ನವದೆಹಲಿ:ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸೋಮವಾರ ಸಂಸತ್ ಭವನದಲ್ಲಿ ಔಪಚಾರಿಕವಾಗಿ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಡಾ.ಜೈಶಂಕರ್ 1977ನೇ ಬ್ಯಾಚ್ ನ ಐಎಫ್ ಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಜೈಶಂಕರ್ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳು ಭಾರತೀಯ ಜನತಾ ಪಕ್ಷ ಭರ್ಜರಿ ಬಹುಮತ ಪಡೆಯುವ ಮೂಲಕ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಏರಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಂಪುಟದಲ್ಲಿ ಜೈಶಂಕರ್ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬಹುತೇಕ ಜೈಶಂಕರ್ ಅವರನ್ನು ಗುಜರಾತ್ ನಿಂದ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ನರೇಂದ್ರ ಮೋದಿ ಸಂಪುಟದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜೈಶಂಕರ್, ವಿದೇಶಾಂಗ ವ್ಯವಹಾರಗಳ ಬಿಕ್ಕಟ್ಟು ಪರಿಸ್ಥಿತಿ ನಿಭಾಯಿಸುವ ಚಾಣಕ್ಯ ಎಂದೇ ಹೆಸರಾಗಿದ್ದಾರೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯಲ್ಲಿ ಮೂರು ವರ್ಷಗಳ ಕಾಲ ಜೈಶಂಕರ್ ವಿದೇಶಾಂಗ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.