ಬೆಂಗಳೂರು: ಶಾಲಾ, ಕಾಲೇಜು ಹಾಗೂ ಐಟಿ-ಬಿಟಿ ಕಂಪೆನಿಗಳ ಬಳಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೈಜಿರಿಯಾ ಆಂಥೋನಿ (24), ಬ್ರಿಟನ್‌ನ ಓವೆನ್ ಫೆನಾಲಿಗನ್(37) ಮತ್ತು ಮೊಝಂಬಿಕ್‌ನ ಇಸೆùಲ್ ಮ್ಯಾನ್ಯೂಯಲ್(28) ಬಂಧಿತರು. ಆರೋಪಿಗಳಿಂದ 7.50 ಲಕ್ಷ ಮೌಲ್ಯದ 6 ಗ್ರಾಂ ತೂಕದ ಕೊಕೇನ್, 7 ಮೊಬೈಲ್‌ಗಳು, 1 ಐಫೋನ್, ಐ-ಪ್ಯಾಡ್, ಎರಡು ಪಾಸ್‌ಪೋರ್ಟ್, ಎರಡು ಬೈಕ್, ಕಾರು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಮೂವರು ಕೊತ್ತನೂರು, ವೈಟ್‌ಫೀಲ್ಡ್, ಕೆ.ಆರ್.ಪುರಂನಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಆಂಥೋನಿ 2014ರಲ್ಲಿ ಮಾದಕ ವಸ್ತು ಮಾರಾಟದ ಆರೋಪದ ಮೇಲೆ ತನ್ನ ಇಬ್ಬರು ಸಹಚರರೊಂದಿಗೆ ಬಂಧನಕ್ಕೊಳಗಾಗಿದ್ದು, ಈ ವೇಳೆ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿತ್ತು. ನಂತರ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿ, ಫೆನಾಲಿಗನ್ ಮತ್ತು ಮ್ಯಾನ್ಯೂಯಲ್ ಅನ್ನು ಪರಿಚಯಿಸಿಕೊಂಡು ಮತ್ತೆ ದಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ.
ಇನ್ನು ಓವೆನ್ ಫೆನಾಲಿಗನ್ ಮತ್ತು ಇಸೆùಲ್ ಮ್ಯಾನ್ಯೂಯಲ್ ಬಳಿ ಪಾಸ್ ಪೋರ್ಟ್ ಇದ್ದು, ಶಾಶ್ವತವಾಗಿ ನೆಲೆಸುವ ವೀಸಾದಡಿ ನಗರಕ್ಕೆ ಬಂದಿದ್ದಾರೆ. ಜೀವನ ನಿರ್ವಹಣೆಗಾಗಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದರು. ಇದೇ ವೇಳೆ ಆರೋಪಿಗಳು ಆಂಥೋನಿಯನ್ನು ಪರಿಚಯಿಸಿಕೊಂಡಿದ್ದಾರೆ.
ಬಳಿಕ ಮೂವರು ಒಟ್ಟಿಗೆ ದಂಧೆ ಆರಂಭಿಸಿದ್ದು, ಆಂಧ್ರ, ಹೈದ್ರಾಬಾದ್, ಮುಂಬೈ ಮೂಲಕ ಮಾದಕ ವಸ್ತು ಕೋಕೇನ್ ಅನ್ನು ತರಿಸಿ, ಅವುಗಳನ್ನು 5, 10 ಗ್ರಾಂ ತೂಕದ ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನು ಮಾಡಿ ವಿದ್ಯಾರ್ಥಿಗಳು ಹಾಗೂ ಸಾಫ್ಟ್ವೇರ್ ಕಂಪೆನಿಗಳ ಬಳಿ ನಿಂತು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಬೈಯಪ್ಪನಹಳ್ಳಿಯ ಎನ್‌ಜಿಇಎಫ್ ಲೇಔಟ್‌ನ ಸದಾನಂದನಗರದಲ್ಲಿ ಮಾದಕ ವಸ್ತು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ, ಸಿಮ್ ಕಾರ್ಡ್ ಬೇರೆಯವರ ಹೆಸರಲ್ಲಿ: ಮಾದಕ ವ್ಯಸನಿಗಳು ಮಾದಕ ವಸ್ತು ಪಡೆಯಲು ಮೊದಲೇ ಆನ್‌ಲೈನ್ ಅಥವಾ ಮೊಬೈಲ್ ಮೂಲಕ ಸಂಪರ್ಕಿಸಿ ಬುಕ್ ಮಾಡಬೇಕು. ಬಳಿಕ ಆರೋಪಿಗಳೇ ಸ್ಥಳಕ್ಕೆ ಬಂದು ಸರಬರಾಜು ಮಾಡುತ್ತಿದ್ದರು. ಅದು ಪರಿಚಯಸ್ಥ ಗ್ರಾಹಕರಿಗೆ ಮಾತ್ರ. ಜತೆಗೆ ತಮ್ಮ ಮೊಬೈಲ್‌ನಲ್ಲಿ ಸಂಗ್ರಹವಾಗಿರುವ(ಸೆವ್ ಮಾಡಿಕೊಂಡಿದ್ದರೆ) ಗ್ರಾಹಕರಿಗೆ ಮಾತ್ರ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು.
ಅಪರಿಚಿತರಿಗೆ ಕೊಡುತ್ತಿರಲಿಲ್ಲ. ಇದಕ್ಕಾಗಿ ಮೂವರು ವಿದೇಶಿಗರಾಗಿದ್ದರೂ ಸ್ಥಳೀಯರ ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಮ್‌ಕಾರ್ಡ್‌ಗಳನ್ನು ಖರೀದಿಸಿದ್ದಾರೆ. ಹಾಗೆಯೇ ಇವರ ಬಳಿ ಇರುವ ವಾಹನಗಳು ಸಹ ಬೇರೆಯವರ ಹೆಸರಿನಲ್ಲಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.