Advertisement

ದೂಧ್ ಸಾಗರ ಜಲಪಾತಕ್ಕೆ ತೆರಳುತ್ತಿದ್ದ ವಿದೇಶಿ ಸೈಕ್ಲಿಸ್ಟ್ ಗಳಿಗೆ ತಡೆ

05:29 PM Mar 03, 2023 | Team Udayavani |

ಪಣಜಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಗಳನ್ನು ಪ್ರಕಟಿಸುವಾಗ ಆಡಳಿತವೂ ಅಷ್ಟೇ ಸಕಾರಾತ್ಮಕವಾಗಿರಬೇಕು. ಯುರೋಪ್‍ನ ಲಿಥುವೇನಿಯಾದಿಂದ ಗೋವಾ ಪ್ರವೇಶಿಸಿದ್ದ ಎಂಟು ಸೈಕ್ಲಿಸ್ಟ್ ಗಳನ್ನು ಗೋವಾದ ಕುಳೆಯಲ್ಲಿ ಅರಣ್ಯಾಧಿಕಾರಿಗಳ ಕಠಿಣ ನೀತಿಯಿಂದಾಗಿ ಅಭಯಾರಣ್ಯದ ಸೈಕಲ್ ಪ್ರವಾಸಕ್ಕೆ ಪ್ರವೇಶಿಸದಂತೆ  ಅವರನ್ನು ತಡೆಯಲಾಯಿತು.ಸೈಕಲಿಸ್ಟಗಳು ದೂಧಸಾಗರ ಜಲಪಾತಕ್ಕೆ ತೆರಳಲು ಪರವಾನಗಿ ನೀಡದಿರುವುದು ಸಾಹಸಿ ಪ್ರವಾಸಿಗರಲ್ಲಿ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Advertisement

ಗೋವಾದ ದೂಧ್ ಸಾಗರ ಜಲಪಾತವು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಜಲಪಾತ ವೀಕ್ಷಣೆಗೆ ಜಗತ್ತಿನ ವಿವಿಧ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಪ್ರತಿದಿನ ಆಗಮಿಸುತ್ತಾರೆ. ಆದರೆ ಇಲ್ಲಿನ ಕೆಲ ನಿರ್ಬಂಧಗಳು ಪ್ರವಾಸಿಗರ ಉತ್ಸಾಹಕ್ಕೆ ನೀರರಚುವಂತೆ ಮಾಡಿದೆ. ದೇಶಾದ್ಯಂತ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಎಂಟು ಸೈಕ್ಲಿಸ್ಟ್ ಗಳು ಗುರುವಾರ ಕುಲೆಯಲ್ಲಿರುವ ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಗೆ ಬಂದರು.

ದೂಧ್ ಸಾಗರ, ಭಗವಾನ್ ಮಹಾವೀರ ಅಭಯಾರಣ್ಯ ಮತ್ತು ಮೋಲೆಮ್ ರಾಷ್ಟ್ರೀಯ ಉದ್ಯಾನವನವನ್ನು ಸೈಕಲ್‍ನಲ್ಲಿ ನೋಡಬೇಕೆಂಬ ಬಲವಾದ ಆಸೆ ಅವರಲ್ಲಿತ್ತು. ಆದರೆ, ಅರಣ್ಯಾಧಿಕಾರಿಗಳು ಸೈಕಲ್ ತೆಗೆದುಕೊಳ್ಳಲು ನಿರಾಕರಿಸಿ, ಸರಕಾರ ನೀಡಿದ ಜೀಪ್ ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಸೈಕ್ಲಿಂಗ್ ಮೂಲಕ ಅವರು ಬಯಸಿದ ಸ್ಥಳಗಳಿಗೆ ಏಕೆ ಹೋಗಲು ಸಾಧ್ಯವಿಲ್ಲ ಎಂದು ಕೇಳಿದಾಗ, ಸಂಬಂಧಪಟ್ಟ ಸಿಬಂದಿಯ ಬಳಿ ನಿಖರವಾದ ಉತ್ತರವಿಲ್ಲ. ವಾಸ್ತವವಾಗಿ, 2019 ರಲ್ಲಿ, ಆಗಿನ ಶಾಸಕ ಪ್ರಸಾದ್ ಪೌಸ್ಕರ್ ಇದೇ ಪ್ರದೇಶವನ್ನು ‘ಜಂಗಲ್ ಸೈಕ್ಲಿಂಗ್ ಸ್ಪಾಟ್’ ಎಂದು ಗುರುತಿಸಿದ್ದರು. ಈ ವಿಷಯದಲ್ಲಿ ಹೆಚ್ಚಿನ ಪ್ರಚಾರವೂ ಇತ್ತು.

ಅದೇ ಪ್ರದೇಶದ ಜಂಗಲ್ ಬುಕ್ ರೆಸಾರ್ಟ್ ಮಾಲಕ ಜೋಸ್ ಬ್ಯಾರೆಟೊ ಪ್ರಕಾರ, ಕುಳೆ-ದೂಧಸಾಗರ್ ಜಲಪಾತಕ್ಕೆ ತೆರಳುವ  ಫುಟ್‍ಪಾತ್ ಜೀಪ್ ಮಾರ್ಗಕ್ಕೆ ಸಮಾನಾಂತರವಾಗಿದೆ. ನಾನು ಈ ಹಿಂದೆ ಅಲ್ಲಿ ಸೈಕಲ್ ತುಳಿದಿದ್ದೆ. ಆ ಅನುಭವ ಆಹ್ಲಾದಕರವಾಗಿರುತ್ತದೆ ಎಂದರು.

ಲಿಥುವೇನಿಯನ್ ಸೈಕ್ಲಿಸ್ಟ್‍ಗಳನ್ನು ಅಭಯಾರಣ್ಯಕ್ಕೆ ಸೈಕಲ್ ಮೂಲಕ ಪ್ರವೇಶಿಸಲು ಅನುಮತಿಸದಿರುವುದು ಸಾಹಸಿ ಪ್ರವಾಸಿಗರಲ್ಲಿ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದರು. ಸೈಕಲ್‍ಗಳು ವಾಹನಗಳಂತೆ ಯಾವುದೇ ವಾಯು ಮಾಲಿನ್ಯವನ್ನು ಉಂಟುಮಾಡುವುದಿಲ್ಲ. ನಂತರ ಈ ಎಂಟು ಜನ ಹತಾಶ ಸೈಕ್ಲಿಸ್ಟ್ ಗಳು ಜಲಪಾತವನ್ನು ತಲುಪಲು ಜೀಪ್ ಸೇವೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ನೀಡಿದರು.

Advertisement

ಅರಣ್ಯಾಧಿಕಾರಿ ಸೌರಭ್ ಕುಮಾರ್ ರವರನ್ನು ಸಂಪರ್ಕಿಸಿದಾಗ- ಅಭಯಾರಣ್ಯದ ಆವರಣದಲ್ಲಿ ಕಾಡು ಪ್ರಾಣಿಗಳ ಮುಕ್ತ ಸಂಚಾರ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಸೈಕ್ಲಿಂಗ್ ಮಾರ್ಗವನ್ನು ಮುಚ್ಚಲಾಗಿದೆ. ಸೈಕ್ಲಿಸ್ಟ್ ಗಳ ಸುರಕ್ಷತೆ ದೃಷ್ಟಿಯಿಂದ ಅಭಯಾರಣ್ಯದೊಳಗೆ ಪ್ರವೇಶಿಸಲು ಅವರಿಗೆ ಅವಕಾಶವಿಲ್ಲ” ಎಂದು ಹೇಳಿದರು.

ಈ ಕುರಿತಂತೆ ಜಂಗಲ್ ಬುಕ್ ರೆಸಾರ್ಟ್ ಮಾಲಕ ಜೋಸ್ ಬ್ಯಾರೆಟೊ ಮಾತನಾಡಿ, ದೂಧ್ ಸಾಗರ ಜಲಪಾತಕ್ಕೆ ತೆರಳಲು ಅಭಯಾರಣ್ಯದಲ್ಲಿ ವನ್ಯ ಜೀವಿಗಳು ಧಾಳಿ ಮಾಡುವಂತಹ ಅಪಾಯವಿದ್ದರೆ ಜೀಪ್‍ಗಳ ಮೂಲಕವೂ ದೂಧಸಾಗರ ಜಲಪಾತಕ್ಕೆ ತೆರಳುವುದನ್ನು ತಡೆಯಬೇಕಾಗುತ್ತದೆ. ಇಲ್ಲಿನ ಚೆಕ್‍ಪೋಸ್ಟಗಳಲ್ಲಿ ವನ್ಯಜೀವಿ ಬೆದರಿಕೆ ಕುರಿತು ಯಾವುದೇ ರೀತಿಯ ಉಲ್ಲೇಖವಿಲ್ಲ. ಹಾಗಾದರೆ ಹಿರಿಯ ಅಧಿಕಾರಿಗಳು ನಿರ್ಧರಿಸುವ ನೀತಿಗಳ ಬಗ್ಗೆ ವನಪಾಲಕರಿಗೆ ಯಾವುದೇ ಮಾಹಿತಿಯಿರುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next