Advertisement

ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

05:17 PM Apr 17, 2019 | pallavi |

ಸೊರಬ: ಹಲವು ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಪಟ್ಟಣದ ಕಾನಕೇರಿ ಬಡಾವಣೆಯ ನಿವಾಸಿಗಳು ನೀರಿನ ಸಮಸ್ಯೆ ನೀಗಿಸುವಂತೆ ಖಾಲಿ ಕೊಡ ಹಿಡಿದು ಪಪಂ ಮುಂಭಾಗದಲ್ಲಿ ಮಂಗಳವಾರ ದಿಢೀರನೆ ಪ್ರತಿಭಟನೆ ನಡೆಸಿದರು.

Advertisement

ಕಳೆದ 15 ದಿನಗಳಿಂದ ಪಟ್ಟಣದ ಕಾನಕೇರಿಬಡಾವಣೆಯ ಹಲವಾರು ವಾರ್ಡ್‌ಗಳಲ್ಲಿ ಕುಡಿಯುವ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಸಮರ್ಪಕ ನೀರಿನ ವ್ಯವಸ್ಥೆ ಇದ್ದಾಗಲೂ ವಾರಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದ ಪಪಂ ಆಡಳಿತ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆಗುವ ಅಭಾವ ತಪ್ಪಿಸಲು ಮುಂಜಾಗ್ರತೆಯಾಗಿ ಕ್ರಮ ಕ್ರಮ ಕೈಗೊ‌ಳ್ಳದಿರುವುದು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ನೀರಿನ ಅವ್ಯವಸ್ಥೆ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೆ ಸರ್ವೆ ನಂ 113ರಲ್ಲಿರುವ ವಾರ್ಡ್‌ಗಳು ನನ್ನ ವ್ಯಾಪ್ತಿಗೆ ಬರುವುದಿಲ್ಲ. ನೀವು ತಹಶೀಲ್ದಾರ್‌ ಅವರ ಬಳಿ ನಿಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳಿ ಎಂದು ಹೇಳುವುದಲ್ಲದೇ, ನೀರನ್ನು ಅಂಗಡಿಯಲ್ಲಿ ಖರೀದಿ ಮಾಡಿಕೊಡಬೇಕೆ ಎಂಬ ಉಡಾಫೆ ಉತ್ತರ ನೀಡುತ್ತೀರಿ. ಜನರಿಗೆ ಸ್ಪಂದಿಸುವ ಮನೋಭಾವ ನಿಮಗೆ ಇಲ್ಲದಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಡಿ ಎಂದು ಪ್ರತಿಭಟನಾಕಾರರು ಮುಖ್ಯಾಧಿಕಾರಿ ಜಗದೀಶ ನಾಯಕ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಕುಡಿಯುವ ನೀರಿಗಾಗಿ ಪಪಂ ತಾಲೂಕಿನ ವರದಾ ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿದ್ದು, ಈ ತಾತ್ಕಾಲಿಕ ವ್ಯವಸ್ಥೆಗೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡಲಾಗುತ್ತಿದೆ. ಈಗಾಗಲೇ ನದಿಯಲ್ಲಿ ನೀರು ಬರಿದಾಗಿದೆ. ಆದರೆ ಪರ್ಯಾಯವಾಗಿ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಸಿ ಪಟ್ಟಣದಲ್ಲಿ ಎದುರಾಗಿರುವ ನೀರಿನ ಬವಣೆ ನೀಗಿಸಲು ಮುಂದಾಗದೆ ವಿದ್ಯುತ್‌ ಸಮಸ್ಯೆ ಮುಂದಿಟ್ಟು ಜನರ ಜೀವನದ ಜೊತೆ ಚೆಲ್ಲಾಟವಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಇಡಗೋಡು ಇಸ್ಮಾಯಿಲ್‌, ರೇವಣಪ್ಪ, ನಾಗರಾಜ್‌, ರವಿ, ಅನ್ನೀಸ್‌, ನಜೀರ್‌ ಸಾಬ್‌, ಬಾಷಾ, ಜಗದೀಶ್‌, ರಾಜು, ರಾಮಪ್ಪ, ಗುರುರಾಜ, ರಾಜೇಶ್‌ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next