Advertisement
ಎತ್ತಿಕಟ್ಟಿದ ಪಂಚೆ, ಖಾದಿ ಅಂಗಿ, ಕನ್ನಡಕ, ತಲೆಗೆ ಕೇಸರಿ ಟವೆಲ್, ಕೊರಳಲ್ಲಿ ರುದ್ರಾಕ್ಷಿ, ವಿಷ್ಣು ಚಕ್ರದ ಪದಕ, ಬಗಲಲ್ಲಿ ಒಂದು ಕೈಚೀಲ, ಅದರೊಳಗೆ ಒಂದಿಷ್ಟು ಅಗತ್ಯ ವಸ್ತುಗಳು… ಇಷ್ಟೇ ಈತನ ಸ್ವತ್ತು. ಅಸಲಿಗೆ ಈತ ವಿದೇಶಿಗ. ಇಟಲಿಯ ಈ ಪ್ರಜೆ ಭಾರತಕ್ಕೆ ಬಂದಾಗ, ಚಪ್ಪಲಿಯನ್ನೇ ಧರಿಸುವುದಿಲ್ಲ. ಅಡ್ರಿಯನ್ ಪಾಲಿಗೆ ಇದು ಪುಣ್ಯನೆಲ. ಹಂಪಿ ಈತನ ಅಧ್ಯಾತ್ಮ ತವರು.
ಭಾರತದ ಅಧ್ಯಾತ್ಮದ ಸೆಳೆತಕ್ಕೆ ಒಳಗಾದ ಅಡ್ರಿಯನ್, ಇಟಲಿಯಲ್ಲಿ ಮೂಲತಃ ಕೃಷಿಕನಂತೆ. ಎಣ್ಣೆಮಿಲ್‌ಗಳಲ್ಲಿ ಕೆಲಸ ಮಾಡುತ್ತಾನೆ. ವಷìದಲ್ಲಿ ಆರು ತಿಂಗಳು ಇಟಲಿಯಲ್ಲಿ ದುಡಿದು, ಕೂಡಿಟ್ಟ ಹಣದಲ್ಲಿ ಇನ್ನುಳಿದ ಅರ್ಧ ವರ್ಷ ಪ್ರಪಂಚ ಸುತ್ತುತ್ತಾನೆ. ಆ ಅವಧಿಯಲ್ಲಿ ಬಹುಪಾಲು ಭಾರತದ ಹಂಪಿಯಲ್ಲೇ ಇರುತ್ತಾನೆ. ಜರ್ಮನಿ, ಸ್ವಿಜರ್ಲೆಂಡ್, ಟರ್ಕಿ, ಇರಾನ್, ಪಾಕಿಸ್ತಾನ… ಹೀಗೆ ಅನೇಕ ದೇಶಗಳನ್ನು ಸುತ್ತಾಡಿ, ಈತ ಭಾರತಕ್ಕೆ ಬಂದಿದ್ದು 1982ರಲ್ಲಿ. ಹಂಪಿಯ ಸುಂದರ ಪರಿಸರ, ಪ್ರಶಾಂತತೆ, ಧಾರ್ಮಿಕ ಮತ್ತು ಪೌರಾಣಿಕ ಹಿನ್ನೆಲೆ ಈತನನ್ನು ಗಾಢವಾಗಿ ಪ್ರಭಾವಿಸಿದೆ. ಆರಂಭದಲ್ಲಿ ಹಂಪಿಗೆ ಬಂದಾಗ, ಮೂರು ತಿಂಗಳು ಇಲ್ಲಿಂದ ಕದಲಲೇ ಇಲ್ಲ. ಹಂಪಿ ಈತನನ್ನು ಅಷ್ಟು ಸೆಳೆದಿತ್ತು. ಅಂದಿನಿಂದಲೇ, ಲೌಕಿಕತೆಯಿಂದ ಅಧ್ಯಾತ್ಮದತ್ತ ಮನಸ್ಸು ವಾಲಿತು. ಜೀವನಪರ್ಯಂತ ಬ್ರಹ್ಮಚಾರಿ ಆಗಿರಲು ನಿರ್ಧರಿಸಿದ. ಮಾಂಸಾಹಾರ ತ್ಯಜಿಸಿ, ಶಾಖಾಹಾರಿ ಆದ. ಹಂಪಿಯ ಹೊಳೆ ದಂಡೆಯ ಮೇಲೆ, ಅಲ್ಲಲ್ಲಿ ಬಿದ್ದ ಒಣ ಕಟ್ಟಿಗೆಗಳಿಗೆ ಬೆಂಕಿ ಹಚ್ಚಿ, ಕ್ಯಾರೆಟ್, ಬೀಟ್‌ರೂಟ್, ಗೆಣಸು, ಕಾಯಿ- ಪಲ್ಲೆಗಳನ್ನು ಬೇಯಿಸಿ ಸೇವಿಸುತ್ತಾ, ಅಪ್ಪಟ ಸನ್ಯಾಸಿಯಂತೆ ವಾಸಿಸುತ್ತಿದ್ದಾನೆ.
Related Articles
ಈಗ 25ನೇ ಬಾರಿಗೆ ಅಡ್ರಿಯನ್, ಹಂಪಿಗೆ ಬಂದಿದ್ದಾನೆ. ಹಂಪಿವಾಸಿಗಳನ್ನು ಗುರುತಿಸಬಲ್ಲ; ಕಂಡವರಿಗೆಲ್ಲಾ ಕಿರುನಗೆಯಲ್ಲೇ ಪ್ರೀತಿ ಹಂಚಬಲ್ಲ ಈತ, ಸರಸರ ನಡೆಯುತ್ತಾ ಗಮನ ಸೆಳೆಯುತ್ತಾನೆ. “ಅಡ್ರಿಯನ್ ಸರಳ ಜೀವಿ. ಮಿತ ಭಾಷಿ. ಸ್ವಲ್ಪ ಸಂಕೋಚದ ಸ್ವಭಾವದವ. ಅಧ್ಯಾತ್ಮದ ಬಗ್ಗೆ ಅಪಾರವಾಗಿ ತಿಳಿದಿದ್ದಾನೆ. ಹಿಂದೂ ಸಾಧು- ಸಂತರ ಬಹಳ ಮಾತಾಡುತ್ತಾನೆ. ಒಬ್ಬಂಟಿಯಾಗಿ ಹಂಪಿಯನ್ನು ಸುತ್ತಾಡುತ್ತಾ, ಏನೋ ಖುಷಿ ಕಾಣುತ್ತಾನೆ’ ಎನ್ನುತ್ತಾರೆ, ಭುವನೇಶ್ವರಿ ಗೆಸ್ಟ್ ಹೌಸ್ ಮಾಲಿಕ ವಿಜಯ್. ಅಡ್ರಿಯನ್ ಪ್ರತಿಸಲ ತಂಗುವುದೂ ಇಲ್ಲಿಯೇ. ಇಂಗ್ಲಿಷ್, ಫ್ರೆಂಚ್, ಹಿಂದಿಯನ್ನು ಸುಲಲಿತವಾಗಿ ಮಾತಾಡಬಲ್ಲ ಈತನಿಗೆ ಕನ್ನಡವೂ ತಕ್ಕಮಟ್ಟಿಗೆ ಗೊತ್ತು.
Advertisement
– ಅಡ್ರಿಯನ್, ಇಟಲಿ ಪ್ರಜೆ ಚಿತ್ರ- ಲೇಖನ: ಸ್ವರೂಪಾನಂದ ಎಂ. ಕೊಟ್ಟೂರು