Advertisement

Foreign ವ್ಯವಹಾರ ನಿಪುಣ: ಹೆನ್ರಿ ಕಿಸಿಂಜರ್‌

12:59 AM Dec 01, 2023 | Team Udayavani |

ಅಮೆರಿಕ ರಾಜಕಾರಣದಲ್ಲಿ ಮಾತ್ರವಲ್ಲ, ಸಮಕಾಲೀನ ವಿದೇಶಾಂಗ ವ್ಯವಹಾರಗಳ ವಲಯದಲ್ಲಿ  ಹೆನ್ರಿ ಕಿಸಿಂಜರ್‌ ಅವರದ್ದು ಬಹುದೊಡ್ಡ ಹೆಸರು. ಸತತ ಎಂಟು ವರ್ಷಗಳ ಕಾಲ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ, ಅದಕ್ಕೂ ಮುನ್ನ ವಿದೇಶಾಂಗ ಇಲಾಖೆ ಸಲಹೆಗಾರರಾಗಿ ಕೆಲಸ ಮಾಡಿದ ಕಿಸಿಂಜರ್‌, ಡೆಮಾಕ್ರೆಟಿಕ್‌ ಮತ್ತು ರಿಪಬ್ಲಿಕನ್‌ ಪಕ್ಷದ ಸರಕಾರಗಳಿಗೂ ಖಾಯಂ ಸಲಹೆಗಾರರಾಗಿದ್ದರು.

Advertisement

ಅಮೆರಿಕದ ಇತಿಹಾಸದಲ್ಲಿ ಅಲ್ಲಿನ ಅಧ್ಯಕ್ಷರಷ್ಟೇ ಪ್ರಸಿದ್ಧಿ ಪಡೆದವರೆಂದರೆ ಅದು ಕಿಸಿಂಜರ್‌ ಅವರೇ ಇರಬೇಕು. ಒಂದೆಡೆ ಯುದ್ಧದಾಹಿ ಎಂಬ ಹೆಸರು ಪಡೆದಿರುವಂತೆಯೇ, ಇನ್ನೊಂದೆಡೆ ನೊಬೆಲ್‌ ಶಾಂತಿ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡವರು. ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಿಸಿದಾಗ, ಅದನ್ನು ವಿರೋಧಿಸಿ ನೊಬೆಲ್‌ ಸಮಿತಿಯ ಇಬ್ಬರು ರಾಜೀನಾಮೆ ಸಲ್ಲಿಸಿದ್ದರು. ಆದರೆ ಕಾಂಬೋಡಿಯಾ ದೇಶದ ಆಂತರಿಕ ಕದನ ಮತ್ತು ಅದರ ಮೇಲಿನ ಬಾಂಬ್‌ ದಾಳಿಗೂ ಇವರೇ ಕಾರಣ ಎಂಬ ಮಾತುಗಳೂ ಇವೆ. ಅಲ್ಲದೆ ಅಮೆರಿಕದ ಸುದೀರ್ಘ‌ ಕಾಲದ ವಿಯೆಟ್ನಾಂ ಕದನಕ್ಕೆ ಇತಿಶ್ರೀ ಹಾಡಿ ಅಮೆರಿಕದ ಮುಖ ಉಳಿಸಿದವರು. ಯುದ್ಧವನ್ನು ದೀರ್ಘ‌ಕಾಲ ನಡೆಸಲು ಬಿಟ್ಟು ಸಾವಿರಾರು ಮಂದಿ ಬದುಕಿಗೆ ಎರವಾದ ಆರೋಪದಲ್ಲಿ ಇವರ ವಿರುದ್ಧ ಯುದ್ಧಾಪರಾಧದ ಬಗ್ಗೆ ತನಿಖೆ ನಡೆಸಬೇಕಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.

ಕಿಸಿಂಜರ್‌ ಅಮೆರಿಕ ಅಧ್ಯಕ್ಷರಾದ ರಿಚರ್ಡ್‌ ನಿಕ್ಸನ್‌ ಮತ್ತು ಗೆರಾಲ್ಡ್‌ ಫೋರ್ಡ್‌ ಅಧ್ಯಕ್ಷರಾಗಿದ್ದ ಕಾಲದಲ್ಲಿ ವಿದೇಶಾಂಗ ಸಚಿವರಾಗಿದ್ದರು.   ಇವರ ಬಗ್ಗೆ ತೀರಾ ವಿಶೇಷವೆನ್ನಿಸುವ ಸಂಗತಿಗಳಿವೆ. ಕಿಸಿಂಜರ್‌ ಅವರನ್ನು “ಶಟಲ್‌ ಡಿಪ್ಲೋಮಸಿ’ಯ ವಿದೇಶಾಂಗ ಸಚಿವ ಎಂದೇ ಕರೆಯಲಾಗುತ್ತಿತ್ತು. ಇದಕ್ಕೆ ಕಾರಣಗಳೂ ಇವೆ. ಮಧ್ಯಪ್ರಾಚ್ಯ ದೇಶಗಳಲ್ಲಿನ ಅಶಾಂತಿ ನಿಲ್ಲಿಸುವ ಕಾರಣದಿಂದ ರಹಸ್ಯವಾಗಿ ಹಲವಾರು ನಾಯಕರನ್ನು ಭೇಟಿ ಮಾಡಿ ಅವರ ಮನವೊಲಿಕೆ ಮಾಡಿದ್ದರು. ಅಷ್ಟೇ ಅಲ್ಲ, ರಷ್ಯಾದೊಂದಿಗಿನ ಶೀತಲ ಸಮರಕ್ಕೆ ಹೊಸ ಆಯಾಮ ನೀಡಿದ ಇವರು, ಕಾಲದಲ್ಲಿ ಅಮೆರಿಕ ಮತ್ತು ಚೀನ ನಡುವಿನ ಸಂಬಂಧ ಸುಧಾರಣೆಗೆ ಆದ್ಯತೆ ನೀಡಿದ್ದರು. ಅಮೆರಿಕದ ವಾಟರ್‌ಗೇಟ್‌ ಹಗರಣದ ವೇಳೆ ನಿಕ್ಸನ್‌ ಬದಲಿಗೆ ಅರೆ ಅಧ್ಯಕ್ಷೀಯ ಜವಾಬ್ದಾರಿಯನ್ನೂ ಹೊಂದಿದ್ದರು.

1970ರ ಪಾಕಿಸ್ಥಾನ ಯುದ್ಧದ ವೇಳೆಯಲ್ಲಿ ಪಾಕಿಸ್ಥಾನವನ್ನು ಬೆಂಬಲಿಸಿದ ಇವರು, ಭಾರತ ವಿರೋಧಿ ಭಾವನೆ ಹೊಂದಿದ್ದರಲ್ಲದೆ, ಒಂದು ಹಂತದಲ್ಲಿ  ಭಾರತೀಯರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿ ವಿವಾದಕ್ಕೀಡಾಗಿದ್ದರು. 2014ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ಅಮೆರಿಕ ಮತ್ತು ಭಾರತದ ಸಂಬಂಧ ಹೆಚ್ಚು ಸುಧಾರಣೆಯಾಗಬೇಕು ಎಂದು ಹೇಳುತ್ತಿದ್ದರು. ಇತ್ತೀಚೆಗಷ್ಟೇ ಮೋದಿಯವರು ಅಮೆರಿಕದ ಆತಿಥ್ಯದ ಮೇಲೆ ಹೋಗಿದ್ದಾಗ, ಪ್ರಧಾನಿ ಭಾಷಣ ಕೇಳಲೆಂದೇ ವೈಟ್‌ಹೌಸ್‌ಗೆ ಹೋಗಿದ್ದರು. ಆಗ ಮೋದಿಯವರನ್ನೂ ಭೇಟಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next