ್ ಅವರು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ತಂಡದ ತರಬೇತುದಾರರಾಗಿದ್ದರು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಯೊಂದಿಗಿನ ಒಪ್ಪಂದದ ಅವಧಿ ಮುಗಿಯುವ ಮೊದಲೇ ಅಲ್ಲಿ ಕೆಲಸ ತೊರೆದರು.

ಮೊರ್ಕೆಲ್ ಅವರು ದಕ್ಷಿಣ ಆಫ್ರಿಕಾ ಪರ 2006ರಿಂದ 2018ರವರೆಗೆ 86 ಟೆಸ್ಟ್, 117 ಏಕದಿನ ಮತ್ತು 44 ಟಿ20 ಪಂದ್ಯಗಳನ್ನಾಡಿದ್ದಾರೆ. ಗೌತಿ ಮೊರ್ಕೆಲ್ ಅವರ ಹೆಸರನ್ನು ಸೂಚಿಸಿದ್ದು, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವೇಗಿಯ ಜೊತೆ ಮಾತುಕತೆ ನಡೆದಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಮಟ್ಟದಲ್ಲಿ ಪರಿಣಾಮಕಾರಿ ಕೋಚ್ ಎಂಬ ಹೆಗ್ಗಳಿಕೆಯ ಮೊರ್ಕೆಲ್ ಅವರು ಗಂಭೀರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಲ್ಎಸ್ ಜಿ ತಂಡದಲ್ಲಿ ಅವರು ಎರಡು ವರ್ಷ ಕೆಲಸ ಮಾಡಿದ್ದಾರೆ. ಹೀಗಾಗಿ ಗಂಭೀರ್ ಅವರು ಮೊರ್ಕೆಲ್ ಆಯ್ಕೆ ವಿಚಾರದಲ್ಲಿ ಉತ್ಸುಕರಾಗಿದ್ದಾರೆ ಎನ್ನುತ್ತಿದೆ ವರದಿ.

Advertisement

Udayavani is now on Telegram. Click here to join our channel and stay updated with the latest news.

Next