ಆಳಂದ: ಮೆಟ್ರಿಕ್ ನಂತರದ ಸರ್ಕಾರಿ ಪದವಿ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಮೂಲಸೌಭ್ಯ ಕಲ್ಪಿಸಬೇಕು ಎಂದು ಬಂಜಾರಾ ಕ್ರಾಂತಿದಳ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ಪಿ. ರಾಠೊಡ ನೇತೃತ್ವದಲ್ಲಿ ಕಾರ್ಯಕರ್ತರು, ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೂಡಲೇ ಬೇಡಿಕೆ ಈಡೇರಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಸತಿ ನಿಲಯಕ್ಕೆ ಸೌಲಭ್ಯ ಕಲ್ಪಿಸುವಂತೆ ಕಳೆದ ಜ.7ರಂದು ವಿದ್ಯಾರ್ಥಿ ವಸತಿ ನಿಲಯದ ಎದುರು ಹೋರಾಟ ಕೈಗೊಂಡು ಮೂಲಸೌಕರ್ಯ ಹಾಗೂ ಊಟದ ವ್ಯವಸ್ಥೆ ಸುಧಾರಿಸಲು ಪ್ರತಿಭಟನೆ ಕೈಗೊಂಡು ಮನವಿ ಸಲ್ಲಿಸಿದ ಮೇಲೆ ಸಮಾಜ ಕಲ್ಯಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ನಂತರ 15 ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಗಮನಿಸಿದರೆ ನಿಲಯದಲ್ಲಿ ಮೇಲ್ವಿಚಾರಕರೇ ಇಲ್ಲವೆನ್ನುವ ಹಾಗಿದೆ. ವಿದ್ಯಾರ್ಥಿಗಳಿಗೆ ಬೇಕಾಗುವ ಸೌಕರ್ಯಗಳನ್ನು ಕಲ್ಪಿಸದೇ ಕಾಲಹರಣ ಮಾಡುತ್ತಿರುವ ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಮೂರು ತಿಂಗಳಿಂದಲೂ ಸರಿಯಾದ ಊಟ ಕೊಡುತ್ತಿಲ್ಲ. ಅಡುಗೆ ಕೋಣೆ ಸ್ವತ್ಛವಾಗಿಲ್ಲ. ಪೌಷ್ಟಿಕಾಂಶ ಆಹಾರ ಹಾಗೂ ಊಟದ ಪಟ್ಟಿಯಂತೆ ಆಹಾರ ಒದಗಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶೌಚಾಲಯ ಸ್ವತ್ಛತೆ, ನೀರಿನ ಸಮಸ್ಯೆ ನಿವಾರಣೆ, ಸ್ನಾನಕ್ಕೆ ಬಿಸಿನೀರಿಗಾಗಿ ವ್ಯವಸ್ಥೆ, ಆಟದ ಮೈದಾನ ಸ್ವತ್ಛತೆ, ಆವರಣ ಬಾಗಿಲಿಗೆ ಗೇಟ್ ಅಳವಡಿಸಿ ಕಾವಲುಗಾರ ನೇಮಿಸಬೇಕು. ಎರಡು ತಿಂಗಳಿಂದ ಸಾಬೂನು, ಎಣ್ಣೆಕೊಟ್ಟಿಲ್ಲ. ಮಲಗಲು ಗಾದಿ ವ್ಯವಸ್ಥೆ, ಜನರೇಟರ್ ದುರಸ್ತಿ, ಗುಣಮಟ್ಟದ ಊಟ ಮಾಡಲು ಹೊಸ ಅಡುಗೆ ಸಿಬ್ಬಂದಿ ನೇಮಕ, ನಿಲಯದ ಮೇಲ್ಛಾವಣಿ ಸ್ವತ್ಛತೆ ಹಾಗೂ ಸಿಂಟ್ಯಾಕ್ಸ್‌ಗಳಿಗೆ ಮುಚ್ಚಳಿಕೆ ಅಳವಡಿಸಬೇಕು. ಬೇಡಿಕೆಗಳ ಈಡೇರಿಸಲು ವಿಳಂಬ ನೀತಿ ಅನುಸರಿಸಿದರೆ, ಕಚೇರಿಗೆ ಬೀಗಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆ ಗ್ರೇಡ್-1ರ ಸಹಾಯಕ ನಿರ್ದೇಶಕಿ ಮೋನಮ್ಮ ಸುತಾರ ಲಿಖೀತ ಭರವಸೆ ನೀಡಿ, ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ಕಾಲಾವಕಾಶ ನೀಡಬೇಕು ಎಂದು ಭರವಸೆ ನೀಡಿದ ಮೇಲೆ ಕಾರ್ಯಕರ್ತರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಕ್ರಾಂತಿದಳ ಅಧ್ಯಕ್ಷ ವೆಂಕಟೇಶ ಪಿ. ರಾಠೊಡ, ಪ್ರೇಮ, ಆಕಾಶ, ಅವಿನಾಶ, ಪವನ್, ಕರಣ , ಪೃಥ್ವಿ, ರೋಹಿತ್, ವಿಶಾಲ, ಪಂಕಜ, ರೋಹನ್, ಪರಮೇಶ್ವರ ಸಾವನ, ರೈತ ಮುಖಂಡ ಶ್ರೀಧರ ಕಟಂಬಲೆ ಮತ್ತಿತರರು ಪಾಲ್ಗೊಂಡಿದ್ದರು.