ನವದೆಹಲಿ: ಖ್ಯಾತ ಓಟಗಾರ್ತಿ ಪಿ.ಟಿ.ಉಷಾ 1984ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ
ಅನಿವಾರ್ಯವಾಗಿ ಕೇವಲ ಗಂಜಿ ಊಟ, ಉಪ್ಪಿನಕಾಯಿ ತಿಂದು ಓಡಿದ್ದರು.
ಮಾತ್ರವಲ್ಲ ಸರಿಯಾದ ಪೌಷ್ಟಿಕಾಂಶ ಇರುವ ಆಹಾರ ಸಿಗದ ಕಾರಣಕ್ಕೆ ತನಗೆ ಒಲಿಂಪಿಕ್ಸ್‌ನಲ್ಲಿ ಬರಬೇಕಿದ್ದ ಸಂಭವನೀಯ
ಪದಕವೊಂದನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಒಲಿಂಪಿಕ್ಸ್ ಕೂಟದ 400 ಮೀ.ಹರ್ಡಲ್ಸ್ ಫೈನಲ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಪಿ.ಟಿ.ಉಷಾ ಕಂಚಿನ ಪದಕ ಕಳೆದುಕೊಂಡಿದ್ದರು. ಅ ದಿನವನ್ನು ಕಾರ್ಯಕ್ರಮವೊಂದರಲ್ಲಿ ಉಷಾ ನೆನಪಿಸಿಕೊಂಡಿದ್ದಾರೆ. ವಿದೇಶಕ್ಕೆ ಕೂಟಕ್ಕೆ ತೆರಳಿದಾಗ ನಮಗಿಂತ ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಪಡೆದುಕೊಂಡ ಬೇರೆ ರಾಷ್ಟ್ರದ ಅಥ್ಲೀಟ್‌ಗಳನ್ನು ನೋಡಿ ಹೊಟ್ಟೆಯುರಿಪಟ್ಟುಕೊಳ್ಳುತ್ತಿದ್ದೆವು.ಇನ್ನೂ ನೆನಪಿದೆ. ಲಾಸ್‌ಏಂಜಲೀಸ್ ಒಲಿಂಪಿಕ್ಸ್‌ಗೆ ತೆರಳಿದ್ದಾಗ ನನಗೆ ಬೇರೆ ದಾರಿ ಇಲ್ಲದೆ ಕೇರಳದಿಂದ ತೆಗೆದುಕೊಂಡು ಹೋಗಿದ್ದ ಉಪ್ಪಿನ ಕಾಯಿ ಮತ್ತು ಗಂಜಿ ಮಾಡಿಕೊಂಡು ತಿಂದಿದ್ದೆ. ಅಲ್ಲಿನ ವಾತಾವರಣಕ್ಕೆ ಅಗತ್ಯವಾಗಿದ್ದ ಅಮೆರಿಕದ ಆಹಾರಗಳು ನಮಗೆ ಸಿಗಲೇ ಇಲ್ಲ. ಇದೇ ಕಾರಣದಿಂದ ಫೈನಲ್‌ನಲ್ಲಿ ನನಗೆ ಎನರ್ಜಿ ಕಾಪಾಡಿಕೊಂಡು ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂದರು.