Advertisement

ಲಾಲ್‌ಬಾಗ್‌ನ ವಿದೇಶಿ ಪ್ರಜೆಗಳು

10:10 AM Jan 19, 2020 | Lakshmi GovindaRaj |

ಲಾಲ್‌ಬಾಗ್‌ನಲ್ಲಿ ಹೇಗೂ ಗಣರಾಜ್ಯೋತ್ಸವದ ಸಡಗರ ಏರ್ಪಟ್ಟಿದೆ. ಅಲ್ಲಿಗೆ ಹೋದಾಗ, ಸಸ್ಯಕಾಶಿಯಲ್ಲಿ ಮೌನವಾಗಿ ನಿಂತು, ನೆರಳನ್ನು ಹಬ್ಬಿಸುತ್ತಿರುವ, ವಿದೇಶಿ ಮೂಲದ ವೃಕ್ಷಗಳನ್ನು ನೋಡಲು ಮರೆಯದಿರಿ…

Advertisement

ಲೆಕ್ಕವಿಲ್ಲದಷ್ಟು ಸಲ ಲಾಲ್‌ಬಾಗ್‌ಗೆ ಹೋಗಿದ್ದೇವೆ. ಅಲ್ಲಿನ ಹೂವುಗಳ ಸೌಂದರ್ಯಕ್ಕೆ, ಸುಗಂಧಕ್ಕೆ, ದುಂಬಿಯಂತೆ ಮನಸೋತಿದ್ದೇವೆ. ಆಗಸ ಚುಂಬಿಸುವ ಮರಗಳ ಕೆಳಗೆ ಕುಳಿತು ತಂಪಾಗಿದ್ದೇವೆ. ಹತ್ತಾರು ಫೋಟೋ ಕ್ಲಿಕ್ಕಿಸಿ, ಫೇಸ್‌ಬುಕ್‌ ಗೋಡೆಗೆ ಅಂಟಿಸಿದ್ದೇವೆ. ಆದರೆ, ನಮ್ಮ ಇಷ್ಟೆಲ್ಲ ಖುಷಿಯ ಚಿತ್ರಗಳ ಹಿನ್ನೆಲೆಯಲ್ಲಿ ನಿಂತ ಹೆಮ್ಮರಗಳು, ನಮ್ಮ ಪಾಲಿಗೆ ಅಪರಿಚಿತವಾಗಿಯೇ ಉಳಿದಿರುತ್ತವೆ. ಆ ಮರಗಳನ್ನು ನೆಟ್ಟವರಾರು? ಅವುಗಳ ಆಯುಸ್ಸು ಎಷ್ಟಿರಬಹುದು? ನಮ್ಮ ಹಿಂದಿನ ತಲೆಮಾರು ಲಾಲ್‌ಬಾಗ್‌ಗೆ ಹೋದಾಗಲೂ, ಅದೇ ಮರಗಳೇ ಇದ್ದವಲ್ಲಾ?

ನಿಜ, ಲಾಲ್‌ಬಾಗ್‌ನಲ್ಲಿ ಬ್ರಿಟಿಷರ ಕಾಲದ ಮರಗಳೂ ಇವೆ. ಸುಮಾರು 150ರಿಂದ 250 ವರ್ಷ ವಯಸ್ಸಾದ 120 ಮರಗಳು ಇಲ್ಲಿ ಹಿರಿಯ ಜೀವದಂತೆ ನಿಂತು ತಂಪು ಚೆಲ್ಲುತ್ತಿವೆ. ಸಸ್ಯಕಾಶಿಯ ಸಿಬ್ಬಂದಿ, ಮರಗಳ ಪಾಲನೆ ಪೋಷಣೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹೈದರ್‌ ಅಲಿಯ ಸಮಯದಲ್ಲಿ ನೆಟ್ಟ ಮಾವಿನಮರ, ಲಾಲ್‌ಬಾಗ್‌ನಲ್ಲಿಯೇ ಅತ್ಯಂತ ಹಿರಿಯ ವೃಕ್ಷಜೀವ. ಅದಕ್ಕೆ ಸುಮಾರು 250 ವರ್ಷ. ಶತಮಾನಗಳ ಹಿಂದೆ ಮಾರಿಷಸ್‌ನ ರಾಯಭಾರಿ ಲಾಲ್‌ಬಾಗ್‌ನಲ್ಲಿ ಗಿಡಗಳನ್ನು ನೆಡಲು 20 ಪೆಟ್ಟಿಗೆಗಳಲ್ಲಿ ಬೀಜಗಳನ್ನು ರವಾನಿಸಿದ್ದನಂತೆ. ಹಾಗೆಯೇ ವಿದೇಶದಿಂದ ಬೀಜ, ಸಸಿಗಳನ್ನು ತಂದು ಇಲ್ಲಿ ನೆಟ್ಟ ಸಸಿಯಿಂದ ಅರಳಿರುವ ಕೆಲವು ವೃಕ್ಷಗಳೂ ಗಮನ ಸೆಳೆಯುತ್ತಿವೆ.

1. ಬೂರಗದ ಹತ್ತಿ ಮರ
ಮೂಲ: ಮ್ಯಾನ್ಮಾರ್‌, ವರ್ಷ: ಅಂದಾಜು 200
ಇದು ಬ್ರಿಟಿಷರ ಕಾಲದ ಮರವಾಗಿದೆ. ಈ ಮರ, ಮಾರ್ಚ್‌- ಏಪ್ರಿಲ್‌ ಅವಧಿಯಲ್ಲಿ ಪಿಂಗ್‌ಪಾಂಗ್‌ ಚೆಂಡಿನ ಗಾತ್ರದ ಹಣ್ಣನ್ನು, ಜನವರಿ- ಮಾರ್ಚ್‌ ಅವಧಿಯಲ್ಲಿ ಕಣ್ಮನ ಸೆಳೆಯುವಷ್ಟು ಸುಂದರವಾದ ಕೆಂಪು ಹೂಗಳನ್ನು ಬಿಡುತ್ತದೆ. ಇದರ ಹಣ್ಣುಗಳು ನಾರಿನಂಶದಿಂದ ಕೂಡಿದೆ. ಇದರಿಂದ ಹತ್ತಿಯನ್ನೂ ತೆಗೆಯುತ್ತಾರೆ. ಆ ಹತ್ತಿಯನ್ನು ತಲೆದಿಂಬು, ಸೋಫಾಗಳಲ್ಲಿ ಬಳಸುತ್ತಾರೆ. ಮರದ ರೆಂಬೆಕೊಂಬೆಗಳಿಂದ ಬೆಂಕಿಪೊಟ್ಟಣ, ಪ್ಲೆ„ವುಡ್‌, ಅಚ್ಚುಗಳು, ಪೆಟ್ಟಿಗೆಗಳನ್ನು ತಯಾರಿಸುತ್ತಾರೆ. ಮ್ಯಾನ್ಮಾರ್‌ ಭಾಗಗಳಲ್ಲಿ ಇದರ ಹಣ್ಣನ್ನು ಬೇಯಿಸಿ, ಉಪ್ಪಿನಕಾಯಿ ರೀತಿಯ ಪದಾರ್ಥ ತಯಾರಿಸುತ್ತಾರೆ.

2. ಮಳೆ ಮರ
ಮೂಲ: ಬ್ರೆಜಿಲ್‌, ವರ್ಷ: 110
ಮಳೆ ಬಂದ ಸಂದರ್ಭದಲ್ಲಿ ಪಕ್ಷಿ- ಪ್ರಾಣಿಗಳಿಗೆ ಮತ್ತು ಮನುಷ್ಯರಿಗೂ ಆಸರೆಯನ್ನು ನೀಡುವ ಬೃಹತ್‌ ವೃಕ್ಷ ಇದಾಗಿರುವುದರಿಂದ, “ಮಳೆ ಮರ’ ಅಂತಲೇ ಇದನ್ನು ಕರೆಯುತ್ತಾರೆ. ಇದರ ರೆಂಬೆ ಕೊಂಬೆಗಳು ಮರದ ಸುತ್ತಾ ಚಾಚಿಕೊಂಡಿರುತ್ತವೆ. ಮನೆಯ ಚಾವಣಿ ರೂಪದಲ್ಲಿ ಮರ ಬೆಳೆದಿದೆ. 110 ವರ್ಷಗಳ ಹಿಂದೆ ಇದರ ಸಸಿಯನ್ನು ಬ್ರೆಜಿಲ್‌ ದೇಶದಿಂದ ತರಿಸಲಾಗಿತ್ತು. ಈ ಮರದ ಹಣ್ಣು, ಕೋತಿಗಳಿಗೆ ಮತ್ತು ದನಕರುಗಳಿಗೆ ಆಹಾರವಾಗಿದೆ.

Advertisement

3. ಆನೆ ಸೇಬು ಮರ
ಮೂಲ: ಆಸ್ಟ್ರೇಲಿಯಾ, ವರ್ಷ: 95
ಡಿಲೆನಿಯಾ ಇಂಡಿಕಾ ಜಾತಿಗೆ ಸೇರಿದ ಮರ. ಈ ಮರದ ಹಣ್ಣುಗಳು ಆನೆಗಳಿಗೆ ಪ್ರಿಯ. ಜಿಂಕೆಗಳು, ಮಂಗಗಳೂ ಇದರ ಹಣ್ಣುಗಳನ್ನು ತಿನ್ನುತ್ತವೆ. ಭಾರತದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಮರಗಳು ಹೆಚ್ಚಾಗಿ ಕಂಡುಬಂದರೂ, ಈ ಮರದ ಮೂಲ ಆಸ್ಟ್ರೇಲಿಯಾ. ಸುಮಾರು 15 ಮೀಟರ್‌ ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆ, ಹೂವುಗಳು ದೊಡ್ಡ ಗಾತ್ರದಲ್ಲಿರುತ್ತವೆ. ಈ ಮರದ ಹಣ್ಣುಗಳು ದೊಡ್ಡದಾಗಿ ಮತ್ತು ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತವೆ, ಅನೇಕ ಬೀಜಗಳನ್ನು ಒಳಗೊಂಡಿರುತ್ತದೆ. ಸುಮಾರು 90-95 ವರ್ಷದ ಹಳೆಯಮರವಿದು.

4. ಪೇಪರ್‌ ಬಾರ್ಕ್‌ ಮರ
ಮೂಲ: ಆಸ್ಟ್ರೇಲಿಯಾ, ವರ್ಷ: 120
ಇದು ಸಣ್ಣ ಅಥವಾ ಮಧ್ಯಮ ಗಾತ್ರದ ಮರವಾಗಿದೆ. 120 ವರ್ಷದ ಹಳೆಯದಾದ, ಸುಮಾರು 70 ಅಡಿ ಎತ್ತರಕ್ಕೆ ಬೆಳೆಯುವ, ನೀಲಗಿರಿ ಜಾತಿಗೆ ಸೇರಿದ ಮರ ಇದಾಗಿದೆ. ಇದರ ಕಾಂಡವು ದಪ್ಪಗಿದ್ದು, ರಟ್ಟಿನ ತೊಗಟೆಯಿಂದ ಆವೃತ್ತವಾಗಿರುತ್ತದೆ. ಬೂದು- ಹಸಿರು ಬಣ್ಣದ, ಮೊಟ್ಟೆಯಾಕಾರದ ಎಲೆಗಳಿರುತ್ತವೆ. ವಸಂತ ಕಾಲದಲ್ಲಿ ಹೂ ಬೀಡುತ್ತದೆ.

5. ಕೃಷ್ಣ ಆಲ ಮರ
ಮೂಲ: ಮ್ಯಾನ್ಮಾರ್‌, ವರ್ಷ: 180
ಇದು ತುಂಬಾ ವೇಗವಾಗಿ ಬೆಳೆಯುವ ಮರ. 180 ವರ್ಷದ ಹಳೆಯದು. ಬರ್ಮಾ ದೇಶದಿಂದ ಇದರ ಬೀಜಗಳನ್ನು ತಂದು ನೆಟ್ಟು, ಪೋಷಿಸಲಾಗಿತ್ತು. ಮರದ ವಿಶಿಷ್ಟ ಲಕ್ಷಣವೆಂದರೆ, ಎಲೆಗಳ ತಳದಲ್ಲಿ ಪಾಕೆಟ್‌ ತರಹದ ರಚನೆ ಇರುತ್ತದೆ. ಕೃಷ್ಣನು ಬಾಲ್ಯಾವಸ್ಥೆಯಲ್ಲಿದ್ದಾಗ, ಇದೇ ಜಾತಿಯ ಮರದ ಎಲೆಗಳಿಂದ ಹಾಲನ್ನು ಕುಡಿಯುತ್ತಿದ್ದ ಎಂಬ ಕಥೆಯೂ ಇದೆ. ಆದ್ದರಿಂದ, ಇದನ್ನು “ಕೃಷ್ಣ ಆಲ’ ಎಂದು ಕರೆಯುತ್ತಾರೆ.

ಒಟ್ಟು ಮರಗಳು: 8600
ಬ್ರಿಟಿಷರ ಕಾಲದ ಮರಗಳು: 2500
ಪ್ರಭೇದಗಳು: 673
ಕುಟುಂಬಗಳು: 140

* ರವಿಕುಮಾರ ಮಠಪತಿ

Advertisement

Udayavani is now on Telegram. Click here to join our channel and stay updated with the latest news.

Next